ಇಳಕಲ್ಲ ಎಪಿಎಂಸಿ ಲಕ್ಷ್ಮೀ ನಗರದ ನಿವಾಸಿಗಳು ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ನಗರಸಭೆ ಕಚೇರಿಗಳಿಗೆ ಬೀಗ ಜಡಿದು ಪ್ರತಿಭಟಿಸಿದರು. ವಿಜಯ ಹಿರೇಮಠ, ದೊಡ್ಡಪ್ಪ ಕವಡಿಮಟ್ಟಿ, ಎಂ.ಆರ್. ಪಾಟೀಲ, ಮಹಾಂತಯ್ಯ ವೀರಾಪೂರಮಠ, ಆನಂದ ರಾಠೋಡ, ನಾಗರಾಜ ಆಲಕುಂಟಿ, ಅನವೇಶ ದೊಡ್ಡಮನಿ ಇದ್ದರು.
- ನಗರಸಭೆಗೆ ಬೀಗ ಜಡಿದು ಪ್ರತಿಭಟನೆ
- ಮಧ್ಯರಾತ್ರಿ ನೀರು ಹರಿಸೋದು ಸರಿನಾ?
ಇಳಕಲ್ಲ: ಕಳೆದ 20 ದಿನಗಳಿಂದ ಕುಡಿಯುವ ನೀರನ್ನು ಸರಿಯಾಗಿ ಪೂರೈಕೆ ಮಾಡಿಲ್ಲ ಎಂದು ಆಕ್ರೋಶಗೊಂಡ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.
ನಗರದ ಎಪಿಎಂಸಿ ಲಕ್ಷ್ಮೀ ನಗರದಲ್ಲಿ ಸರಿಯಾಗಿ 24*7 ಕುಡಿಯುವ ನೀರು ಪೂರೈಕೆಮಾಡುತ್ತಿಲ್ಲ, ನೀರು ಬೀಡಿ ಎಂದರೆ ಬರೀ ಸಬೂಬು ಹೇಳುತ್ತಾ ನಮ್ಮ ನೀರಿನ ದಾಹ ತೀರಿಸುತ್ತಿಲ್ಲ. ಅಧಿಕಾರಿಗಳಿಗೆ ವಿನಂತಿ ಮಾಡಿ ಬೇಸತ್ತು ಈಗ ನಗರಸಭೆಗೆ ಬಂದಿದ್ದೇವೆ. ನಮ್ಮಗೆ ನೀರು ಪೂರೈಕೆ ಆಗುವವರೆಗೂ ನಾವು ನಗರಸಭೆ ಕೊಠಡಿಗಳ ಬೀಗ ತೆಗೆಯುವುದಿಲ್ಲ. ಸ್ಥಳಕ್ಕೆ ನಗರಸಭೆ ಆಯುಕ್ತರು ಬರಬೇಕು, ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಇಳಕಲ್ ನಗರದಲ್ಲಿನ 24*7 ನಿರಂತರ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ. ಬೆಳಗ್ಗೆ ನೀರು ಸರಬರಾಜು ಮಾಡುವುದಿಲ್ಲ. ಮಧ್ಯರಾತ್ರಿ ನೀರು ಸರಬರಾಜು ಮಾಡುತ್ತಾರೆ. ಹೀಗೆ ಮಾಡಿದರೇ ಹೇಗೆ, ನಿದ್ದೆ ಮಾಡಬೇಕಾ? ಇಲ್ಲವಾ ನೀರಿಗಾಗಿ ಕಾದು ಕುಳಿದುಕೊಳ್ಳಬೇಕಾ? ಹೇಳಿ ಅಂತ ಪ್ರಶ್ನೆಗಳ ಸುರಿಮಳೆಗೈದರು.
ನಗರಸಭೆ, ಸರ್ಕಾರದಲ್ಲಿ ಹಣ ಇಲ್ಲ ಅಂದ್ರೇ ನಾವೇ ಹಣ ಸಂಗ್ರಹಿಸಿ ಪಂಪ್ ಮೋಟಾರ್ ಖರೀದಿ ಮಾಡಿ ತಂದುಕೊಡುತ್ತೇವೆ. ಅದು ಬಿಟ್ಟು ನಿತ್ಯವು ಸಂಕಟ ಪಡುವಂತೆ ಮಾಡುವುದು ತರವಲ್ಲ ಎಂದು ತಿಳಿಸಿದರು.
ನಗರಸಭೆ ಆಯುಕ್ತ ಶ್ರೀನಿವಾಸ ಜಾಧವ ಭೇಟಿ ನೀಡಿ, 24*7 ಕುಡಿಯುವ ನೀರು ಯೋಜನೆ 2021, 2022ರಲ್ಲಿ ಪೂರ್ಣಗೊಂಡಿದೆ. ಹೆಚ್ಚಿನ ಸಾಮರ್ಥ್ಯದ ಪಂಪ ಅಳವಡಿಸಬೇಕಿದೆ. ಶಾಸಕರು ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಈಗಾಗಲೇ ಟೆಂಡರ್ ಕರೆದು ಹೊಸ ಮಸೀನ್ ಕೆಲಸ ಆರಂಭವಾಗಿದೆ. 4-5 ತಿಂಗಳಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ ಬಳಿಕ ಹೋರಾಟಗಾರರು ಪ್ರತಿಭಟನೆ ವಾಪಸ್ ಪಡೆದರು.
ವಿಜಯ ಹಿರೇಮಠ, ದೊಡ್ಡಪ್ಪ ಕವಡಿಮಟ್ಟಿ, ಎಂ.ಆರ್. ಪಾಟೀಲ, ಮಹಾಂತಯ್ಯ ವೀರಾಪೂರಮಠ, ಆನಂದ ರಾಠೋಡ, ನಾಗರಾಜ ಆಲಕುಂಟಿ, ಅನವೇಶ ದೊಡ್ಡಮನಿ, ಸಕ್ರಪ್ಪ ಸವದತ್ತಿ, ಮಹಾಂತಪ್ಪ ಶೆಟ್ಟರ, ಈರಣ್ಣ ಬಡಿಗೇರ, ಮಹಾಲಿಂಗಪ್ಪ ಕೂಡ್ಲೂರು, ಮುತ್ತು ಕರಡಿ, ಜಯಶ್ರೀ ಹುಚನೂರ, ರೇಖಾ ಸಾವಳಕಿ, ಗಾಯತ್ರಿ ಗೋನಾಳ, ಸೌಮ್ಯ ಮೇದಾರ, ಕವಿತಾ ಕೊಳ್ಳೂರ ಇದ್ದರು.