ಗುಳೇದಗುಡ್ಡದ ಶ್ರೀಜಗದ್ಗುರು ಗುರುಸಿದ್ಧೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ನಡೆದ ಕಲಾ ಸಂಭ್ರಮ ಕಾರ್ಯಕ್ರಮದಲ್ಲಿ ಡಾ. ರಾಘವೇಂದ್ರ ವನಕಿ ಅವರನ್ನು ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ ಸನ್ಮಾನಿಸಿದರು. ಸಂಸ್ಥೆಯ ಚೇರ್ಮನ್ ರಾಜು ಜವಳಿ, ಶಾಲಾ ಪ್ರಾಚಾರ್ಯೆ ಚಂದ್ರಿಕಾ ಜೋಶಿ, ನಿರ್ದೇಶಕ ದೊಡ್ಡಬಸು ಉಂಕಿ, ಪ್ರೇಮಾ ಚಿಂದಿ, ಸುರೇಖಾ ತಿಪ್ಪಾ ಇತರರಿದ್ದರು. 
ಬಾಗಲಕೋಟೆ

ಶಿಕ್ಷಣದಿಂದ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸ

ಪ್ರಮುಖ ಮುಖ್ಯಾಂಶಗಳು

  • ಡಾ. ರಾಘವೇಂದ್ರ ವನಕಿ ಅಭಿಮತ
  • ದುಶ್ಚಟಗಳಿಂದ ದೂರವಿರಿ
  • ಕಲಾ ಸಂಭ್ರಮ ವಾರ್ಷಿಕ ಸ್ನೇಹ ಸಮ್ಮೀಲನ
ಗುಳೇದಗುಡ್ಡ: ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಶಿಕ್ಷಣದ ಜತೆಗೆ ಸಾಂಸ್ಕೃತಿಕ ಹಾಗೂ ಪಠ್ಯಪೂರಕ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಡಾ. ರಾಘವೇಂದ್ರ ವನಕಿ ಹೇಳಿದರು.
ಪಟ್ಟಣದ ಶ್ರೀಜಗದ್ಗುರು ಗುರುಸಿದ್ಧೇಶ್ವರ ಸಿಬಿಎಸ್‌ಇ ಶಾಲೆಯಲ್ಲಿ ಆಯೋಜಿಸಿದ್ದ ಕಲಾ ಸಂಭ್ರಮ ವಾರ್ಷಿಕ ಸ್ನೇಹ ಸಮ್ಮೀಲನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಉಜ್ವಲ ಭವಿಷ್ಯ ನಿರ್ಮಾಣ, ಶಿಕ್ಷಕರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಏಕಾಗ್ರತೆಯ ಮೇಲೆ ಅವಲಂಬಿತವಾಗಿದೆ. ಮೊಬೈಲ್ ಸೇರಿದಂತೆ ದುಶ್ಚಟಗಳಿಂದ ದೂರವಿದ್ದು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಶ್ರೀಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿ ಮಾತನಡಿ, ಮಕ್ಕಳು ದೇಶದ ಅಮೂಲ್ಯ ಆಸ್ತಿ. ಸಂಸ್ಕಾರ ಹಾಗೂ ಸಂಸ್ಕೃತಿಯೊಂದಿಗೆ ಶಿಕ್ಷಣ ಪಡೆದು ಕಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಶಾಲಾ ಪ್ರಾಚಾರ್ಯೆ ಚಂದ್ರಿಕಾ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಬೆಳವಣಿಗೆಗೆ ಪಾಲಕರ ಸಹಕಾರ ಅಗತ್ಯವಿದ್ದು, ಸಂಸ್ಥೆ ರೂಪಿಸಿರುವ ವಿವಿಧ ಕಾರ್ಯಕ್ರಮಗಳನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಸ್ಥೆಯ ಚೇರ್ಮನ್ ರಾಜು ಜವಳಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ದೊಡ್ಡಬಸು ಉಂಕಿ, ಪ್ರೇಮಾ ಚಿಂದಿ, ಸುರೇಖಾ ತಿಪ್ಪಾ, ವಿರುಪಾಕ್ಷಪ್ಪ ಅರುಟಗಿ, ಅಯ್ಯಪ್ಪ ವಾಳದುಂಕಿ, ಶಂಕರ ಕಲಬುರ್ಗಿ, ಸಿಇಒ ಬಿ.ವಿ.ಚಿಂದಿ ಇತರರಿದ್ದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.