ಬಾಗಲಕೋಟೆಯಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರಚಾರಕ್ಕೆ ಆಗಮಿಸಿದ್ದು, ವಿದ್ಯಾಗಿರಿಯ ಸಭಾಭವನದಲ್ಲಿ ಸಮುದಾಯದ ಜನರ ಸಭೆ ನಡೆಸಿದರು. ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ, ಶಾಸಕರಾದ ಸಿ.ಸಿ. ಪಾಟೀಲ, ಅರವಿಂದ ಬೆಲ್ಲದ, ಮಾಜಿ ಸಚಿವ ಮುರುಗೇಶ ನಿರಾಣಿ, ವೀರಣ್ಣ ಚರಂತಿಮಠ ಮತ್ತಿತರರು ಇದ್ದರು.
- ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ
- ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರದ ಅಖಾಡಕ್ಕೆ
- ಜನತೆಯ ಕೇಕೆ, ಚಪ್ಪಾಳೆಯ ಹರ್ಷೋದ್ಘಾರ
ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ನೈತಿಕ ಹಕ್ಕಿಲ್ಲ. ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ಸಿಗರೆಲ್ಲರೂ ಮೋದಿ ಕಾಲಿನ ಧೂಳು ಆಗಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದರು.
ಬಾಗಲಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆ ಆಗಮಿಸಿದ್ದ ಅವರು, ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.
ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿರುವ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮೊದಲು ಪಂಜಾಬಿನಲ್ಲಿ ಮುನ್ಸಿಪಾಲಟಿ ಚುನಾವಣೆಗೆ ಗೆದ್ದು ತೋರಿಸಲಿ. ಎಂಎಲ್‌ಎ ಚುನಾವಣೆಗೆ ನಿಂತು ಸೋತಿರುವ ವ್ಯಕ್ತಿ ಅವರು. ಮೋದಿ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಬಿಜೆಪಿಗೆ ಸೇರ್ಪಡೆ ಮಾಡುವುದು ಹೈಕಮಾಂಡ್‌ಗೆ ಬಿಟ್ಟ ವಿಷಯ. ನಾನು ದುಂಬಾಲು ಬೀಳುವುದಿಲ್ಲ. ಯೋಗ್ಯ, ಒಳ್ಳೆಯವನು ಎಂದರೆ ತೆಗೆದುಕೊಳ್ಳಿ. ಇಲ್ಲದಿದ್ದರೆ ಬಿಡಲಿ. ಅವಲತ್ತು ಕೊಳ್ಳುವುದಿಲ್ಲ. ನನ್ನನ್ನು ಪಕ್ಷದಿಂದ ಹೊರಗಡೆ ಹಾಕಿದ್ದರಿಂದ ಪಕ್ಷಕ್ಕೂ ನಷ್ಟವಾಗಿಲ್ಲ. ನನಗೂ ನಷ್ಟವಾಗಿಲ್ಲ. ಮುಂದೆ ಯತ್ನಾಳ ತೆಗೆದುಕೊಳ್ಳದಿದ್ದರೆ ಕಷ್ಟವಾಗುತ್ತದೆ ಎಂದು ಇವರೆಲ್ಲ ಹೇಳುತ್ತಾರಲ್ಲ ಎಂದು ಜೊತೆಗಿದ್ದ ಸಿ.ಸಿ. ಪಾಟೀಲ, ಸಿದ್ದು ಸವದಿ, ಅರವಿಂದ ಬೆಲ್ಲದ ಕಡೆಗೆ ತೋರಿಸಿ, ಆಗ ನೋಡೋಣ ಎಂದರು.
ಯಾವುದೇ ಕಾರಣಗಳಿಂದ ಉಚ್ಚಾಟನೆಯಾಗಿರಬಹುದು. ಬಿಜೆಪಿ ಪಕ್ಷ, ಹಿಂದೂ ಸಮಾಜ ರಕ್ಷಣೆಯಾಗಬೇಕು. ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯಿಂದ ಜಗತ್ತಿನಲ್ಲೇ ಒಳ್ಳೆಯ ಕೆಲಸ ಆಗುತ್ತಿದೆ. ಬಿಜೆಪಿಯಿಂದ ಉಚ್ಚಾಟನೆಯಾದರೂ ಎಲ್ಲ ನಾಯಕರೊಂದಿಗೆ ಒಳ್ಳೆಯ ಸಂಬಂಧವಿದೆ ಎಂದು ತಿಳಿಸಿದರು.
