ಬಾದಾಮಿ ತಾಲೂಕಿನ ಪಟ್ಟದಕಲ್ಲು ಸ್ಥಳದಲ್ಲಿ ಮಂಗಳವಾರ ರಾತ್ರಿ ಚಾಲುಕ್ಯ ಉತ್ಸವದ ಎರಡನೇ ದಿನದ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅವರು ಉದ್ಘಾಟಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಇತರರಿದ್ದರು. 
ಬಾಗಲಕೋಟೆ

ಬಾದಾಮಿ, ಪಟ್ಟದಕಲ್ಲು, ಐಹೊಳೆ ಅಭಿವೃದ್ಧಿಗೆ ಬದ್ಧ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿಕೆ
  • ಪಟ್ಟದಕಲ್ಲಿನ 2ನೇ ದಿನದ ಚಾಲುಕ್ಯ ಉತ್ಸವ
  • ಪ್ರವಾಸೋದ್ಯಮ ಕ್ಷೇತ್ರ ಬೆಳೆದರೆ ಇಲ್ಲಿನ ಯುವಕರಿಗೆ ಉದ್ಯೋಗ ಸಿಗುತ್ತದೆ
ವಿಕ್ರಮಾದಿತ್ಯ ವೇದಿಕೆ ಪಟ್ಟದಕಲ್ಲು : ಬಾದಾಮಿ, ಪಟ್ಟದಕಲ್ಲು, ಐಹೊಳೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ವಿಪುಲವಾದ ಅವಕಾಶಗಳಿದ್ದು, ಅದನ್ನು ಬಳಕೆ ಮಾಡಿಕೊಂಡು ನಾವೆಲ್ಲರೂ ಪಕ್ಷ ಭೇದ ಮರೆತು ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದಲ್ಲಿ ವಿಕ್ರಮಾದಿತ್ಯ ವೇದಿಕೆಯಲ್ಲಿ ಮಂಗಳವಾರ ರಾತ್ರಿ ನಡೆದ ಚಾಲುಕ್ಯ ಉತ್ಸವದ 2ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಕ್ಷೇತ್ರ ಬೆಳೆದರೆ ಇಲ್ಲಿನ ಯುವಕರಿಗೆ ಉದ್ಯೋಗ ಸಿಗುತ್ತದೆ. ರೈತರಿಗೆ ಮಾರುಕಟ್ಟೆ ದೊರೆಯುತ್ತದೆ. ಕಲೆ, ಕಲಾವಿದರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಈಗ ನಮಗೆ ಪೂರಕ ವಾತಾವರಣ ಎಂದರೆ ನಮ್ಮ ಭಾಗದ ಎಚ್.ಕೆ. ಪಾಟೀಲ ಅವರು ಪ್ರವಾಸೋದ್ಯಮ ಸಚಿವರಾಗಿದ್ದಾರೆ. ಅವರು ಯಲ್ಲಮ್ಮನ ಗುಡ್ಡಕ್ಕೆ ನೂರು ಕೋಟಿ ರೂ. ಅನುದಾನ ಒದಗಿಸಿದ್ದಾರೆ. ಇದೀಗ ನಮ್ಮ ಸಂಸದ ಪಿ.ಸಿ. ಗದ್ದಿಗೌಡರು ಕೇಂದ್ರದಿಂದ ಬಾದಾಮಿ ಕ್ಷೇತ್ರಕ್ಕೆ ಇನ್ನೂರು ಕೋಟಿ ರೂ. ತರುವ ಅಭಯ ನೀಡಿದ್ದಾರೆ. ರಾಜ್ಯ ಸರ್ಕಾರದಿಂದ ಅವರ ಸಲಹೆಯಂತೆ ಕೂಡಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇವೆ. ಗದ್ದಿಗೌಡರು 200 ಕೋಟಿ ರೂ. ತರುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸವೂ ನಮಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ದಕ್ಷಿಣಪಥೇಶ್ವರ ಇಮ್ಮಡಿ ಪುಲಕೇಶಿ ಈ ದೇಶದ ಹೆಮ್ಮೆಯ ರಾಜ. ಅದೃಷ್ಟವೆಂದರೆ ಪುಲಕೇಶಿ ಇಂದಿಗೂ ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಅದೇನಾದರೂ ಆಗಿದ್ದರೆ ಇವತ್ತಿನ ಪರಿಸ್ಥಿತಿಯಲ್ಲಿ ಏನಾಗುತ್ತಿತ್ತೋ ಏನೋ? ಚಾಲುಕ್ಯ ಉತ್ಸವ ಬರೀ ಮನರಂಜನೆಗೆ ಸಿಮೀತವಾಗದೇ ಅವರನ್ನು ಇಡೀ ದೇಶಕ್ಕೆ ಪರಿಚಯಿಸುವ, ಚರ್ಚಿಸುವ ಕೆಲಸ ಆಗಬೇಕು. ಇಮ್ಮಡಿ ಪುಲಕೇಶಿ ಸಣ್ಣ ಪುಟ್ಟ ರಾಜನಲ್ಲ. 98 ಸಾವಿರ ಗ್ರಾಮಗಳನ್ನು ಒಳಗೊಂಡ ರಾಷ್ಟ್ರದ ರಾಜ. ಇಂತಹ ಮೂರು ರಾಷ್ಟ್ರಗಳ ಆಡಳಿತ ಹೊಂದಿದ್ದ ತ್ರಿರಾಷ್ಟ್ರಪತಿ ಎಂದು ಹೇಳುತ್ತಾರೆ. ಬಾದಾಮಿ ಪಟ್ಟಣದಲ್ಲಿ ಮುಂದಿನ ಒಂದು ವರ್ಷದಲ್ಲಿ ಪುಲಕೇಶಿಯ ಪುತ್ಥಳಿ ಅನಾವರಣ ಮಾಡುವುದಾಗಿ ಹೇಳಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ನಮ್ಮ ಮಕ್ಕಳಿಗೆ ಚಾಲುಕ್ಯ ಅರಸರು, ನಾಡಿನ ವೀರ ವನಿತೆಯರು, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ ಅವರಂತ ಇತಿಹಾಸ ಕಲಿಸಲಿಲ್ಲ. ಮೊಗಲರು, ಬ್ರಿಟಿಷರು ಇತಿಹಾಸವನ್ನು ಹೆಚ್ಚಾಗಿ ಹೇಳಿಕೊಟ್ಟರು. ಮೆಕಾಲೆ ಇತಿಹಾಸ ಓದಿ, ನಮ್ಮ ಶ್ರೇಷ್ಠ ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಮರೆತಿದ್ದೇವೆ ಎಂದರು.
ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಹೊಂದಲು ಪ್ರವಾಸಿಗರಿಗೆ ಹೆಚ್ಚಿನ ಸೌಕರ್ಯ ಕಲ್ಪಿಸಬೇಕು. ಇದಕ್ಕೆ ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗಗಳು ಹೆಚ್ಚಾಗಬೇಕು. ನಾನು ಬಾಣಾಪುರದಿಂದ ಶಿರೂರ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭಿಸಿದೆ. ಆದರೆ, ಪಟ್ಟದಕಲ್ಲಿನಿಂದ ಶಿರೂರ ವರೆಗೂ ಅರಣ್ಯ ಇಲಾಖೆಯಿಂದ ರಾಜ್ಯ ಸರ್ಕಾರ ಭೂಸ್ವಾದೀನ ಮಾಡಿಕೊಳ್ಳದೇ ಕಾಮಗಾರಿ ನಿಂತಿದೆ. ನಾನು ಗಡ್ಕರಿ ಅವರಿಗೆ ಮನವಿ ಮಾಡಿ ಹೆದ್ದಾರಿ ಪುನರಾರಂಭಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೇನೆ ಎಂದರು.
