ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶನಿವಾರ ಜಿ.ಪಂ. ಸಿಇಒ ಗಜಾನನ ಬಾಲೆ ಪರಿಶೀಲಿಸಿ, ಅಧಿಕಾರಿಗಳಿಂದ ಪ್ರಗತಿಯ ಮಾಹಿತಿ ಪಡೆದುಕೊಂಡರು
- ಜಿಪಂ ಸಿಇಒ ಗಜಾನನ ಬಾಲೆ ಅಧಿಕಾರಿಗಳಿಗೆ ಸೂಚನೆ
- ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಬಾಗಲಕೋಟೆ: ಕಾಮಗಾರಿಗಳನ್ನು ನಿಗದಿತ ಸಮಯದಲ್ಲಿ ಗುಣಮಟ್ಟ ಕಾಯ್ದುಕೊಂಡು ಪೂರ್ಣಗೊಳಿಸಬೇಕು ಎಂದು ಜಿ.ಪಂ. ಸಿಇಒ ಗಜಾನನ ಬಾಲೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಮಖಂಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗ್ರಾಮೀಣ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಪರಿಶೀಲಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಮಾತನಾಡಿದರು.
ಗ್ರಾಮೀಣ ಕುಡಿಯುವ ನೀರು, ಜಲ ಜೀವನ್ ಮಿಷನ್, ಆರೋಗ್ಯ, ಶಿಕ್ಷಣ, ಗ್ರಾಮ ಪಂಚಾಯತ್ ಆಡಳಿತ ಹಾಗೂ ಮತದಾರರ ಪಟ್ಟಿ ವಿಶೇಷ ತೀವೃ ಪರಿಷ್ಕರಣೆ ಕಾರ್ಯಕ್ರಮಗಳ ಪ್ರಗತಿಯನ್ನು ಪರಿಶೀಲಿಸಿದರು.
ಹುನ್ನೂರು ಗ್ರಾಮದಲ್ಲಿ ಡಿಬಿಓಟಿ ಸ್ಕೀಮ್-1 ಅಡಿಯಲ್ಲಿ ನಿರ್ಮಾಣ ಹಂತದಲ್ಲಿರುವ 325 ಕೆ.ಎಲ್. ಸಾಮರ್ಥ್ಯದ ಓವರ್ ಹೆಡ್ ಟ್ಯಾಂಕ್ ಕಾಮಗಾರಿ, ರಾಮತೀರ್ಥ ಕೆರೆ, ಕೊಳವೆಬಾವಿ, ಹುನ್ನೂರು ಕೆರೆ ಹಾಗೂ ಹುನ್ನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮ ಪಂಚಾಯತ್ ಆಡಳಿತ ಹಾಗೂ ತೆರಿಗೆ ವಸೂಲಾತಿ ಪ್ರಗತಿಯನ್ನು ಪರಿಶೀಲಿಸಿದರು. ತೆರಿಗೆ ವಸೂಲಾತಿಯನ್ನು ತ್ವರಿತಗೊಳಿಸಿ, ನಿಗದಿತ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕು. ತೆರಿಗೆ ವಸೂಲಾತಿ ಗುರಿ ಸಾಧಿಸಲು ವಿಫಲವಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹುನ್ನೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಆರೋಗ್ಯ ಸೇವೆಗಳ ಕುರಿತು ಮಾಹಿತಿ ಪಡೆದು ಅಗತ್ಯ ಸಲಹೆಗಳನ್ನು ನೀಡಿದರು. ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಎರಡು ಮನೆಗಳಿಗೆ ಭೇಟಿ ನೀಡಿ ಮತದಾರರ ಪರಿಷ್ಕರಣೆ ಹಿನ್ನೆಲೆಯಲ್ಲಿ ಎನ್ಯೂಮಿನೇಷನ್ ಫಾರಂ ವಿತರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಬಳಿಕ ಹಿಪ್ಪರಗಿ ಬ್ಯಾರೇಜ್, ಜಲ ಜೀವನ್ ಮಿಷನ್ ಕಾಮಗಾರಿಗಳು ಹಾಗೂ ಹಿಪ್ಪರಗಿ ನೀರು ಶುದ್ಧೀಕರಣ ಘಟಕ ಕಾಮಗಾರಿಗಳನ್ನು ಪರಿಶೀಲಿಸಿ, ಗುಣಮಟ್ಟ ಮತ್ತು ನಿಗದಿತ ಅವಽಯೊಳಗೆ ಪೂರ್ಣಗೊಳಿಸುವಂತೆ ಅಽಕಾರಿಗಳಿಗೆ ನಿರ್ದೇಶನ ನೀಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಮಖಂಡಿ ಉಪವಿಭಾಗದ ಕಂಕಣವಾಡಿಯಲ್ಲಿರುವ ತಾಲೂಕು ಮಟ್ಟದ ಗ್ರಾಮೀಣ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪ್ರಯೋಗಾಲಯದ ಕಾರ್ಯವೈಖರಿ ಹಾಗೂ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ವಸೂಲಾತಿ, ಕುಡಿಯುವ ನೀರಿನ ನಿರ್ವಹಣೆ ಹಾಗೂ ಅಭಿವದ್ಧಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಮಖಂಡಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪಂಚಾಳ, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ಸಂಜೀವ ಹಿಪ್ಪರಗಿ ಇತರರಿದ್ದರು.