ವಿಜಯವಾಣಿ ಸುದ್ದಿಜಾಲ ಬಾಗಲಕೋಟೆ
ಪ್ರಸಕ್ತ ವರ್ಷ ಬರಗಾಲ ಆವರಿಸಿ ಕೃಷಿ ಕ್ಷೇತ್ರವೇ ತಲ್ಲಣಗೊಂಡಿದೆ. ರಾಜ್ಯದ ೮೪ ಲಕ್ಷ ರೈತ ಕುಟುಂಬಕ್ಕೆ ತಲಾ ಐವತ್ತು ಸಾವಿರ ರೂ. ದಂತೆ ಪರಿಹಾರ ಧನ ನೀಡಬೇಕು. ಶೀಘ್ರಗತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಒಂದು ವರ್ಷದ ಕಂದಾಯ ವೆಚ್ಚ ಶೇ.೧೦ ಕಡಿತಗೊಳಿಸಬೇಕು. ಅದನ್ನೇ ಪರಿಹಾರ ರೂಪದಲ್ಲಿ ರೈತರಿಗೆ ನೀಡಬೇಕು. ಅದನ್ನು ಬಿಟ್ಟು ೨೫೦೦ ರೂ. ಕೊಡುತ್ತೇವೆ ಎಂದು ಹೇಳಿದ್ದಾರೆ. ಇದು ರೈತನಿಗೆ ಯಾವ ಖರ್ಚಿಗೆ ಸಾಲುತ್ತದೆ. ರೈತರು ಬಂಡೆಳುವ ಮುಂಚೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ಒಂದು ದಿನದ ಅಽವೇಶನಕ್ಕೆ ೧೫ ಕೋಟಿ ರೂ. ಹಣ ಖರ್ಚಾಗುತ್ತದೆ. ಒಂದು ದಿನದ ಅಽವೇಶನದಲ್ಲಿ ಪಾಲ್ಗೊಳ್ಳುವ ಶಾಸಕರು, ಸಚಿವರ ಊಟಕ್ಕೆ ಏನಿಲ್ಲವೆಂದರೂ ೨೫೦೦ ದಷ್ಟು ಹಣ ಖರ್ಚಾಗುತ್ತದೆ. ಜತೆಗೆ ಮುಖ್ಯಮಂತ್ರಿಗಳು, ಸಚಿವರು ಹಾಗೂ ಶಾಸಕರುಗಳು ತಮ್ಮ ಒಂದು ತಿಂಗಳ ವೇತನ ನೀಡಬೇಕು ಎಂದು ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ ನಡೆದ ರೈತರ ಹೋರಾಟ ವ್ಯಕ್ತಿಯನ್ನಾಗಿ ಗುರಿಯಾಗಿಸಿಕೊಂಡೋ ಅಥವಾ ವ್ಯವಸ್ಥೆ ಹಾಗೂ ಸರ್ಕಾರವನ್ನೋ ತಿಳಿಯುತ್ತಿಲ್ಲ. ಹೋರಾಟ ಮಾಡುವುದು ಎಲ್ಲರ ಹಕ್ಕು. ಆದರೆ ಅದನ್ನು ವ್ಯವಸ್ಥೆ ಹಾಗೂ ಸರ್ಕಾರದ ವಿರುದ್ಧ ಮಾಡಬೇಕು. ಅದನ್ನು ಬಿಟ್ಟು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಅವರ ಕುಟುಂಬ ಟಾರ್ಗೆಟ್ ಮಾಡಿ ಬಳಸಿದ ಭಾಷೆ ನಾಗರಿಕ ಸಮಾಜ ಒಪ್ಪಲ್ಲ ಎಂದು ತಿಳಿಸಿದರು.
ಹುಬ್ಬಳ್ಳಿಯ ಪ್ರಮುಖ ಸ್ಥಳದಲ್ಲಿ ಪ್ರತಿಭಟನೆ ನಡೆದಿದೆ. ಅಲ್ಲಿ ಕೇಂದ್ರ ಸಚಿವರ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಅಲ್ಲಿಯೇ ಇದ್ದ ಪೊಲೀಸ್ ಕಮೀಷನರ್ ಸೂಕ್ತ ಕ್ರಮ ಕೈಕೊಳ್ಳದಿರುವುದು ನೋಡಿದರೆ ಇದು ಆಡಳಿತ ಪಕ್ಷದ ಕುಮ್ಮಕ್ಕಿನಿಂದ ನಡೆದಿರುವ ಹೋರಾಟ ಎನ್ನುವುದು ಅನುಮಾನ ಮೂಡುತ್ತದೆ ಎಂದು ಹೇಳಿದರು.
ಈ ಹಿಂದೆಯೆಲ್ಲೆ `ನಮ್ಮ ಕಬ್ಬು ತೆಗೆದುಕೊಳ್ಳಿ' ಎಂದು ಹೋರಾಟ ನಡೆಯುತ್ತಿದ್ದವು. ಆ ಮೇಲೆ ಬಾಕಿಗಾಗಿ ಹೋರಾಟ ಮಾಡಲಾಗುತ್ತಿತ್ತು. ನಂತರ ಸರ್ಕಾರ ಮಧ್ಯ ಪ್ರವೇಶ ಮಾಡಿ ಬಾಕಿ ಕೊಡಿಸುತ್ತಿತ್ತು. ಆದರ ೨೦೧೪ರ ನಂತರ ಪ್ರಧಾನಿ ನರೇಂದ್ರ ಮೋದಿ ಕೈಕೊಂಡ ಯೋಜನೆಗಳಿಂದಾಗಿ ಕಬ್ಬು ಹಾಗೂ ಸಕ್ಕರೆ ಉತ್ತಮ ಬೆಲೆ ಬಂತು. ಕಬ್ಬು ವಾಣಿಜ್ಯ ಬೆಳೆಯಾಯಿತು ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಎಫ್‌ಆರ್‌ಪಿ ನಿಗದಿ ಮಾಡುತ್ತದೆ. ಆದರೆ ರಾಜ್ಯ ಸರ್ಕಾರ ಎಸ್‌ಎಪಿ ಎಷ್ಟು ನೀಡುತ್ತದೆ ಎಂಬುದನ್ನು ತಿಳಿಸಬೇಕು. ಅದನ್ನು ಕೇಳುವುದಕ್ಕಾಗಿ ಹೋರಾಟ ನಡೆಬೇಕು. ಈ ಹಿಂದೆ ಯಡಿಯೂರಪ್ಪ, ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಗಳಾದಾಗ ಎಸ್‌ಎಪಿ ನೀಡಿದ್ದಾರೆ. ಈಗಿನ ಸರ್ಕಾರವೂ ಎಸ್‌ಎಪಿ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ರಾಜು ನಾಯ್ಕರ, ಶಿವಾನಂದ ಸುರಪುರ ಇತರರಿದ್ದರು.