ಬಾಗಲಕೋಟೆ ನಗರದ ವಿದ್ಯಾಗಿರಿ ವಿಪ್ರ ರಾಘವೇಂದ್ರಸ್ವಾಮಿಗಳ ಮಠದ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ನಾದಬ್ರಹ್ಮ ವಿಠ್ಠಲೋತ್ಸವ ಕಾರ್ಯಕ್ರಮದಲ್ಲಿ ಪಂ. ವೆಂಕಟೇಶಕುಮಾರ ಅವರ ಗಾಯನ ಗಮನ ಸೆಳೆಯಿತು. 
ಬಾಗಲಕೋಟೆ

ನಾಡಿಗೆ ದಾಸರ ಕೊಡುಗೆ ಸ್ಮರಣೀಯ

ಪ್ರಮುಖ ಮುಖ್ಯಾಂಶಗಳು

  • ಶ್ರೀ ರಘು ವಿಜಯತೀರ್ಥ ಸ್ವಾಮೀಜಿ ಭಾಗಿ
  • ನಾದಬ್ರಹ್ಮ ವಿಠ್ಠಲೋತ್ಸವಕ್ಕೆ ಚಾಲನೆ
  • ಪುರಂದರದಾಸರು ಸಕಲ ಜೀವಗಳ ಬಗ್ಗೆ ಸಾಹಿತ್ಯ ರಚಿಸಿದ್ದಾರೆ.
ಬಾಗಲಕೋಟೆ: ನಾರದರೇ ಸ್ವತಃ ಪುರಂದರ ದಾಸರಾಗಿ ಜನ್ಮ ತಾಳಿ ಲೋಕಕ್ಕೆ ಸಾಹಿತ್ಯ, ಸಂಗೀತ ಉಣಬಡಿಸಿದ್ದಾರೆ ಎಂದು ಹುಬ್ಬಳ್ಳಿಯ ಖ್ಯಾತ ಪ್ರವಚನಕಾರ ಪಂ. ಪ್ರದ್ಯುಮ್ನಾಚಾರ್ಯ ಜೋಶಿ ಹೇಳಿದರು.
ಇಲ್ಲಿನ ವಿದ್ಯಾಗಿರಿ ವಿಪ್ರ ರಾಘವೇಂದ್ರಸ್ವಾಮಿಗಳ ಮಠದ ಆವರಣದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ನಾದಬ್ರಹ್ಮ ವಿಠ್ಠಲೋತ್ಸವದಲ್ಲಿ ಪ್ರವಚನ ನೀಡಿದ ಅವರು, ಪುರಂದರದಾಸರು ಸಕಲ ಜೀವಗಳ ಬಗ್ಗೆ ಸಾಹಿತ್ಯ ರಚಿಸಿದ್ದಾರೆ. ಉದಾಹರಣೆ ಎಂಬಂತೆ ನಾಯಿಯ ಬಗ್ಗೆಯೂ ಕೂಡ ಸಾಹಿತ್ಯ ರಚಿಸಿ ಹಾಡುಗಳನ್ನು ಹಾಡಿದ್ದಾರೆ. ನಿಂದಿಸುವರು ಇದ್ದಾಗಲೇ ಎಚ್ಚರವಾಗುತ್ತದೆ. ಸಜ್ಜನರಿಗೆ ಬೆಲೆ ಬರುವುದು ನಿಂದಕರಿಂದ. ನಮ್ಮಲ್ಲಿರುವ ಅಹಂ ಅವರು ಕಸಿದುಕೊಂಡರೇ, ಹೊಗಳುವವರು ನಮ್ಮ ಪುಣ್ಯ ಕಸಿದುಕೊಳ್ಳುತ್ತಾರೆ ಎಂದರು.
ಶನಿವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ನಾದಬ್ರಹ್ಮ ವಿಠ್ಠಲೋತ್ಸವಕ್ಕೆ ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲಸಂಸ್ಥಾನ ಶ್ರೀ ಕೂಡಲಿ ಆರ್ಯ ಅಕ್ಷೋಭ್ಯತೀರ್ಥ ಮಠದ ರಘುವಿಜಯತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿದರು.
ಪಂ. ರಘೋತ್ತಮಾಚಾರ್ಯ ನಾಗಸಂಗಿ, ಪಂ. ಭೀಮಸೇನಾಚಾರ್ಯ ಪಾಂಡುರಂಗಿ, ಪಂ. ಬಿಂದುಮಾಧವಾಚಾರ್ಯ ನಾಗಸಂಪಗಿ, ಪಂ. ಆದಿಶೇಷಾಚಾರ್ಯ ಯಲಗೂರ, ಪಂ. ವಿಜಯೇಂದ್ರಾಚಾರ್ಯ ಯತ್ನಟ್ಟಿ, ವೇ.ಮೂ. ಮಧ್ವೇಶಾಚಾರ್ಯ ಹಿಪ್ಪರಗಿ, ಮುಖಂಡ ಮಲ್ಲಿಕಾರ್ಜುನ ಮೇಟಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ನರಸಿಂಹ ಆಲೂರ, ಕಾರ್ಯದರ್ಶಿ ಎಸ್.ಕೆ. ಕುಲಕರ್ಣಿ ಇದ್ದರು.
ಮುಖಂಡರಾದ ಸಂತೋಷ ಗದ್ದನಕೇರಿ, ವಿನಾಯಕ ತಾಳಿಕೋಟಿ, ಪೂರ್ಣಪ್ರಜ್ಞ ಯುವಕ ಮಂಡಳಿ ಅಧ್ಯಕ್ಷ ಪವನ ಮಂಕಣಿ, ಕೇಶವ ಕುಲಕರ್ಣಿ, ವಿಷ್ಣು ಜೋಶಿ, ಪ್ರವೀಣ ಮಂಕಣಿ, ಸುನೀಲ ಮಠ, ಭರತ ಆಲೂರ, ಅನಂತ ಉಮರ್ಜಿ, ಅನೂಪ್ ಕುಲಕರ್ಣಿ,ನವೀನ ಕಟ್ಟಿ ಮತ್ತಿತರರು ನೇತೃತ್ವ ವಹಿಸಿದ್ದರು.

