ಬಾಗಲಕೋಟೆ ನಗರದ ವಾರ್ಡ್ ನಂ. 17ರಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮತಯಾಚನೆ ಮಾಡಿದರು. ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಇದ್ದರು. 
ಬಾಗಲಕೋಟೆ

ಅಧಿಕಾರ ಇದ್ದರೂ ಕಾಂಗ್ರೆಸ್‌ಗೆ ಭಯ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ವಿ.ಪ. ಸದಸ್ಯ ಪಿ.ಎಚ್. ಪೂಜಾರ ವ್ಯಂಗ್ಯ
  • ವೀರಣ್ಣ ಚರಂತಿಮಠ ಗೆಲುವು
ಬಾಗಲಕೋಟೆ: ಅಧಿಕಾರದಲ್ಲಿದ್ದರೂ ಸೋಲಿನ ಭಯದಿಂದ ಬಾಗಲಕೋಟೆ ಕ್ಷೇತ್ರಕ್ಕೆ ಸಿಎಂ, ಡಿಸಿಎಂ ಠಿಕಾಣಿ ಹೂಡುತ್ತಿದ್ದಾರೆ. ಬಿಜೆಪಿ ಅಲೆಯಿಂದ ಹತಾಶರಾಗಿ ತಲೆಬುಡ ಇಲ್ಲದ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಅವರು ಏನೇ ಮಾಡಿದರೂ 27 ಸಾವಿರ ಮತಗಳ ಅಂತರದಲ್ಲಿ ವೀರಣ್ಣ ಚರಂತಿಮಠ ಗೆಲುವು ತಪ್ಪಿಸಲು ಸಾಧ್ಯವಿಲ್ಲ ಎಂದು ವಿ.ಪ. ಸದಸ್ಯ ಪಿ.ಎಚ್. ಪೂಜಾರ ಹೇಳಿದರು.
ಉಪ ಚುನಾವಣೆ ನಿಮಿತ್ತ ನಗರದ ವಾರ್ಡ್ ನಂ.17ರಲ್ಲಿ ಬಿಜೆಪಿ ಪರ ಮತಯಾಚನೆ ಮಾಡಿದ ಅವರು, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮತ ಯಾಚನೆಯಲ್ಲಿ ಅದ್ದೂರಿ ಸ್ವಾಗತ ಸಿಗುತ್ತಿದೆ. ಮತದಾರರು ಬಿಜೆಪಿಗೆ ನಿಶ್ಚಿತವಾಗಿ ಮತದಾನ ಮಾಡುವ ಭರವಸೆ ನೀಡುತ್ತಿದ್ದಾರೆ. ವೀರಣ್ಣ ಚರಂತಿಮಠ ಅವರ ಪರವಾದ ಅಲೆ ಕಂಡು ಹತಾಶರಾಗಿ ಸುಳ್ಳು ಆರೋಪಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ ಎಂದು ದೂರಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ದುರಾಡಳಿತಕ್ಕೆ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಮುಖ್ಯಮಂತ್ರಿ-ಉಪ ಮುಖ್ಯಮಂತ್ರಿಗಳು ಜನರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆಗೆ ಬೇಕಾಗಿರುವುದು ಗೂಂಡಾಗಿರಿಯಲ್ಲ, ಅಭಿವೃದ್ಧಿ ಕೆಲಸ ಅನ್ನುವುದು ಅವರಿಗೆ ಗೊತ್ತಿಲ್ಲ. ಮತದಾರರನ್ನು ಬೆದರಿಸಿದರೆ ಜನ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ. ಸೋಲುವ ಭಯದಿಂದ ಸಿಎಂ ಡಿಸಿಎಂ ಬಂದಿದ್ದಾರೆ. ಭ್ರಷ್ಟಾಚಾರದ ಹಣ ತಂದು ಹಂಚಿದರೆ ಜನ ಕಾಂಗ್ರೆಸ್ ಗೆ ಮತ ನೀಡಲ್ಲ. ದುಡಿಯುವ ಎತ್ತು ಯಾವುದು ಎಂದು ಜನಕ್ಕೆ ಗೊತ್ತಿದೆ. ಕಾಂಗ್ರೆಸ್ ಸುಳ್ಳು ಅರೋಪಗಳಿಗೆ ಸರಿಯಾದ ಉತ್ತರ ಮತದಾನದಲ್ಲಿ ಸಿಗಲಿದೆ ಎಂದು ಹೇಳಿದರು.
ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮಾತನಾಡಿ, ಸರ್ಕಾರ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದರೂ ಇಲ್ಲಿಯವರೆಗೆ ನಿರ್ಮಾಣ ಕಾರ್ಯ ಶುರುಮಾಡಲು ಆಗಿಲ್ಲ. ಚುನಾವಣೆ ಮುಂದಿಟ್ಟುಕೊಂಡು ಈಗ ಅಡಿಗಲ್ಲು ಹಾಕಿದ್ದಾರೆ. ಸರ್ಕಾರ ಮನಸ್ಸು ಮಾಡಿದರೆ ಒಂದು ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ವರ್ಷಗಳು ಬೇಕಿಲ್ಲ. ಬಿವಿವಿ ಸಂಘದಿಂದ ಮೆಡಿಕಲ್ ಕಾಲೇಜುಗಳನ್ನು ನಿರ್ಮಾಣ ಮಾಡಿದ್ದೇವೆ ಎಂದು ಟಾಂಗ್ ನೀಡಿದರು.
ಮೂಲ ಸೌಲಭ್ಯಗಳನ್ನು ಕಲ್ಪಿಸುವುದು, ಕೆರೆ ತುಂಬಿಸುವ ಕೆಲಸ, ನವನಗರದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಜಿಲ್ಲಾ ಕ್ರೀಡಾಂಗಣದ ದುರಸ್ತಿ, ಜಿಲ್ಲಾಡಳಿತ ಭವನ ಕಚೇರಿ ನವೀಕರಣ, ಸರ್ಕಾರಿ ಪದವಿ ಮಹಾವಿದ್ಯಾಲಯ, ತೋಟಗಾರಿಕಾ ವಿಶ್ವವಿದ್ಯಾಲಯ ಇವೆಲ್ಲವೂಗಳನ್ನು ಬಿಜೆಪಿ ಮಾಡಿದೆ. ಅಭಿವೃದ್ಧಿ ಪಾಠ ನಮಗೆ ಮಾಡುವುದನ್ನು ಬಿಟ್ಟು ತಾವು ಕಲಿತುಕೊಳ್ಳಲಿ. ಕೇವಲ ಉಪಚುನಾವಣೆಗಾಗಿ ಐದು ದಿನ ಠಿಕಾಣೆ ಹೂಡುವುದು ಏನಿದೆ. ಅಭಿವೃದ್ಧಿ ಪರವಾದ ಚರ್ಚೆಗೆ ಬರುವುದಾದರೆ ನಾನು ಸಿದ್ಧ ಅಂತ ಸವಾಲು ಹಾಕಿದರು.
ಶಾಸಕ ಸಿದ್ದು ಸವದಿ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಮಹಾಂತೇಶ ಸಂಗಮ, ಮಹಾಂತೇಶ ಹಿರೇಮಠ, ಎಚ್ಚರೇಶ ಮಯಾಚಾರಿ, ಶ್ರೀಹರಿ ಟಿಕಾರಿ, ರಾಮು ಪವಾರ, ಮಹೇಶ ಅಥಣಿ, ಗುರುಬಸವ ಸೂಳಿಭಾವಿ, ಈರಣ್ಣ ಹದ್ಲಿ ಇದ್ದರು.