ರಬಕವಿ-ಬನಹಟ್ಟಿ ನಗರದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯರ್ತರು ಪ್ರತಿಭಟನೆ ನಡೆಸಿದರು. ರಾಜೇಂದ್ರ ಭದ್ರನ್ನವರ, ಸಮರ್ಥ ಕೊಣ್ಣೂರ, ಡಾ. ರವಿ ಜಮಖಂಡಿ, ನೀಲಕಂಠ ಮುತ್ತೂರ ಇದ್ದರು.
- ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
- ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಚಾರ್ಜ್ ಖಂಡನೆ
- ಈಶ್ವರಲಿಂಗ ಮೈದಾನದಿಂದ ತಹಸೀಲ್ದಾರ ಕಚೇರಿವರೆಗೆ ಎನ್‌ಎಸ್‌ಯುಐ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ರಬಕವಿ-ಬನಹಟ್ಟಿ : ನೀಟ್ ಪರೀಕ್ಷೆ ಕುರಿತು ನಡೆದಿರುವ ಅಕ್ರಮ ಪ್ರಶ್ನಿಸಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಗಾರರ ಮೇಲೆ ಪೊಲೀಸರ ಲಾಠಿ ಚಾರ್ಜ್ ಮಾಡಿರುವುದು ಖಂಡಿಸಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಚಿವ ಧರ್ಮೇಂದ್ರ ಪ್ರದಾನ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ನಗರದಲ್ಲಿ ಬುಧವಾರ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಈಶ್ವರಲಿಂಗ ಮೈದಾನದಿಂದ ತಹಸೀಲ್ದಾರ ಕಚೇರಿವರೆಗೆ ಎನ್‌ಎಸ್‌ಯುಐ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಕೈ ಕಾರ್ಯಕರ್ತರು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ರಾಜು ಭದ್ರನ್ನವರ ಮಾತನಾಡಿ, ವಿದ್ಯಾರ್ಥಿಗಳ ನೇತೃತ್ವದಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿರುವುದು ಖಂಡನೀಯ. ಶಾಂತಿಯುತವಾಗಿ ಪ್ರತಿಭಟನೆ ಮಾಡುವುದು ಸಂವಿಧಾನ ಬದ್ಧ ಹಕ್ಕು, ಅದನ್ನು ಹತ್ತಿಕ್ಕುವ ಹುನ್ನಾರ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಾಯಕರು, ವಿದ್ಯಾರ್ಥಿಗಳ ಧ್ವನಿಯನ್ನು ಬಲ ಪ್ರಯೋಗದಿಂದ ಮಣಿಸಲು ಸಾಧ್ಯವಿಲ್ಲ. ಇಂದು ಯುವಕರ ಮೇಲೆ ಲಾಠಿ ಬೀಸುವವರಿಗೆ ನಾಳೆ ಸಂವಿಧಾನವೇ ಪಾಠ ಕಲಿಸುತ್ತದೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿನ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಯುವ ಜನರ ಭವಿಷ್ಯದ ಕುರಿತ ಆತಂಕಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಯುವ ಮುಖಂಡ ಸಮರ್ಥ ಕೊಣ್ಣೂರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ, ದೇಶದ ಇತಿಹಾಸದಲ್ಲೇ ಅತ್ಯಂತ ಯುವ ವಿರೋಧಿ ಪ್ರಧಾನಮಂತ್ರಿಯೆಂದು ಆರೋಪಿಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಅನೇಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಂದ ಕೋಟ್ಯಂತರ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸಿದ್ದರೂ, ತಪ್ಪಿತಸ್ಥರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಮಹಿಳಾ ಪ್ರತಿಭಟನಾಕಾರರ ಮೇಲೂ ಪೊಲೀಸರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಡಾ. ರವಿ ಜಮಖಂಡಿ, ನೀಲಕಂಠ ಮುತ್ತೂರ, ಪಂಡಿತ ಬೋಸಲೆ ಕೇಂದ್ರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಮುಖಂಡರಾದ ಮಲ್ಲಪ್ಪ ಸಿಂಗಾಡಿ, ಸುರೇಶ ಪಾಟೀಲ, ಶೇಖರ ಹಕ್ಕಲದಡ್ಡಿ, ಕಿರಣ ಕರಲಟ್ಟಿ, ನಾರಾಯಣ ನಿಕ್ಕಂ, ಸಂಗಮೇಶ ಮಡಿವಾಳ, ಬಸಯ್ಯ ಉಳವಿಮಠ, ಬರಮು ಉಳ್ಳಾಗಡ್ಡಿ, ರಾಜು ಬಗನಾಳ, ಇರ್ಷಾದ ಮೋಮಿನ್, ರೇಖಾ ಮಡ್ಡಿಮನಿ, ವಿದ್ಯಾ ಬಿಳ್ಳೂರ, ಸಂಗೀತಾ ಖಾನಾಪುರ, ಯೂನಸ್ ಚೌಗಲಾ ಸೇರಿ ಇತರರಿದ್ದರು.