ಬಾಗಲಕೋಟೆ ಜಿಲ್ಲಾ ಪ್ರವಾಸದ ಅಂಗವಾಗಿ ಕೂಡಲಸಂಗಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪ್ರಜಾಸೌಧ ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು. 
ಬಾಗಲಕೋಟೆ

ಪ್ರಜಾಸೌಧ ನಿರ್ಮಾಣದ ಹೋರಾಟಕ್ಕೆ ಸಿಎಂ ಸ್ಪಂದನೆ

ಪ್ರಮುಖ ಮುಖ್ಯಾಂಶಗಳು

  • ಬನಹಟ್ಟಿ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ
  • ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ
  • ಬನಹಟ್ಟಿ ನಗರಸಭೆ ವ್ಯಾಪ್ತಿಯ ಸಿಟಿಎಸ್ ನಂ. 8822ರಲ್ಲಿರುವ 3.25 ಎಕರೆ ಸರ್ಕಾರಿ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು.
ರಬಕವಿ/ಬನಹಟ್ಟಿ : ಬನಹಟ್ಟಿ ನಗರದಲ್ಲೇ ಪ್ರಜಾಸೌಧ ನಿರ್ಮಿಸಬೇಕೆಂಬ ಆಗ್ರಹದೊಂದಿಗೆ ಕಳೆದ 29 ದಿನಗಳಿಂದ ಬನಹಟ್ಟಿಯಲ್ಲಿ ನಿರಂತರ ಸರದಿ ಸತ್ಯಾಗ್ರಹ ನಡೆಸುತ್ತಿರುವ ಹೋರಾಟಗಾರರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಂದಿಸಿದ್ದು, ಪ್ರಜಾಸೌಧ ನಿರ್ಮಾಣದ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಪ್ರವಾಸದ ಅಂಗವಾಗಿ ಶುಕ್ರವಾರ ಕೂಡಲಸಂಗಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಅವರನ್ನು ಪ್ರಜಾಸೌಧ ಹೋರಾಟ ಸಮಿತಿ ಅಧ್ಯಕ್ಷ ಶಂಕರ ಸೊರಗಾಂವಿ ನೇತೃತ್ವದ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು. ಬನಹಟ್ಟಿಯಲ್ಲಿ ನಡೆಯುತ್ತಿರುವ ನಿರಂತರ ಹೋರಾಟದ ಕುರಿತು ಸಮಗ್ರ ಮಾಹಿತಿ ನೀಡಿ, ನಗರದಲ್ಲೇ ಪ್ರಜಾಸೌಧ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಬನಹಟ್ಟಿ ನಗರಸಭೆ ವ್ಯಾಪ್ತಿಯ ಸಿಟಿಎಸ್ ನಂ. 8822ರಲ್ಲಿರುವ 3.25 ಎಕರೆ ಸರ್ಕಾರಿ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು. ಈಗಾಗಲೇ ಪ್ರಸ್ತಾಪಿಸಿರುವ ಸ್ಥಳದ ಕಾಮಗಾರಿಗೆ ಸಂಬಂಧಿಸಿದ ಆದೇಶವನ್ನು ಮರುಪರಿಶೀಲಿಸಿ, ಬನಹಟ್ಟಿ ಜನರ ಬಹುದಿನಗಳ ಬೇಡಿಕೆಗೆ ನ್ಯಾಯ ಒದಗಿಸಬೇಕು. 29 ದಿನಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ಜನರ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಬಾರದು. ಕೂಡಲೇ ಸ್ಪಂದಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೋರಾಟಗಾರರ ಅಹವಾಲು ಆಲಿಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರಾಜೇಂದ್ರ ಭದ್ರನ್ನವರ, ಮಲ್ಲು ಬಾನಕಾರ, ಪ್ರಶಾಂತ ಕೊಳಕಿ, ಶಿವಾನಂದ ಕಾಗಿ, ಮಾಳು ಹಿಪ್ಪರಗಿ, ಈಶ್ವರ ಕಾಡದೇವರ, ಬುಡಾನ ಜಮಾದಾರ, ಈಶ್ವರ ಪಾಟೀಲ, ಅಸ್ಲಂ ಗುಲರ್ಹೊಸೂರ, ಮೌಲಾ ಸಂತೆ, ಅಜೀಜ್ ಶೇಖ್, ಸುರೇಶ ಪಾಟೀಲ, ಸಂಜು ಡಾಗಾ ಇತರರಿದ್ದರು.