ವಿಧಾನಸಭೆಯಲ್ಲಾಗಲೀ, ವಿರೋಧ ಪಕ್ಷದ ನಾಯಕರಾಗಲೀ, ಪಕ್ಷದ ಮುಖಂಡರು ಸೇರಿಯೇ ಯಾವ ವಿಷಯ ಮಾತನಾಡಬೇಕು ಎಂದು ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡುತ್ತಾರೆ. ಪಕ್ಷ ವಿರೋಧ ಮಾಡುವುದು. ಬ್ಲಾಕ್ ಮೇಲ್ ಮಾಡುವುದು ನನ್ನ ಸ್ವಭಾವವಲ್ಲ. ಪೂಜ್ಯ ತಂದೆಯವರು, ಮಗನಿಗೆ ಬೈಯ್ಯಬಾರದು ಎಂದು ಹೇಳಿದ್ದಾರೆ. ಬೈಯ್ಯುವುದಿಲ್ಲ. ಏ. 9ರವರೆಗೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ಮುಂದೇನು ಬದಲಾಗುತ್ತದೆಯೋ ನೋಡೋಣ ಎಂದು ಹೇಳಿದರು.
ಸ್ಟಾರ್ ಚಂದ್ರು ಕೈಕೆಳಗೆ ಕೆಲಸ ಮಾಡುವ ಕೆಲ ಗುತ್ತಿಗೆದಾರರು ಬಂದು ಬಿಲ್ ಆಗುತ್ತಿಲ್ಲ. ಡಿ.ಕೆ. ಶಿವಕುಮಾರ, ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರ ಹೆಸರು ಬರೆದಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನನ್ನ ಮುಂದೆ ಹೇಳಿದ್ದಾರೆ. ಒಬ್ಬರಿಗೆ 500 ಕೋಟಿಗೆ ರೂ.ಗೆ 5 ಕೋಟಿ ರೂ. ಬಿಡುಗಡೆಯಾಗಿದೆ. ಆಂಧ್ರಪ್ರದೇಶದ ಗುತ್ತಿಗೆದಾರರೊಬ್ಬರು ರಾಹುಲ್ ಗಾಂಧಿ ಮೂಲಕ ಹೇಳಿಸಿ 2,500 ಕೋಟಿ ರೂ. ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪರ ಪ್ರಚಾರ ನನ್ನ ಧರ್ಮವಲ್ಲ
ಯತ್ನಾಳ್ ಪ್ರಚಾರ ಮಾಡುವುದಾದರೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮಾಡುತ್ತಾರೆ ಎಂದಿದ್ದ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಪರ ಪ್ರಚಾರ ಮಾಡುವುದು ನನ್ನ ಧರ್ಮ ಅಲ್ಲ. ನಾನು ಎಂದೂ ಬಿಜೆಪಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ. ಬಿಜೆಪಿಯಿಂದ ಎಂಎಲ್‌ಎ ಆಗಿದ್ದೇನೆ. ಹಿಂದೆ ನಾನು ಎಂಎಲ್ಸಿ ಆಗಿದ್ದಾಗ ಇದೇ ಎಂ.ಬಿ. ಪಾಟೀಲ ನನ್ನ ಸಿದ್ದರಾಮಯ್ಯ ಬಳಿ ಕರೆದುಕೊಂಡು ಹೋಗಿದ್ದರು. ಆಗ ಪರಿಷತ್ ಸಭಾಪತಿ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ತೆಗೆದುಕೊಂಡು ಬಂದಿದ್ದರು. ಅವಿಶ್ವಾಸದ ಪರ ಮತ ಹಾಕಿದರೆ ನನಗೆ ಸಿಂದಗಿಯಲ್ಲಿ ಕಾಂಗ್ರೆಸ್ ಟಿಕೆಟ್ ಮತ್ತು ಎಷ್ಟು ಬೇಕು ಅಷ್ಟು ಅನುದಾನ ಕೊಡುವ ಭರವಸೆ ನೀಡಿದರು. ಆದರೆ, ನಾನು ಆಗಲ್ಲ. ನಾನು ಮೂಲ ಬಿಜೆಪಿ. ಏನೋ ಕಾರಣಕ್ಕೆ ಹೊರಗೆ ಹಾಕಿದ್ದಾರೆ ಎಂದಿದ್ದೆ. ಸಂದರ್ಭ ಬಂದಾಗ ನಮಗೆ ಉಪಕಾರ ಸ್ಮರಣೆ ಮಾಡಬೇಕು. ಸುಮ್ಮನೆ ಅವರನ್ನು ಸೋಲಿಸುತ್ತೇನೆ, ಇವರನ್ನು ಸೋಲಿಸುತ್ತೇನೆ ಎಂದು ದುರಾಭಿಮಾನಕ್ಕೆ ಬೀಳಬಾರದು. ಚರಂತಿಮಠ ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದನ್ನು ಸಮರ್ಥಿಸಿಕೊಂಡರು.