ಬಾಗಲಕೋಟೆ ನವನಗರದ ಸೆಕ್ಟರ್ ನಂ. 47ರ ರಾಜ್ಯ ಬೀಜ ನಿಗಮದಿಂದ ಹೊರ ಬರುವ ಅಧಿಕ ಶಬ್ದವನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿ ಮುಚಖಂಡಿ ಅತಿಥಿ ಬಡಾವಣೆ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿ, ನಿಗಮದ ವ್ಯವಸ್ಥಾಪಕ ಆಶೀಪ್ ಅವರಿಗೆ ಮನವಿ ಸಲ್ಲಿಸಿದರು. ನ್ಯಾಯವಾದಿ ಎಸ್.ಪಿ. ಹೂವಿನಹಳ್ಳಿ, ಎಂ.ಎಲ್. ಅಂಬಿಗೇರ, ದ್ರಾಕ್ಷಾಯಣಿ ಹೆರಕಣ್ಣವರ, ಈರವ್ವ ಬಣಕಾರ, ಚಂದ್ರವ್ವ ಅಂತಾಪುರ, ಬಸಪ್ಪ ಶಿಕ್ಕೇರಿ ಇತರರಿದ್ದರು.
- ಅತಿಥಿ ಬಡಾವಣೆ ನಿವಾಸಿಗಳಿಂದ ಪ್ರತಿಭಟನೆ
- ಯಂತ್ರಗಳ ಸದ್ದಿಗೆ ತೊಂದರೆ
ಬಾಗಲಕೋಟೆ: ನವನಗರದ ಸೆಕ್ಟರ್ ನಂ. 47 ರಲ್ಲಿರುವ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿರುವ ಯಂತ್ರಗಳಿಂದ ಆಗುತ್ತಿರುವ ಶಬ್ದ ಮಾಲಿನ್ಯ ನಿಯಂತ್ರಣ ಮಾಡಬೇಕು ಎಂದು ಒತ್ತಾಯಿಸಿ ಮುಚಖಂಡಿ ಅತಿಥಿ ಬಡಾವಣೆ ನಿವಾಸಿಗಳು ಬೀಜ ನಿಗಮದ ಸಂಸ್ಕರಣಾ ಘಟಕದ ಮುಂದೆ ಬುಧವಾರ ಪ್ರತಿಭಟನೆ ನಡೆಸಿ, ನಿಗಮದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ರೇಣುಕಾ ಹೂವಿನಹಳ್ಳಿ ಮಾತನಾಡಿ, ಮುಚಖಂಡಿ ಅತಿಥಿ ಬಡಾವಣೆಗೆ ಹೊಂದಿಕೊಂಡಿರುವ ಬೀಜ ನಿಗಮದ ಸಂಸ್ಕರಣಾ ಘಟಕದಿಂದ ನಿತ್ಯ ಬೆಳಗ್ಗೆಯಿಂದ ಸಂಜೆವರೆಗೂ ಅಧಿಕ ಶಬ್ದದಿಂದ ಮನೆಯಲ್ಲಿ ಇರಲು ಕಿರಿಕಿರಿ ಅನುಭವಿಸುವಂತಾಗಿದೆ. ಮನೆಯಲ್ಲಿ ವೃದ್ಧರು ಕಿವಿಯಲ್ಲಿ ಹತ್ತಿಯನ್ನು ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಬಾಗಿಲು ಹಾಕಿದರೂ ಅಽಕ ಶಬ್ದ ಕೇಳಿಸುತ್ತದೆ. ಈ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರು, ಕೃಷಿ ಇಲಾಖೆ ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ರೇಣುಕಾ ಹೆರಕಣ್ಣವರ ಮಾತನಾಡಿ, ನಿರಂತರ ಶಬ್ದ ಮಾಲಿನ್ಯದಿಂದಾಗಿ ಮನೆಯಲ್ಲಿ ಮಕ್ಕಳು ಅಭ್ಯಾಸ ಮಾಡಲು ತೊಂದರೆ ಆಗುತ್ತಿದೆ. ಪರೀಕ್ಷೆಗಳು ಬಂದಿದ್ದು, ಮಕ್ಕಳು ಪರೀಕ್ಷೆ ತಯಾರಿ ಮಾಡಿಕೊಳ್ಳಲು ಆಗುತ್ತಿಲ್ಲ. ಇದರಿಂದ ಅವರ ಶೈಕ್ಷಣಿಕ ಪ್ರಗತಿಗೆ ಅಡ್ಡಿ ಆಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು 15 ದಿನಗಳಲ್ಲಿ ಶಬ್ದ ಮಾಲಿನ್ಯ ನಿಯಂತ್ರಿಸದಿದ್ದರೆ ಬೀಜ ನಿಗಮದ ಕಚೇರಿ ಮುಂದೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಕೀಲರಾದ ಎಸ್.ಪಿ. ಹೂವಿನಹಳ್ಳಿ ಮಾತನಾಡಿ, ಶಬ್ದ ಮಾಲಿನ್ಯಕ್ಕೆ ಕಡಿವಾಣ ಹಾಕುವಂತೆ ನಿಗಮದಲ್ಲಿರುವ ವ್ಯವಸ್ಥಾಪಕರ ಗಮನಕ್ಕೆ ತಂದರೂ ಇದುವೆರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಜನವಸತಿ ಪ್ರದೇಶದಲ್ಲಿ ಇಷ್ಟೊಂದು ಯಂತ್ರದ ಶಬ್ದ ಬರುತ್ತಿದ್ದರೂ ಅದಕ್ಕೆ ಪರ್ಯಾಯ ಮಾರ್ಗವನ್ನು ಇಲ್ಲಿಯ ಅಽಕಾರಿಗಳು ಕೈಗೊಂಡಿಲ್ಲ ಎಂದು ದೂರಿದರು.
ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ಆಶೀಪ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿ, ಪ್ರತಿಗಳನ್ನು ಕೃಷಿ ಸಚಿವ ಚೆಲುವರಾಯಸ್ವಾಮಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸಿದರು.
ಪ್ರತಿಭಟನೆಯಲ್ಲಿ ನ್ಯಾಯವಾದಿ ಎಸ್.ಪಿ. ಹೂವಿನಹಳ್ಳಿ, ಎಂ.ಎಲ್. ಅಂಬಿಗೇರ, ದ್ರಾಕ್ಷಾಯಣಿ ಹೆರಕಣ್ಣವರ, ಈರವ್ವ ಬಣಕಾರ, ಚಂದ್ರವ್ವ ಅಂತಾಪುರ, ಬಸಪ್ಪ ಶಿಕ್ಕೇರಿ, ಡಿ.ವಿ.ಹೆರಕಣ್ಣವರ, ಲಕ್ಷ್ಮಣವ್ವ ನೀರಲಕೇರಿ, ಪಿ.ಜಿ. ಹೆರಕಣ್ಣವರ, ಬಸಗಂಗವ್ವ ಗಾಣಿಗೇರ, ರೇಣುಕಾ ಗಾಣಿಗೇರ, ಗುರುಸಿದ್ದವ್ವ ಅಂಬಲಿಕೊಪ್ಪ, ಎಸ್.ಎಸ್. ಹಿರೇಮಠ, ಎಂ.ಎಲ್. ಅಂಬಿಗೇರ, ಸುನಂದ ಗಾಣಿಗೇರ, ಮಲ್ಲವ್ವ ಗಾಣಿಗೇರ , ಸಿ.ಎಸ್. ರಾಯಚೂರ ಭಾಗವಹಿಸಿದ್ದರು.