ಬಾಗಲಕೋಟೆಯಲ್ಲಿ ಈಚೆಗೆ ಶಿವಾಜಿ ಜಯಂತಿ ಮೆರವಣಿಗೆ ವೇಳೆಯ ಕಲ್ಲು, ಚಪ್ಪಲಿ ತೂರಾಟ ಹಾಗೂ ಮುಸ್ಲಿಂ ಯುವಕರನ್ನು ಪ್ರಚೋದಿಸಿದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಕೆಎಂಯು ಮುಖಂಡರು ಮನವಿ ಸಲ್ಲಿಸಿದರು.
- ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ ಕೆಎಂಯು ಮನವಿ
- ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣ
- ಮುಸ್ಲಿಂ ಸಮುದಾಯವನ್ನು ಪ್ರಚೋದನೆಗೆ ಒಳಪಡಿಸಿದ ಹಿಂದೂ ಸಂಘಟನೆಗಳ ಸಂಘಟಕರ ಮೇಲೆ ಕಾನೂನು ಕ್ರಮ
ಬಾಗಲಕೋಟೆ: ನಗರದಲ್ಲಿ ಈಚೆಗೆ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯವನ್ನು ಪ್ರಚೋದನೆಗೆ ಒಳಪಡಿಸಿದ ಹಿಂದೂ ಸಂಘಟನೆಗಳ ಸಂಘಟಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಹಾಗೂ ರಾತ್ರಿ ವೇಳೆ ಡಿಜೆ ಬಳಕೆ ಮತ್ತು ಮೆರವಣಿಗೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ಮುಸ್ಲಿಂ ಯೂನಿಟಿ ಆಗ್ರಹಿಸಿದೆ.
ಘಟನೆ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿರುವ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗವನ್ನು ಮಂಗಳವಾರ ಭೇಟಿ ಮಾಡಿದ ಕೆಎಂಯು ಸದಸ್ಯರು ಮನವಿ ಸಲ್ಲಿಸಿ, ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಫೆ. 19ರಂದು ಶಿವಾಜಿ ಜಯಂತಿ ಮೆರವಣಿಗೆ ವೇಳೆ ರಾತ್ರಿ ಪಂಕಾ ಮಸೀದಿ ಹತ್ತಿರ ನಡೆದ ಕಲ್ಲು ತೂರಾಟ ಮತ್ತು ಚಪ್ಪಲಿ ಎಸೆದ ಘಟನೆ ಆಕಸ್ಮಿಕವಲ್ಲ, ಅದೊಂದು ಪೂರ್ವ ನಿಯೋಜಿತ ಘಟನೆಯಾಗಿದೆ. ಮೆರವಣಿಗೆ ರಸ್ತೆಗುಂಟ ಸಾರಾಗವಾಗಿ ಸಾಗದೆ ಪಂಕಾ ಮಸೀದಿ ಹತ್ತಿರ ಸುಮಾರು ಹೊತ್ತು ಕರ್ಕಶ ಧ್ವನಿ ಹೊಂದಿದ ಡಿಜೆ ಬಳಸಿ ಮುಸ್ಲಿಂ ಸಮುದಾಯ ಪ್ರಚೋದನೆಗೆ ಒಳಪಡುವ, ನಿಷೇಧಿಸಲ್ಪಟ್ಟ ಹಾಡನ್ನು ಹಾಕಿ ರಂಜಾನ ಮಾಸದ ವಿಶೇಷ ಪ್ರಾರ್ಥನೆ ಮಾಡುತ್ತಿರುವ ಜನರಿಗೆ ಭಂಗ ತಂದು ಪೊಲೀಸರ ಮೇಲೆ ಉದ್ದೇಶಪೂರ್ವಕ ಕಲ್ಲು ತೂರಿರುವುದು ಪೂರ್ವ ನಿಯೋಜಿತ ಸಂಚು ಆಗಿದೆ. ಈ ಬಗ್ಗೆ ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಮನವಿಯಲ್ಲಿ ಆಗ್ರಹಿಸಿದೆ.