ಬಾಗಲಕೋಟೆ ಕುಡಚಿ ರೈಲು ಮಾರ್ಗ ಪೂರ್ಣ ಆಗಬೇಕಿದೆ. ಬಾದಾಮಿ, ಗುಳೇದಗುಡ್ಡ, ಬಾಗಲಕೋಟೆಯಲ್ಲಿ ರೈಲು ಮೇಲ್ಸೇತುವೆ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಆಗಿಲ್ಲ. ಈ ನಿಟ್ಟಿನಲ್ಲಿ ಇಲ್ಲಿ ಪಕ್ಷ ಮತ್ತು ಭೇದ ಮರೆತು ಎಲ್ಲರೂ ಸೇರಿ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಇಲ್ಲಿನ ಮೂಲ ಸೌಕರ್ಯಗಳಿಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ನಾನು ಕೇಂದ್ರದಿಂದ ಅನುದಾನ ತರುವೆ ಎಂದು ಹೇಳಿದರು.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಭಾರತದಲ್ಲಿ ನೌಕಾಪಡೆ ಹೊಂದಿದ್ದ ಮೊದಲ ರಾಜ ಇಮ್ಮಡಿ ಪುಲಕೇಶಿ ಎನ್ನುವುದನ್ನು ಎಲ್ಲರೂ ತಿಳಿಯಬೇಕು. ಈ ಚಾಲುಕ್ಯ ಉತ್ಸವನ್ನು ಬರೀ ರಸಮಂಜರಿ ಕಾರ್ಯಕ್ರಮಕ್ಕಾಗಿ ಮಾಡುತ್ತಿಲ್ಲ. ನಮ್ಮ ಮುಂದಿನ ಪೀಳಿಗೆಗೆ ಇತಿಹಾಸ ಅರ್ಥೈಸಿಕೊಳ್ಳಬೇಕು. ನಾವು ಬೇರೆ ದೇಶದ ರಾಜರನ್ನು ಹೊಗಳುತ್ತೇವೆ. ನಮ್ಮಲ್ಲೇ ಇದ್ದ ಮಹಾರಾಜ ಇಮ್ಮಡಿ ಪುಲಕೇಶಿ ಬಗ್ಗೆ ತಿಳಿದುಕೊಳ್ಳಬೇಕು. ನಮ್ಮ ಮನೆ ನಮ್ಮ ಊರಲ್ಲಿ ಜನಿಸಿದ ವೀರಶೂರರ ಬಗ್ಗೆ ಅರಿತುಕೊಳ್ಳಬೇಕಿದೆ. ನಮ್ಮ ಸರ್ಕಾರದ ಉದ್ಧೇಶವೂ ಇದೆ ಆಗಿದೆ. ಅದೇ ಕಾರಣಕ್ಕೆ ನಿಂತುಹೋಗಿದ್ದ ಚಾಲುಕ್ಯ ಉತ್ಸವವನ್ನು ನಮ್ಮ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿ, ಅದಕ್ಕೆ ಅನುದಾನ ಒದಗಿಸಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ ಎಂದರು.
ಪಟ್ಟದಕಲ್ಲು ಗ್ರಾ.ಪಂ. ನೀಲಮ್ಮ ಕಲಗಗ್ಗರಿ ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ. ಸಿಇಒ ಶಶಿಧರ ಕುರೇರ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ವೇದಿಕೆಯಲ್ಲಿ ಇದ್ದರು.

ಸಚಿವರ ಗೈರು

ಚಾಲುಕ್ಯ ಉತ್ಸವದ ಉದ್ಘಾಟನೆಗೆ ಸಿಎಂ ಆಗಮಿಸಿದ್ದರಿಂದ ಅನೇಕ ಸಚಿವರು ಹಾಜರಿದ್ದರು. ಆದರೆ, 2ನೇ ದಿನ ಪಟ್ಟದಕಲ್ಲಿನಲ್ಲಿ ನಡೆದ ಚಾಲುಕ್ಯ ಉತ್ಸವ ಉದ್ಘಾಟನೆ ಮಾಡಬೇಕಿದ್ದ ಡಿಸಿಎಂ ಡಿ.ಕೆ. ಶಿವಕುಮಾರ, ಅಧ್ಯಕ್ಷತೆ ವಹಿಸಬೇಕಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ, ಜವಳಿ ಸಚಿವ ಶಿವಾನಂದ ಪಾಟೀಲ, ಕಾರ್ಮಿಕ ಸಚಿವ ಸಂತೋಷ ಲಾಡ್ ಸೇರಿ ಆಹ್ವಾನ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದ ಅನೇಕ ಜನಪ್ರತಿನಿಧಿಗಳು ಉತ್ಸವಕ್ಕೆ ಆಗಮಿಸಲಿಲ್ಲ.