ಬಾಗಲಕೋಟೆ ನಗರದಲ್ಲಿ ಕಾಂಗ್ರೆಸ್ ಅದ್ದೂರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆ ಜನಸ್ತೋಮ. 
ಬಾಗಲಕೋಟೆ

ಕಮಲ ಪಡೆಗೆ ರಣವೀಳ್ಯ ನೀಡಿದ ಕಾಂಗ್ರೆಸ್

ಪ್ರಮುಖ ಮುಖ್ಯಾಂಶಗಳು

  • ಅಭ್ಯರ್ಥಿ ಎಚ್.ವೈ. ಮೇಟಿ ಶಕ್ತಿ ಪ್ರದರ್ಶನ
  • ಕೈ ಪಕ್ಷದ ಅದ್ದೂರಿ ಮೆರವಣಿಗೆ
ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಮತ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಉಮೇಶ ಹುಲ್ಲಪ್ಪ ಮೇಟಿ ಸೋಮವಾರ ಅದ್ದೂರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದರು. ಸಾವಿರಾರು ಜನ ಕಾರ್ಯಕರ್ತರು, ಬೆಂಬಲಿಗರೊಂದು ಕೈ ಪಡೆ ಶಕ್ತಿ ಪ್ರದರ್ಶನ ಮಾಡುವ ಮೂಲಕ ಬಿಜೆಪಿಗೆ ಚುನಾವಣಾ ಕಣಕ್ಕೆ ರಣವೀಳ್ಯ ನೀಡಿತು.
ಬೆಳಗ್ಗೆ ಬಾಗಲಕೋಟೆ ನಗರದ ಹೊಳೇ ಆಂಜನೇಯ ದೇವಸ್ಥಾನ, ಕಿಲ್ಲಾ ರಾಘವೇಂದ್ರ ಸ್ವಾಮಿಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ವಿದ್ಯಾಗಿರಿಯಲ್ಲಿ ಕಾಂಗ್ರೆಸ್ ಕಚೇರಿಗೆ ತೆರಳಿದರು. ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ತೆರೆದ ವಾಹನ ಏರುತ್ತಿದ್ದಂತೆ `ಕೈ' ಕಾರ್ಯಕರ್ತರು ಕೇ ಕೇ ಚಪ್ಪಾಳೆಗಳ ಮೂಲಕ ಸ್ವಾಗತ ಕೋರಿದರು. ಪಕ್ಷದ ಕಚೇರಿಯಿಂದ ಆರಂಭವಾದ ಮೆರವಣಿಗೆ ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ವೃತ್ತ, ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ, ಬಸವೇಶ್ವರ ಸಹಕಾರಿ ಬ್ಯಾಂಕ್ ರಸ್ತೆ, ಪೊಲೀಸ್ ಪ್ಯಾಲೇಸ್ ಮೂಲಕ ತಹಸೀಲ್ದಾರ ಕಚೇರಿ ತಲುಪಿತು. ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿ ಅಧಿಕೃತವಾಗಿ ಉಮೇಶ ಮೇಟಿ ಅಖಾಡ ಪ್ರವೇಶಿಸಿದರು.
ಎಲ್ಲೆಲ್ಲೂ ಕೈ ಬಾವುಟಗಳು ರಾರಾಜಿಸಿದವು. ಜನರು ಡೋಲು, ಡೊಳ್ಳಿನ ಮೇಳಕ್ಕೆ ಕುಣಿದು ಕುಪ್ಪಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಸಚಿವರಾದ ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ, ಶಿವಾನಂದ ಪಾಟೀಲ, ಶಾಸಕ ವಿಜಯಾನಂದ ಕಾಶಪ್ಪನವರ, ಬಿ.ಬಿ. ಚಿಮ್ಮನಕಟ್ಟಿ, ವಿ.ಪ. ಸದಸ್ಯ ಸುನೀಲಗೌಡ ಪಾಟೀಲ, ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ ಸೋರಕೆ, ಮಾಜಿ ಸಚಿವ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಅಜಯಕುಮಾರ ಸರನಾಯಕ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಮಾಜಿ ಶಾಸಕ ಆನಂದ ನ್ಯಾಮಗೌಡ, ಜಿ.ಪಂ. ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ಹೊಳಬಸ್ಸು ಶೆಟ್ಟರ, ನಾಗರಾಜ ಹದ್ಲಿ, ದ್ಯಾಮಣ್ಣ ಗಾಳಿ, ಶ್ರೀಕರ ದೇಸಾಯಿ, ರಕ್ಷಿತಾ ಭರತಕುಮಾರ ಈಟಿ, ಅಶೋಕ ಲಾಗಲೋಟಿ, ಶಿವಕುಮಾರ ನಂದಿಕೋಲಮಠ,ಆನಂದ ಜಿಗಜಿನ್ನಿ, ಸಂಜೀವ ವಾಡಕರ, ಹನುಮಂತ ರಾಕುಂಪಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಅಯೂಬ ಪುಣೇಕರ, ಶಶಿಕಾಂತ ಪೂಜಾರ ಇತರರಿದ್ದರು.