ಮೆರವಣಿಗೆಗೆ ರಾತ್ರಿ 10 ಗಂಟೆ ನಂತರವೂ ಪರವಾನಗಿ ಕೊಟ್ಟಿದ್ದು ಎಷ್ಟು ಸರಿ? ಮಸೀದಿಯ ಸ್ಥಳದಲ್ಲಿ ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಕೊಮು ಗಲಭೆಗಳು ಉಂಟಾಗಿದ್ದರೂ ಪೊಲೀಸ್ ಇಲಾಖೆ ಮತ್ತು ಇಂಟಲಿಜನ್ಸ್ ಪೂರ್ವಸಿದ್ಧತೆ ಮಾಡಿಕೊಳ್ಳದೆ ಮೆರವಣಿಗೆಗೆ ಅವಕಾಶಕೊಟ್ಟಿದ್ದು ಏಕೆ? ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಹಿಂದೂ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಇದ್ದರೂ ಪೊಲೀಸ್ ಇಲಾಖೆ ಮಸೀದಿ ಹತ್ತಿರ ಹೆಚ್ಚಿನ ಪೊಲೀಸ್ ಕಾವಲು ಹಾಕಿರಲಿಲ್ಲ ಏಕೆ? ರಂಜಾನ ಮಾಸದಲ್ಲಿ ರಾತ್ರಿ ಪ್ರಾರ್ಥನೆಗೆ ನೂರಾರು ಸಂಖ್ಯೆಯ ಮುಸ್ಲಿಂರು ಸೇರಿರುತ್ತಾರೆ ಎಂಬ ಮಾಹಿತಿ ಇಲಾಖೆಗೆ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮಸೀದಿ ಒಳಗಡೆಯಿಂದ ಚಪ್ಪಲಿ ತೂರಿ ಬಂದಿರುವ ವಿಡಿಯೋ ತುಣುಕು ಕಂಡು ಬಂದಿರುವುದು ಸರಿ ಅಷ್ಟೇ. ಚಪ್ಪಲಿ ತೂರಿರುವ ವ್ಯಕ್ತಿಗೆ ಕಾನೂನು ಕ್ರಮಕ್ಕೊಳಪಡಿಸಲಿ. ಆದರೆ, ರಂಜಾನ್ ಪ್ರಾರ್ಥನೆಗೆ ಬಂದ ಅಮಾಯಕ ಯುವಕರ ಬಂಧನ ಅತ್ಯಂತ ಖಂಡನಾರ್ಹ ವಿಷಯವಾಗಿದ್ದು ಕೂಡಲೇ ಬಿಡುಗಡೆಯ ಕ್ರಮವಾಗಬೇಕು. ಇನ್ನು ಎಸ್ಪಿ ಸಿದ್ಧಾರ್ಥ ಗೋಯಲ್ ತಲೆಗೆ ಬಡಿದಿರುವ ಕಲ್ಲು ಯಾವ ಕಡೆಯಿಂದ ತೂರಿ ಬಂತು ಎಂಬ ಬಗ್ಗೆ ಗಂಭೀರ ತನಿಖೆಯಾಗಬೇಕು.
ತರಕಾರಿ ಮಾರುಕಟ್ಟೆಯಲ್ಲಿ ಮುಸ್ಲಿಂರಿಗೆ ಸಂಬಂಧಿಸಿದ ತಳ್ಳುವ ಗಾಡಿಗೆ ಹಿಂದೂ ಸಂಘಟನೆಗಳ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರೂ ಸ್ವಯಂಪ್ರೇರಿತ ದೂರು ದಾಖಲಿಸಲು 2-3 ದಿನದ ಒತ್ತಾಯದ ನಂತರ ದೂರು ದಾಖಲಾಗಿದೆ ಈ ಬಗ್ಗೆ ತನಿಖೆಯಾಗಬೇಕು ಎನ್ನುವುದು ಸೇರಿ ಅನೇಕ ವಿಚಾರಗಳನ್ನು ಮನವಿಯಲ್ಲಿ ಪ್ರಸ್ತಾಪಿಸಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.