ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಯ ರಬಕವಿ ಬನಹಟ್ಟಿ ಹೊಸೂರ ಕ್ರಾಸ್ ಮಧ್ಯ ಭಾಗದಲ್ಲಿ ನಿರ್ಮಿಸಲಾಗಿರುವ ಡಿವೈಡರ್. 
ಬಾಗಲಕೋಟೆ

ಹೊಸೂರ ಕ್ರಾಸ್‌ನಲ್ಲಿ ಅಪಾಯಕಾರಿ ಡಿವೈಡರ್

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕರಲ್ಲಿ ಅಪಘಾತದ ಭೀತಿ
  • ಸುರಕ್ಷತೆಗೆ ಆದ್ಯತೆ ನೀಡಲು ನಾಗರಿಕರ ಒತ್ತಾಯ
  • ವೇಗವಾಗಿ ಬರುವ ವಾಹನಗಳು ಡಿವೈಡರ್‌ಗೆ ಡಿಕ್ಕಿ ಹೊಡೆಯುವ ಆತಂಕವಿದೆ.
ರಬಕವಿ/ಬನಹಟ್ಟಿ: ಜಮಖಂಡಿ- ಕುಡಚಿ ರಾಜ್ಯ ಹೆದ್ದಾರಿಯ ಹೊಸೂರ ಕ್ರಾಸ್ ಮಧ್ಯ ಭಾಗದಲ್ಲಿ ನಿರ್ಮಿಸಲಾಗಿರುವ ಡಿವೈಡರ್ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟು ಮಾಡುತ್ತಿದ್ದು, ಅಪಘಾತಗಳಿಗೆ ಆಹ್ವಾನ ನೀಡುವಂತಾಗಿದೆ ಎಂಬ ಆತಂಕ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
ಬನಹಟ್ಟಿ- ಕುಡಚಿ ಮಾರ್ಗವಾಗಿ ಸಂಚರಿಸುವ ವಾಹನಗಳು ಹೊಸೂರ ಗ್ರಾಮದ ಕ್ರಾಸ್ ಬಳಿ ಹಾದು ಹೋಗುವ ಸಂದರ್ಭದಲ್ಲಿ, ಈ ಹಿಂದೆ ಒಂದೇ ರಸ್ತೆಯಾಗಿ ಬಳಸುತ್ತಿದ್ದ ಮಾರ್ಗವನ್ನು ವಿಭಜಿಸಿ ಮಧ್ಯದಲ್ಲಿ ಡಿವೈಡರ್ ನಿರ್ಮಿಸಲಾಗಿದೆ.
ಆದರೆ, ಡಿವೈಡರ್‌ಗೆ ಸಮರ್ಪಕವಾದ ಮುನ್ನೆಚ್ಚರಿಕಾ ಸೂಚನಾ ಲಕಗಳು, ಪ್ರತಿಲಕಗಳು ಹಾಗೂ ರಾತ್ರಿ ವೇಳೆ ಗೋಚರಿಸುವ ವ್ಯವಸ್ಥೆ ಕಲ್ಪಿಸದಿರುವುದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ವಿಶೇಷವಾಗಿ ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರಿಗೆ ಡಿವೈಡರ್ ಸ್ಪಷ್ಟವಾಗಿ ಕಾಣಿಸದಿರುವ ಸಾಧ್ಯತೆ ಇದ್ದು, ವೇಗವಾಗಿ ಬರುವ ವಾಹನಗಳು ಡಿವೈಡರ್‌ಗೆ ಡಿಕ್ಕಿ ಹೊಡೆಯುವ ಆತಂಕವಿದೆ. ಡಿವೈಡರ್ ಜವರಾಯನಂತೆ ವಾಹನ ಸವಾರರನ್ನು ಕಾಯುತ್ತಿರುವಂತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆ ಮಧ್ಯೆ ನೀರು ಸರಬರಾಜು ಮಾಡುವ ಚೇಂಬರ್

ಇದಲ್ಲದೆ, ಎರಡು ರಸ್ತೆಗಳ ಮಧ್ಯಭಾಗದಲ್ಲಿ ನಗರಸಭೆಯ ಕುಡಿಯುವ ನೀರು ಸರಬರಾಜು ಮಾಡುವ ಚೇಂಬರ್ ಕೂಡ ಇದೆ. ರಸ್ತೆಯ ಮಧ್ಯ ಭಾಗದಲ್ಲಿರುವ ಈ ಚೇಂಬರ್‌ನಿಂದ ವಾಹನ ಸಂಚಾರಕ್ಕೆ ಮತ್ತಷ್ಟು ತೊಂದರೆಯಾಗುತ್ತಿದೆ. ನೀರು ಸರಬರಾಜು ವ್ಯವಸ್ಥೆಗೆ ಅಗತ್ಯವಿರುವ ಚೇಂಬರ್ ಅನ್ನು ರಸ್ತೆಯ ಮಧ್ಯದಲ್ಲಿ ನಿರ್ಮಿಸಿರುವ ಬದಲು, ಸುರಕ್ಷಿತ ಸ್ಥಳಕ್ಕೆ ಶಾಶ್ವತವಾಗಿ ಸ್ಥಳಾಂತರಿಸಿ ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪ್ರತಿಲಕಗಳು ಮತ್ತು ಎಚ್ಚರಿಕೆ ಲಕಗಳನ್ನು ಅಳವಡಿಸಿ

ರಸ್ತೆ ಮಧ್ಯಭಾಗದಲ್ಲಿರುವ ಡಿವೈಡರ್ ಹಾಗೂ ನೀರಿನ ಚೇಂಬರ್ ಎರಡೂ ವಾಹನ ಸಂಚಾರಕ್ಕೆ ಅಪಾಯಕಾರಿಯಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ಅಗತ್ಯವಿದ್ದಲ್ಲಿ ಡಿವೈಡರ್ ವಿನ್ಯಾಸವನ್ನು ಬದಲಿಸಿ, ರಸ್ತೆ ಅಗಲಗೊಳಿಸುವುದು ಅಥವಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ರಾತ್ರಿ ವೇಳೆ ಸ್ಪಷ್ಟವಾಗಿ ಕಾಣುವಂತೆ ಪ್ರತಿಲಕಗಳು ಮತ್ತು ಎಚ್ಚರಿಕೆ ಲಕಗಳನ್ನು ಅಳವಡಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ

ಈ ಮಾರ್ಗದಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಅಪಘಾತ ಸಂಭವಿಸಿ ಜೀವ ಹಾನಿಯಾಗುವ ಸಾಧ್ಯತೆ ಇದೆ. ಹೀಗಾಗಿ ಸಂಬಂಧಪಟ್ಟ ಹೆದ್ದಾರಿ ಹಾಗೂ ಸ್ಥಳೀಯ ಆಡಳಿತ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
"

ಜಮಖಂಡಿ-ಕಾಗವಾಡ ರಸ್ತೆ ಅಗಲೀಕರಣ ಕೆಲಸ ಸದ್ಯ ಪ್ರಾರಂಭವಾಗುತ್ತದೆ. ಆ ಯೋಜನೆಯಡಿ ಈ ಡಿವೈಡರ್‌ನ್ನು ರಸ್ತೆಯಂತೆ ಸಮಗೊಳಿಸಿ ಕೆಲವೇ ದಿನಗಳಲ್ಲಿ ಸರಿಮಾಡಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡುತ್ತೇವೆ.
-ಎಸ್.ಆರ್. ಬಂಡಿವಡ್ಡರ ಅಭಿಯಂತ ಲೋಕೋಪಯೋಗಿ ಇಲಾಖೆ ಜಮಖಂಡಿ