ಶಾಸಕ, ಪಂಚಮಸಾಲಿ ಸಮಾಜದ ಮುಖಂಡ ಸಿದ್ದು ಸವದಿ.
- ಸಿಎಂಗೆ ಶಾಸಕ ಸಿದ್ದು ಸವದಿ ನೇರ ಸವಾಲ್
- ಪಂಚಮಸಾಲಿಗೆ 2ಎ ಮೀಸಲಾತಿ ಕೊಡುವ ಭರವಸೆಗೆ ಪ್ರತಿಕ್ರಿಯೆ
- ನೀವು ಯಾರ ಮೀಸಲಾತಿ ಕಿತ್ತುಕೊಂಡು ಪಂಚಮಸಾಲಿಗೆ 2ಎ ಗೆ ಮೀಸಲಾತಿ ಕೊಡುತ್ತೀರಿ? ಎಂದು ಮೊದಲು ಸ್ಪಷ್ಟಪಡಿಸಿ
ಬಾಗಲಕೋಟೆ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಬಗ್ಗೆ ಇಷ್ಟು ದಿನ ಯಾವುದೇ ಕ್ರಮ ತೆಗೆದುಕೊಳ್ಳದೇ ಈಗ ಉಪ ಚುನಾವಣೆ ವೇಳೆ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ಆಮಿಷವೊಡ್ಡುತ್ತಿದ್ದಾರೆ ಎಂದು ತೇರದಾಳ ಶಾಸಕ, ಪಂಚಮಸಾಲಿ ಸಮಾಜದ ಮುಖಂಡ ಸಿದ್ದು ಸವದಿ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗ ವಿವಿಧ ವರ್ಗಗಳಲ್ಲಿ ಮೀಸಲಾತಿ ಸೌಲಭ್ಯ ಪಡೆಯುವ ಮುಸ್ಲಿಂ ಸಮುದಾಯಕ್ಕೆ ಒಂದು ಕಡೆಗೆ ಮೀಸಲಾತಿ ಪಡೆಯಬೇಕೆಂದು ಶೇ. 4 ಮೀಸಲಾತಿ ತೆಗೆದು ಅದನ್ನು 2ಸಿ ಮತ್ತು 2 ಡಿಗೆ ಹಂಚಿಗೆ ಮಾಡಿದ್ದರು.
ಇದೀಗ ನೀವು ಯಾರ ಮೀಸಲಾತಿ ಕಿತ್ತುಕೊಂಡು ಪಂಚಮಸಾಲಿಗೆ 2ಎ ಗೆ ಮೀಸಲಾತಿ ಕೊಡುತ್ತೀರಿ? ಎಂದು ಮೊದಲು ಸ್ಪಷ್ಟಪಡಿಸಿ, ಅದನ್ನು ಬಿಟ್ಟು ಸಮಾಜದ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಬೇಡಿ ಎಂದರು.
ನಿಮ್ಮ ಈ ಭರವಸೆ ಬರೀ ಬೊಗಸ್, ಚುನಾವಣೆ ಗಿಮಿಕ್ ಎಂದು ಹೇಳಬಹುದು. ಸಿದ್ದರಾಮಯ್ಯ ಅವರು ಸುಳ್ಳು ಭರವಸೆಗೆ ಸಮಾಜದವರು ಕಿವಿಗೊಡಬಾರದು. 2028ಕ್ಕೆ ಬಿಜೆಪಿ ಸರ್ಕಾರ ಬರುತ್ತದೆ. ನಾವು 2ಸಿ ಮತ್ತು 2ಡಿ ಪ್ರತ್ಯೇಕ ವರ್ಗದ ಅಡಿಯಲ್ಲಿ ಮೀಸಲಾತಿ ನೀಡುತ್ತೇವೆ. ಅವರ ಬೊಗಸ್ ಮಾತಿಗೆ ಮರಳಾಗದೇ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.