ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಸೇರಿರುವ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮ ಕ್ಷೇತ್ರದಲ್ಲಿ ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಕೃಷ್ಣೆಗೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ, ಶಾಸಕರಾದ ಆರ್.ಬಿ.ತಿಮ್ಮಾಪುರ, ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಉಮೇಶ ಮೇಟಿ ಇತರರು ಇದ್ದರು. 
ಬಾಗಲಕೋಟೆ

ತ್ರಿವೇಣಿ ಸಂಗಮದಲ್ಲಿ ಸಿಎಂ ಬಾಗಿನ ಅರ್ಪಣೆ

ಬಾಗಲಕೋಟೆ:
ಬಾಗಲಕೋಟೆ ಜಿಲ್ಲೆಯ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಹಾಗೂ ಖುದ್ದು ಜಮೀನುಗಳಿಗೆ ತೆರಳಿ ಬೆಳೆಹಾನಿಯ ಪರಿಶೀಲನೆಯನ್ನು ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಡೆಸಿದರು.
ಬೆಂಗಳೂರನಿAದ ಹೆಲಿಕ್ಯಾಪ್ಟರ್ ಮೂಲಕ ಆಗಮಿಸಿದ ಅವರು, ಬಳ್ಳಾರಿ, ವಿಜಯನಗರ ಹಾಗೂ ಬಾಗಲಕೋಟೆ ಜಿಲ್ಲೆಯ ಬರಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಮಧ್ಯಾಹ್ನ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮ ಸುಕ್ಷೇತ್ರಕ್ಕೆ ಆಗಮಿಸಿದರು.
ತುಂಬಿ ಹರಿಯುತ್ತಿರುವ ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿಗಳು ಸೇರಿರುವ ತ್ರಿವೇಣಿ ಸಂಗಮಕ್ಕೆ ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಬಳಿಕ ಸಂಗಮೇಶ್ವರ ದೇವಸ್ಥಾನಕ್ಕೆ ತೆರಳಿ, ಸಂಗಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಬರ ಪರಿಸ್ಥಿತಿಯಿಂದ ಹಾನಿಯಾಗಿರುವ ಬೆಳೆಗಳ ವೀಕ್ಷಣೆ ಮಾಡಿದರು.
ಹುನಗುಂದ ಪಟ್ಟಣದ ಹೊರವಲಯದ ಬಾಳವ್ವ ನಂದಪ್ಪ ಬಾರಕೇರ ಅವರ ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳೆ ವೀಕ್ಷಿಸಿದರು. ೮ ಎಕರೆ ಬಿತ್ತನೆ ಮಾಡಿದ್ದು, ನಾಲ್ಕು ಎಕರೆ ಹರಗಿದ್ದೇವೆ. ಈ ನಾಲ್ಕು ಎಕರೆ ಮಳೆ ಇಲ್ಲದೇ ಒಣಗುತ್ತಿವೆ. ಇಷ್ಟೊತ್ತಿಗಾಗಲೇ ಈರುಳ್ಳಿ ಗಡ್ಡಿ ಆಗಬೇಕಿತ್ತು. ಮೆಣಸಿನಕಾಯಿ ಹೂವು ಬಿಡಬೇಕಿತ್ತು. ಆದರೆ, ಬೆಳೆ ನೆಲಬಿಟ್ಟು ಮೇಲೆದ್ದಿಲ್ಲ ಎಂದು ಬಾಳವ್ವ ಮತ್ತು ನಂದಪ್ಪ ದಂಪತಿ ಸಿಎಂ ಎದುರು ಅಳಲು ತೋಡಿಕೊಂಡರು.
ಹುನಗುಂದ ತಾಲೂಕು ಬರಪೀಡಿತ ಎಂದು ಘೋಷಣೆ ಆಗಿಲ್ಲ. ಕಳೆದ ವರ್ಷ ಅತೀವೃಷ್ಟಿಯಿಂದ ಬೆಳೆಹಾನಿ ಆಗಿತ್ತು. ಈ ವರ್ಷ ಬರ ಬಿದ್ದು ಬೆಳೆಹಾನಿಯಾಗಿದೆ. ಹೀಗೆಯೇ ಆದರೆ ರೈತರ ಪರಿಸ್ಥಿತಿ ಹೇಗೆ ಎಂದು ಸಂಕಷ್ಟ ಬಿಚ್ಚಿಟ್ಟರು. ಅದೇ ಜಮೀನಿನ ಪಕ್ಕದಲ್ಲಿ ಇದ್ದ ಹನಮಂತ ಹುನಗುಂದ ಅವರ ಸೂರ್ಯಕಾಂತಿ ಬೆಳೆಯನ್ನು ವೀಕ್ಷಿಸಿದ ಸಿಎಂ ಅವರಿಗೆ, ತೆನೆ ಇದ್ದರೂ ಅದರಲ್ಲಿ ಕಾಳು ಇಲ್ಲದಿರುವುದನ್ನು ಗಮನಿಸಿದರು. ಬಳಿಕ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮದ ಪದ್ಮಶ್ರೀ ಪವಾರ ಅವರ ಹಾನಿಯಾಗಿದ್ದ ೫.೨೯ ಎಕರೆ ಸೂರ್ಯಕಾಂತಿ ಬೆಳೆ ಹಾಗೂ ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ ಸಂಗಮೇಶ ಕರಲಿಂಗನವರ ಅವರ ತೊಗರಿ ಬೆಳೆಹಾನಿ ವೀಕ್ಷಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ, ಶಾಸಕರಾದ ಆರ್.ಬಿ.ತಿಮ್ಮಾಪುರ, ಜೆ.ಟಿ.ಪಾಟೀಲ, ಭೀಮಸೇನ ಚಿಮ್ಮನಕಟ್ಟಿ, ಉಮೇಶ ಮೇಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಜಿಲ್ಲೆಯ ಅಽಕಾರಿಗಳು ಇದ್ದರು.
