ಮುಧೋಳ ತಾಲೂಕಿನ ಬುದ್ನಿ (ಪಿ.ಎಂ) ಗ್ರಾಮದಲ್ಲಿ ನಡೆದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ರಾಮಕಷ್ಣ ದೇವರು ಉದ್ಘಾಟಿಸಿದರು. ಗುರುಪಾದೇಶ್ವರ ಮಹಾಸ್ವಾಮಿಗಳು, ತೋಂಟದಾರ್ಯ ಸ್ವಾಮಿಗಳು ಸೇರಿ ಮಠಾಧೀಶರು ಮತ್ತು ಗಣ್ಯರು ಉಪಸ್ಥಿತರಿದ್ದರು.
- ರಾಮಕಷ್ಣ ದೇವರು ಸಲಹೆ
- ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ
- ಅತಿಯಾದ ಮೊಬೈಲ್ ಬಳಕೆ ಸಮಾಜದ ಜ್ಞಾನಮಟ್ಟವನ್ನು ಕುಗ್ಗಿಸುತ್ತಿದೆ
ಮುಧೋಳ: ಅತಿಯಾದ ಮೊಬೈಲ್ ಬಳಕೆ ಸಮಾಜದ ಜ್ಞಾನಮಟ್ಟವನ್ನು ಕುಗ್ಗಿಸುತ್ತಿದೆ ಎಂದು ವಿಜಯಪುರದ ಖ್ಯಾತ ಪ್ರವಚನಕಾರ ರಾಮಕಷ್ಣ ದೇವರು ಹೇಳಿದರು.
ತಾಲೂಕಿನ ಬುದ್ನಿ (ಪಿ.ಎಂ) ಗ್ರಾಮದಲ್ಲಿ ಕಲ್ಮೇಶ್ವರ ದೇವಸ್ಥಾನದ ನೂತನ ಕಟ್ಟಡ ಉದ್ಘಾಟನೆ ಹಾಗೂ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ 10 ದಿನಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಕಾಲದಲ್ಲಿ ಮೊಬೈಲ್‌ನ ಅತಿಯಾದ ಬಳಕೆಯಿಂದ ಜನರಲ್ಲಿ ಜ್ಞಾನಕ್ಕಿಂತ ಅಜ್ಞಾನವೇ ಹೆಚ್ಚಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಮೊಬೈಲ್ ಬಳಕೆಯನ್ನು ನಿಯಂತ್ರಿಸಿಕೊಂಡು ಸತ್ಕಾರ್ಯಗಳತ್ತ ಗಮನ ಹರಿಸುವುದು ಅಗತ್ಯ ಎಂದು ಹೇಳಿದರು.
ಮಠ-ಮಂದಿರಗಳಿಗೆ ಭೇಟಿ ನೀಡಿ ಆಧ್ಯಾತ್ಮಿಕ ಪ್ರವಚನಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದರ ಜತೆಗೆ ಆಂತರಿಕ ಶುದ್ಧಿ ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಗುರುಪಾದೇಶ್ವರ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಜ್ಞಾನಿಗಳ ಪ್ರವಚನಗಳು ಮನಸ್ಸನ್ನು ಶುದ್ಧಿಗೊಳಿಸಿ ಉತ್ತಮ ಬದುಕಿಗೆ ದಾರಿ ತೋರಿಸುತ್ತವೆ ಎಂದು ಹೇಳಿದರು.
ಗುರುಮಹಾಂತ ಸ್ವಾಮಿಗಳು, ತೋಂಟದಾರ್ಯ ಸ್ವಾಮಿಗಳು, ಗ್ರಾಮದ ಹಿರಿಯರಾದ ಸುಭಾಷ್ ಕೋರಡ್ಡಿ, ಗಂಗಯ್ಯ ಮರೆಗುದ್ದಿ, ರಾಚಣ್ಣ ಕನಬೂರ, ಸದಾಶಿವ ರೆಡ್ಡಿಯೇರಟ್ಟಿ, ಕೈಲಾಸಪತಿ ದಿಗಂಬರಿಮಠ, ಜಗದೀಶ್ ಮರೆಗುದ್ದಿ ಇತರರಿದ್ದರು. ಶ್ರೀಶೈಲಯ್ಯ ಮರೆಗುದ್ದಿ ಪ್ರಾರ್ಥನೆ ಸಲ್ಲಿಸಿದರು. ನಾಗರಾಜ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.