ಪಂ. ವೆಂಕಟೇಶಕುಮಾರ ಗಾಯನಕ್ಕೆ ಭಕ್ತಿಯ ಸಿಂಚನ

ನಾದಬ್ರಹ್ಮ ವಿಠ್ಠಲೋತ್ಸವದಲ್ಲಿ ಕೃಷ್ಣಾಜಿ ಕ್ಷತ್ರೀಯ ಅವರ ಶಹನಾಯಿ ವಾದನ ಗಮನ ಸೆಳೆಯಿತು. ನಂತರ ವಿದುಷಿ ಶುಭದಾ ದೇಶಪಾಂಡೆ ಅವರ ನಿರ್ದೇಶನದಲ್ಲಿ ನಟರಾಜ ಸಂಗೀತ ನೃತ್ಯ ನಿಕೇತನದ ವಿದ್ಯಾರ್ಥಿನಿಯರು ಪ್ರಸ್ತುತಪಡಿಸಿದ ನತ್ಯರೂಪಕವು ರೋಮಾಂಚನಗೊಳಿಸಿತು. ರಾತ್ರಿವರೆಗೆ ನಡೆದ ಪದ್ಮಶ್ರೀ ಪಂ. ವೆಂಕಟೇಶಕುಮಾರ ಅವರ ಗಾಯನ, ಶಾಸ್ತ್ರೀಯ ಸಂಗೀತಕ್ಕೆ ಭಕ್ತಿಯ ಸಿಂಚನ ಮೂಡಿಸಿತು. ಅಭಂಗ, ದಾಸವಾಣಿ ಆಲಿಸಲು ಭಾರಿ ಸಂಖ್ಯೆಯಲ್ಲಿ ಜನ ನೆರೆದಿದ್ದರು. ವೆಂಕಟೇಶ್ವರಕುಮಾರ ಅವರ ಕಂಠದಲ್ಲಿ ತೊರೆದು ಜೀವಿಸಬಹುದೇ ಹರಿನಿನ್ನ ಚರಣಗಳ ಗೀತೆಗೆ ಸಂಗೀತ, ಭಕ್ತಿಯ ಲೋಕವೇ ಅನಾವರಣಗೊಂಡಿತ್ತು.