ಬಸವಣ್ಣನ ಬೆಳ್ಳಿ ಮೂರ್ತಿ, ಗದೆ ಉಡುಗೊರೆ :
ಕೂಡಲಸಂಗಮ ಕ್ಷೇತ್ರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಂಗಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉಸ್ತುವಾರಿ ಸಚಿವ ಕಾಶಪ್ಪನವರ ಕುಟುಂಬದಿAದ ಸಿಎಂಗೆ ಬಸವಣ್ಣನ ಬೆಳ್ಳಿ ಮೂರ್ತಿ ಹಾಗೂ ಬೆಳ್ಳಿಯ ಗದೆಯನ್ನು ನೀಡಿ ಗೌರವಿಸಿದರು.
ಬೇವಿನಮಟ್ಟಿಗೆ ನಿಲ್ಲದ ಸಿಎಂ; ರೈತರು ಬೇಸರ :
ಪೂರ್ವ ನಿಗದಿಯಂತೆ ಹುನಗುಂದ ತಾಲೂಕಿನ ಬೇವಿನಮಟ್ಟಿ ಗ್ರಾಮದ ಸುಶೀಲಾ ಪೊಲೀಸ್ ಪಾಟೀಲ ಅವರ ಮೆಣಸಿನಕಾಯಿ ಬೆಳೆ ಹಾಗೂ ಸಂಗಪ್ಪ ಅವಟಗೇರಿ ಅವರ ಹೆಸರು ಮತ್ತು ಈರುಳ್ಳಿ ಬೆಳೆಹಾನಿ ವೀಕ್ಷಿಸಬೇಕಿತ್ತು. ಆದರೆ, ಸಮಯದ ಅಭಾವದಿಂದ ಮುಖ್ಯಮಂತ್ರಿ ಡಿಕೆಶಿ ಅವರು ಅದೇ ಮಾರ್ಗದಲ್ಲಿ ತೆರಳಿದರಾದರೂ ಬೆಳೆಹಾನಿ ಪರಿಶೀಲಿಸದೇ ಹೋದರು. ಇದರಿಂದ ಅಲ್ಲಿ ಸೇರಿದ್ದ ರೈತರು ತೀವ್ರ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರವು ರೈತರ ಸಹಾಯಕ್ಕೆ ಬರಬೇಕು:
ಬೆಳೆಹಾನಿ ವೀಕ್ಷಿಸಿದ ಬಳಿಕ ಶಿರೂರ ಗ್ರಾಮದಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ, ಸೂರ್ಯಕಾಂತಿ, ಈರುಳ್ಳಿ, ಮೆಣಸಿನಕಾಯಿ, ತೊಗರಿ ಯಾವುದೇ ಬೆಳೆ ಬಂದಿಲ್ಲ. ನಾನು ರೈತರು, ಅಽಕಾರಿಗಳು ಮತ್ತು ಶಾಸಕರಿಂದ ಎಲ್ಲವನ್ನು ಕೇಳಿದ್ದೇನೆ. ಎಲ್ಲ ಕಡೆಗೂ ಬರ ವೀಕ್ಷಣೆ ನಡೆಯುತ್ತಿದೆ. ರೈತರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು ಎಂದು ಚರ್ಚೆ ಮಾಡುತ್ತಿದ್ದೇನೆ ಎಂದರು.
ಕೇAದ್ರ ಸರ್ಕಾರವೂ ಸಹ ರೈತರ ಸಹಾಯಕ್ಕೆ ಬರಬೇಕು. ಇದರಲ್ಲಿ ಬಿಜೆಪಿಯವರ ಜವಾಬ್ದಾರಿಯೂ ಇದೆ. ಕೇಂದ್ರ ಸರ್ಕಾರಕ್ಕೆ ಅವರೇ ಹೇಳಿ ರೈತರ ಸಾಲ ಮನ್ನಾ ಮಾಡಿಸಬೇಕು. ಬೆಳೆಹಾನಿ ಪರಿಹಾರ ಕೊಡೆಸಬೇಕು. ಇದನ್ನು ಅವರು ಮಾಡಿಸುತ್ತಾರೆ ಎನ್ನುವ ನಂಬಿಕೆ ನನಗಿದೆ. ಇನ್ನು ರೈತರಿಗೆ ರಾಜ್ಯ ಸರ್ಕಾರದಿಂದ ಏನು ಸಹಾಯ ಮಾಡಬೇಕು ಅದನ್ನು ಮಾಡುತ್ತೇವೆ. ಜೊತೆಗೆ ಕೇಂದ್ರಕ್ಕೆ ಏನು ವರದಿ ಕೊಡಬೇಕು ಅದನ್ನು ಸಲ್ಲಿಸುತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕೆಲವಡೆ ಹಸಿರು ಇದ್ದರೂ ಬೆಳೆ ಬರುವುದಿಲ್ಲ. ಕೆಲವರು ಈ ಭಾರಿಯ ಪರಿಸ್ಥಿತಿ ಕಂಡು ಹೊಲಕ್ಕೆ ಬೀಜವನ್ನೆ ಹಾಕಿಲ್ಲ. ಇನ್ನು ಕೆಲವರು ಉಳುಮೆ ಮಾಡಲು ಹೋಗಿ ಹಾನಿ ಅನುಭವಿಸಿದ್ದಾರೆ. ಆದಷ್ಟು ಬೇಗ ಬರಪೀಡಿತ ತಾಲೂಕುಗಳ ಎರಡನೇ ಲಿಸ್ಟ್ ಮಾಡುತ್ತೇವೆ ಎಂದು ತಿಳಿಸಿದರು.