ರಬಕವಿ-ಬನಹಟ್ಟಿ ಸಂಪರ್ಕ ರಸ್ತೆಯ ಮಧ್ಯಭಾಗದಲ್ಲಿರುವ ಕಾಡಸಿದ್ಧೇಶ್ವರ ದೇವಸ್ಥಾನದ ಇಳಿಜಾರು ಪ್ರದೇಶದಲ್ಲಿ ಗಲೀಜಿನಿಂದ ತುಂಬಿರುವ ಬೃಹತ್ ಹಳ್ಳ.
- ಬನಹಟ್ಟಿ ನಗರದ ತ್ಯಾಜ್ಯ ಸಂಗ್ರಹಣೆಯ ಕೇಂದ್ರವಾಗಿ ಮಾರ್ಪಾಡು
- ಮಾಲಿನ್ಯ ನೀರು ಸಂಗ್ರಹಣೆ
- ದುರ್ವಾಸನೆಗೆ ಜನತೆ ತತ್ತರ
ರಬಕವಿ/ಬನಹಟ್ಟಿ: ಅವಳಿ ನಗರಗಳಾಗಿ ತಾಲೂಕು ಕೇಂದ್ರದ ಸ್ಥಾನ ಪಡೆದಿದ್ದರೂ ಮೂಲ ಸ್ವಚ್ಛತೆ ಕಡೆ ನಿರ್ಲಕ್ಷ್ಯ ಮುಂದುವರಿದಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ. ನಗರದ ಹೃದಯ ಭಾಗದಲ್ಲಿರುವ ಕಾಡಸಿದ್ಧೇಶ್ವರ ದೇವಸ್ಥಾನದ ಇಳಿಜಾರು ಪ್ರದೇಶದಲ್ಲಿ ಹಾದು ಹೋಗುವ ಬೃಹತ್ ಹಳ್ಳ ಗಲೀಜಿನಿಂದ ತುಂಬಿ ದುರ್ವಾಸನೆ ಬೀರುತ್ತಿದ್ದು, ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಳ್ಳದ ಸ್ವಚ್ಛತೆ ಬಗ್ಗೆ ಹಲವು ವರ್ಷಗಳಿಂದ ಯಾವುದೇ ಕ್ರಮ ಕೈಗೊಳ್ಳದ ಕಾರಣ ಗಿಡಗಂಟಿಗಳು ಬೆಳೆದು ನೀರಿನ ಹರಿವು ಅಡ್ಡಿಯಾಗಿದ್ದು, ತ್ಯಾಜ್ಯ ಸಂಗ್ರಹಣೆಯ ಕೇಂದ್ರವಾಗಿ ಮಾರ್ಪಟ್ಟಿದೆ. ನಗರದ ಮನೆಮಾಲಿನ್ಯ ಹಾಗೂ ಕೈಗಾರಿಕಾ ತ್ಯಾಜ್ಯ, ವಿಶೇಷವಾಗಿ ನೂಲಿನ ಬಣ್ಣದ ರಾಸಾಯನಿಕ ನೀರು ಸಹ ಇದೇ ಹಳ್ಳಕ್ಕೆ ಸೇರುತ್ತಿರುವುದು ಪರಿಸರಕ್ಕೆ ಅಪಾಯಕಾರಿಯಾಗಿದೆ.
ಇದೇ ಪ್ರದೇಶದ ಸುತ್ತಮುತ್ತ ಆಸ್ಪತ್ರೆಗಳು, ಸರ್ಕಾರಿ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳು ಇರುವುದರಿಂದ ಆರೋಗ್ಯದ ದೃಷ್ಟಿಯಿಂದ ಸಮಸ್ಯೆ ಗಂಭೀರವಾಗಿದೆ. ಜೊತೆಗೆ, ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಕೆಲ ವ್ಯಾಪಾರಿಗಳು ಮಾಂಸದ ತ್ಯಾಜ್ಯವನ್ನು ಹಳ್ಳಕ್ಕೆ ಎಸೆಯುತ್ತಿರುವುದು ದುರ್ವಾಸನೆಗೆ ಮತ್ತಷ್ಟು ಕಾರಣವಾಗಿದೆ. ಇದರಿಂದಾಗಿ ರಸ್ತೆ ಬಳಕೆದಾರರು ಸಂಕಷ್ಟ ಅನುಭವಿಸುವಂತಾಗಿದೆ.
ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹಳ್ಳದ ಸ್ವಚ್ಛತೆಗೆ ಸಮಗ್ರ ಯೋಜನೆ ರೂಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.