ಬಾಗಲಕೋಟೆ ರೋಟರಿ ಕ್ಲಬ್ ವತಿಯಿಂದ ಬುಧವಾರ ಸಂಜೆ ನೂತನ ಶಾಸಕ ಉಮೇಶ ಮೇಟಿ ಅವರನ್ನು ಸನ್ಮಾನಿಸಲಾಯಿತು. ಬಿಟಿಡಿಎ ಅಧ್ಯಕ್ಷ ಪ್ರಕಾಶ, ರೋಟರಿ ಅಧ್ಯಕ್ಷ ಮಲ್ಲಿಕಾರ್ಜುನ ಹದ್ಲಿ, ಎಸ್.ಕೆ. ಯಡಹಳ್ಳಿ, ಡಾ. ನಾರಾಯಣ ಹೆರಕಲ್ ಮತ್ತಿತರರು ಇದ್ದರು. 
ಬಾಗಲಕೋಟೆ

ವ್ಯಾಪಾರಸ್ಥರ ಸಮಸ್ಯೆ ಪರಿಹಾರಕ್ಕೆ ಜೋಡೆತ್ತಿನ ಕೆಲಸ

ದತ್ತಾತ್ರೇಯ ಪಿ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ಬಿಟಿಡಿಎ ನೂತನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅಭಯ
  • ರೋಟರಿಯಿಂದ ಸನ್ಮಾನ
  • ವ್ಯಾಪಾರಸ್ಥರು ಮತ್ತು ಸಂತ್ರಸ್ತರಿಗೆ ಸಂಬಂಧಿಸಿದಂತೆ ಸಮಸ್ಯೆ ರಾಜ್ಯಮಟ್ಟದಲ್ಲಿ ಬಗೆಹರಿಯುವಂತಿದ್ದರೆ ಅದಕ್ಕೆ ಶಾಸಕರು ಸ್ಪಂದಿಸಲಿದ್ದಾರೆ.
ಬಾಗಲಕೋಟೆ: ನಗರದ ವ್ಯಾಪಾರಸ್ಥರು, ಸಂತ್ರಸ್ತರ ಸಮಸ್ಯೆಗಳು ಬಹಳಷ್ಟು ಇವೆ. ಅವುಗಳ ಪರಿಹಾರಕ್ಕಾಗಿ ನಾನು ಮತ್ತು ಕ್ಷೇತ್ರದ ನೂತನ ಶಾಸಕ ಉಮೇಶ ಮೇಟಿ ಸೇರಿ ಜೋಡೆತ್ತುಗಳಾಗಿ ಕೆಲಸ ಮಾಡುತ್ತೇವೆ ಎಂದು ಬಿಟಿಡಿಎ ನೂತನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹೇಳಿದರು.
ನವನಗರದ ನಾವಲಗಿ ಜಿನ್‌ನಲ್ಲಿ ರೋಟರಿ ಕ್ಲಬ್‌ನಿಂದ ಬುಧವಾರ ಸಂಜೆ ನೂತನ ಶಾಸಕ ಉಮೇಶ ಮೇಟಿ, ಬಿಟಿಡಿಎ ನೂತನ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಅವರಿಗೆ ಹಮ್ಮಿಕೊಂಡಿದ್ದ ಗೌರವ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ವ್ಯಾಪಾರಸ್ಥರು ಮತ್ತು ಸಂತ್ರಸ್ತರಿಗೆ ಸಂಬಂಧಿಸಿದಂತೆ ಸಮಸ್ಯೆ ರಾಜ್ಯಮಟ್ಟದಲ್ಲಿ ಬಗೆಹರಿಯುವಂತಿದ್ದರೆ ಅದಕ್ಕೆ ಶಾಸಕರು ಸ್ಪಂದಿಸಲಿದ್ದಾರೆ. ಬಿಟಿಡಿಎ ವ್ಯಾಪ್ತಿಯಲ್ಲಿ ಇದ್ದರೆ ನನ್ನ ಗಮನಕ್ಕೆ ತರಬೇಕು ಎಂದು ಮನವಿ ಮಾಡಿದರು.
ರೋಟರಿ ಕ್ಲಬ್ ವಿಶ್ವದ್ಯಂತ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಸಂಸ್ಥೆಯಾಗಿದೆ. ಹಿಂದೆ ನಾನೂ ಕೂಡ ಈ ಸಂಸ್ಥೆಯ ಸದಸ್ಯನಾಗಿದ್ದೆ. ರೋಟರಿ ಕ್ಲಬ್ ನಡೆಸುವ ಎಲ್ಲ ಸೇವಾ ಕಾರ್ಯಗಳಿಗೆ ಬಿಟಿಡಿಎ ಮತ್ತು ಬಸವೇಶ್ವರ ಬ್ಯಾಂಕ್‌ನಿಂದ ಸಹಕಾರ ನೀಡಲಾಗುವುದು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಉಮೇಶ ಮೇಟಿ, ವಿಶ್ವದಾದ್ಯಂತ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ರೋಟರಿ ಕ್ಲಬ್‌ನ ಸೇವೆ ಮಾದರಿಯಾಗಿದೆ. ಈ ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು, ಮಾದರಿ ಬಾಗಲಕೋಟೆ ನಿರ್ಮಾಣದ ನನ್ನ ಕಲ್ಪನೆ ಮತ್ತು ಗುರಿಗೆ ನನ್ನೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ರೋಟರಿ ಪಕ್ಷಾತೀತ, ಜಾತ್ಯಾತೀತವಾದ ಸಾಮಾಜಿಕ ಸೇವಾ ಸಂಘಟನೆ. ಈ ಸಂಸ್ಥೆಯಲ್ಲಿ ಇರುವವರು ಪ್ರತಿಯೊಬ್ಬರೂ ಪ್ರಜ್ಞಾವಂತರು, ಸಮಾಜಕ್ಕಾಗಿ ತಮ್ಮದೇ ಆದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕೊಂಡಾಡಿದರು.
ರೋಟರಿ ಕ್ಲಬ್‌ನ ಸಹಾಯಕ ಗೌವರ್ನರ್ ಡಾ. ನಾರಾಯಣ ಹೆರಕಲ್ ಅವರು, ರೋಟರಿ ಕ್ಲಬ್‌ನಲ್ಲಿ ಎಲ್ಲ ಕಡೆಗೂ ನಡೆಯುವ ಸಾಮಾಜಿಕ ಸೇವಾ ಕಾರ್ಯಗಳನ್ನು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಮಲ್ಲಿಕಾರ್ಜುನ ಹದ್ಲಿ, ಜಿಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ಮುಖಂಡರಾದ ನಾಗರಾಜ ಹದ್ಲಿ, ಮಲ್ಲಿಕಾರ್ಜುನ ಮೇಟಿ, ಶಶಿಕಾಂತ ಪೂಜಾರ, ಶಿವಾನಂದ ಅಬ್ದುಲ್‌ಪುರ, ರಾಚಪ್ಪ ಪಟ್ಟಣದ, ವೈ.ವೈ. ತಿಮ್ಮಾಪುರ, ನಿಂಗಣ್ಣ ಗೋಡಿ, ಸಂತೋಷ ಪಾಟೀಲ, ಎಸ್.ಕೆ. ಯಡಹಳ್ಳಿ, ವಿಶ್ವನಾಥ ವೈಜಾಪುರ, ಮಹದೇವ ದಂದರಗಿ, ಶ್ರೀಶೈಲ ಬಿರಾದಾರ, ಶಿವಕುಮಾರ ನಂದಿಕೋಲಮಠ, ಮತ್ತಿತರರು ಇದ್ದರು.