ಹುನಗುಂದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಸಹಯೋಗದಲ್ಲಿ ಸ್ಥಾಪಿಸಲಾದ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆ ನೀಡಿದರು. ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ, ಟಿಎಪಿಸಿಎಂಎಸ್ ಅಧ್ಯಕ್ಷ ಜೈನಸಾಬ್ ಹಾಗೇದಾಳ, ನಿರ್ದೇಶಕರ ಮಹಾಲಿಂಗಯ್ಯ ಹಿರೇಮಠ ಇದ್ದರು.
- ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆ
- ತೊಗರಿ ಖರೀದಿ ಕೇಂದ್ರ ಆರಂಭ
- ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು
ಹುನಗುಂದ: ಸರ್ಕಾರ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ತೊಗರಿ ಬೆಳೆ ಖರೀದಿ ಪ್ರಕ್ರಿಯೆ ಆರಂಭಿಸಲಾಗಿದೆ. ಹುನಗುಂದ-ಇಳಕಲ್ಲ ಅವಳಿ ತಾಲೂಕಿನಲ್ಲಿ 17 ಖರೀದಿ ಕೇಂದ್ರ ಪ್ರಾರಂಭವಾಗಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಸಹಯೋಗದಲ್ಲಿ 2025-26ನೇ ಸಾಲಿನ ತೊಗರಿ ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಬೆಳೆದ ಬೆಳೆಗಳಿಗೆ ಬೆಲೆ ಕುಸಿತ ಕಂಡು ಕಂಗಾಲಾದ ಅನ್ನದಾತನಿಗೆ ಬೆನ್ನಿಗೆ ನಿಂತುಕೊಂಡು ಸೂಕ್ತ ಬೆಂಬಲ ಬೆಲೆಯಲ್ಲಿ ಬೆಳೆಯನ್ನು ಖರೀದಿಸಿ ರೈತರಿಗೆ ನ್ಯಾಯ ಕೊಡಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ. ಉತ್ತರ ಕರ್ನಾಟಕದಲ್ಲಿ ಅತೀ ಹೆಚ್ಚು ತೊಗರಿ ಬೆಳೆದ ರೈತರಿದ್ದಾರೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ತೊಂದರೆಯಲ್ಲಿದ್ದ ರೈತರ ಬೆನ್ನೆಲುಬಾಗಿ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ ಎಂದರು.
ಸದ್ಯ ಹುನಗುಂದ ಮತ್ತು ಇಳಕಲ್ಲದಲ್ಲಿ ಅವಳಿ ತಾಲೂಕಿನಲ್ಲಿ ಹುನಗುಂದ, ಇಳಕಲ್ಲ, ಹಿರೇಆದಾಪೂರ, ಮೂಗನೂರ, ಬೂದಿಹಾಳ, ನಂದವಾಡಗಿ, ಕರಡಿ, ಸುಳೇಭಾವಿ, ಕೂಡಲಸಂಗಮ, ಅಮರಾವತಿ, ಚಿಕ್ಕಕೊಡಗಲಿ, ನಾಗೂರ, ತುಂಬ, ಜಂಬಲದಿನ್ನಿ, ಕಂದಗಲ್ಲ, ಕೊಡಿಹಾಳ ಸೇರಿ 17 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು. ಈಗಾಗಲೇ 4929 ಜನ ರೈತರು ನೋಂದಾಯಿಸಿಕೊಂಡಿದ್ದಾರೆ. ರೈತರು 9 ದಿನಗಳೊಳಗಾಗಿ ನೋಂದಾಯಿಸಿಕೊಂಡು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಎಂ.ಎಂ. ದಂಡಿನ ಮಾತನಾಡಿ, ಸರ್ಕಾರ ಬೆಂಬಲ ಬೆಲೆಯಡಿ ತೊಗರಿ ಪ್ರತಿ ಕ್ವಿಂಟಾಲ್‌ಗೆ 8 ಸಾವಿರ ರೂ.ನಂತೆ ಖರೀದಿ ಮಾಡುತ್ತಿದೆ. ಇದರ ಪ್ರಯೋಜನ ರೈತರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ, ಟಿಎಪಿಸಿಎಂಎಸ್ ಅಧ್ಯಕ್ಷ ಜೈನಸಾಬ ಹಾಗೇದಾಳ, ನಿರ್ದೇಶಕರ ಮಹಾಲಿಂಗಯ್ಯ ಹಿರೇಮಠ, ಕೃಷಿಕ ಸಮಾಜದ ಅಧ್ಯಕ್ಷ ಸಂಜೀವ ಜೋಶಿ, ಜಿಲ್ಲಾ ಪ್ರತಿನಿಧಿ ಪ್ರಭು ಇದ್ದಲಗಿ, ಬಸವರಾಜ ಬಂಗಾರಿ, ಮಹಾಂತೇಶ ನಾಡಗೌಡ್ರ, ಮಹಾಂತಮ್ಮ ಹೊಸೂರ, ಗಿರಿಜಾ ಗಂಜೀಹಾಳ, ಶಾಂತಾ ಗೌಡಗೇರಿ ಇತರರಿದ್ದರು.