ಜಮಖಂಡಿ ನಗರದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಎಸಿ ಕಚೇರಿಯ ಗ್ರೇಡ್ 2 ತಹಸೀಲ್ದಾರ ಎನ್.ಜಿ. ಬಿರಡಿ ಅವರಿಗೆ ಡಿಎಸ್‌ಎಸ್ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ, ಬಸವರಾಜ ಹಳ್ಳದಮನಿ, ಮಹಾಲಿಂಗಪ್ಪ ಆಲಬಾಳ, ಬಸವರಾಜ ದೊಡಮನಿ, ಸದಾಶಿವ ಐನಾಪೂರ, ಪರಸು ಕಾಂಬಳೆ, ಅಮೀತ ಸೂರಗೊಂಡ ಇದ್ದರು.
- ಆರ್‌ಎಸ್‌ಎಸ್ ವಿರುದ್ಧ ಡಿಎಸ್‌ಎಸ್ ಪ್ರತಿಭಟನೆ
- ಸರ್ಕಾರ ಕ್ರಮ ಜರುಗಿಸಬೇಕು
- ದಲಿತ ಸಂಘರ್ಷ ಸಮಿತಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಮಖಂಡಿ : ಆರ್‌ಎಸ್‌ಎಸ್ ಕಾನೂನು ಬಾಹಿರ ನಡೆ ವಿರೋಧಿಸಿ ಸರ್ಕಾರ ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಪ್ರತಿಭಟನಾ ಮೆರವಣಿಗೆ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದ ಸಮಿತಿ ಪದಾಧಿಕಾರಿಗಳು ಗ್ರೇಡ್ 2 ತಹಸೀಲ್ದಾರ ಎನ್.ಜಿ. ಬಿರಡಿ ಅವರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, ಭಾರತ ಸಂವಿಧಾನವನ್ನು ಗೌರವಿಸದ, 55 ವರ್ಷಗಳ ಕಾಲ ತನ್ನ ಕಚೇರಿಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ನಿರಾಕರಿಸಿದ, ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿಲ್ಲ ಆರ್‌ಎಸ್‌ಎಸ್. ಇದುವರೆಗೂ ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಕೊಂಡಿಲ್ಲ. ದೇಶದ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದನ್ನು ಪ್ರಶ್ನೆ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವನ ಬೆದರಿಕೆ ಹಾಕಲಾಗುತ್ತಿದೆ. ಇದು ಖಂಡನೀಯ ಎಂದರು.
ಮುಂದಿನ ತಲೆಮಾರಿನ ಉತ್ತಮ ಭವಿಷ್ಯಕ್ಕಾಗಿ ಭಾರತ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಮನುವಾದಿಗಳಿಂದ ಸಂರಕ್ಷಿಸುವುದು ಸಮಸ್ತ ಭಾರತೀಯರ ಆದ್ಯ ಕರ್ತವ್ಯವಾಗಿದೆ. ಈ ಕಾರಣಕ್ಕಾಗಿ ಮನುವಾದಿ ಆರ್‌ಎಸ್‌ಎಸ್ ಸಂಘಟನೆಯ ದಲಿತ ವಿರೋಧಿ ನಿಲುವು ಖಂಡಿಸುವ ಕಾರ್ಯ ಎಲ್ಲರೂ ಮಾಡಬೇಕು. ಆರ್‌ಎಸ್‌ಎಸ್ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಬಸವರಾಜ ಹಳ್ಳದಮನಿ, ಮಹಾಲಿಂಗಪ್ಪ ಆಲಬಾಳ, ಬಸವರಾಜ ದೊಡಮನಿ, ಸದಾಶಿವ ಐನಾಪೂರ, ಪರಸು ಕಾಂಬಳೆ, ಅಮೀತ ಸೂರಗೊಂಡ, ದೀಪಕ ಕಂಕನವಾಡಿ, ಅಪ್ಪಸಿ ಕಾಂಬಳೆ, ವಿದ್ಯಾಸಾಗರ ಹೊಸಮನಿ ಇತರರಿದ್ದರು.