ಗುಳೇದಗುಡ್ಡ ಸಮೀಪದ ತೋಗುಣಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬುಧವಾರ ಜಿಪಂ ಸಿಇಒ ಗಜಾನನ ಬಾಲೆ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಸಿಇಒ ಸತೀಶ ಮಾಕೊಂಡ, ಪಿಡಿಒಗಳಾದ ರಾಮಚಂದ್ರ ಮೇತ್ರಿ, ಆರತಿ ಕ್ಷತ್ರಿ, ಸುಭಾಷ ಚಲವಾದಿ ಮತ್ತಿತರರಿದ್ದರು. 
ಬಾಗಲಕೋಟೆ

ಕಸಕಡ್ಡಿ ತೆರವುಗೊಳಿಸಿ ಪರಿಸರ ಸ್ವಚ್ಛತೆ ಕಾಪಾಡಿ

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಜಿಪಂ ಸಿಇಒ ಗಜಾನನ ಬಾಲೆ ಸೂಚನೆ
  • ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ

ಗುಳೇದಗುಡ್ಡ: ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವ ಜತೆಗೆ ಸಾರ್ವಜನಿಕರಿಗೆ ಅಗತ್ಯ ಮೂಲಸೌಕರ್ಯ ಹಾಗೂ ಆರೋಗ್ಯ ಸೇವೆ ಸಮರ್ಪಕವಾಗಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಗಜಾನನ ಬಾಲೆ ಅಧಿ

ಕಾರಿಗಳಿಗೆ ಸೂಚಿಸಿದರು.

ಸಮೀಪದ ತೋಗುಣಶಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿವಿಧ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಆರೋಗ್ಯ ಕೇಂದ್ರದ ಸುತ್ತಮುತ್ತ ಬೆಳೆದಿದ್ದ ಗಿಡಗಂಟಿ, ಕಸಕಡ್ಡಿ ತೆರವುಗೊಳಿಸಿ ಪರಿಸರವನ್ನು ಸ್ವಚ್ಛವಾಗಿಡುವಂತೆ ಸೂಚಿಸಿದರು. ಗ್ರಾಮದ ರಸ್ತೆಗಳಲ್ಲಿ ಹರಿಯುತ್ತಿದ್ದ ಚರಂಡಿ ನೀರು ಹಾಗೂ ಕಸವನ್ನು ಗಮನಿಸಿದ ಅವರು, ಎರಡು ದಿನಗಳಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಪಿಡಿಒಗೆ ಸೂಚನೆ ನೀಡಿದರು.
ಆರೋಗ್ಯ ಕೇಂದ್ರದಲ್ಲಿ ವಾರಕ್ಕೆ ಎರಡು ದಿನ ಮಾತ್ರ ವೈದ್ಯರು ಲಭ್ಯವಿರುವ ಕುರಿತು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿ, ವೈದ್ಯರು ಕರ್ತವ್ಯ ನಿರ್ವಹಿಸುವ ದಿನಗಳ ವಿವರವನ್ನು ಕೇಂದ್ರದಲ್ಲಿ ಪ್ರಕಟಿಸುವಂತೆ ಹಾಗೂ ಹೆಚ್ಚುವರಿ ಖಾಯಂ ವೈದ್ಯರನ್ನು ನೇಮಿಸುವಂತೆ ಮನವಿ ಮಾಡಿದರು. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಸಿಇಒ ಭರವಸೆ ನೀಡಿದರು.
ತೋಗುಣಶಿ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂರು ವರ್ಷಗಳಿಂದ ಎಸ್‌ಸಿಎಸ್‌ಟಿ ಕಾಲನಿ ಅಭಿವೃದ್ಧಿ ಅನುದಾನ ಬಳಕೆಯಾಗದಿರುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು. ಪಿಡಿಒ ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪವನ್ನೂ ಮಾಡಿದರು.
ಜಲಜೀವನ್ ಮಿಷನ್ ಕಾಮಗಾರಿಯನ್ನು ಮುಂದಿನ ತಿಂಗಳಲ್ಲಿ ಪೂರ್ಣಗೊಳಿಸುವಂತೆ ಹಾಗೂ ಗ್ರಾಮದಲ್ಲಿ ತೆರಿಗೆ ಸಂಗ್ರಹವನ್ನು ಸಮರ್ಪಕವಾಗಿ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಗುಳೇದಗುಡ್ಡ ಪಟ್ಟಣದ ಚೌಬಜಾರ್‌ನ ಬಾಲಕಿಯರ ವಸತಿನಿಲಯ ಹಾಗೂ ಇಂಜನವಾರಿ ಗ್ರಾಮದ ಪ್ರಗತಿಪರ ಕೃಷಿಕ ತಿಪ್ಪಣ್ಣ ಗೌಡರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಪಂ ಸಿಇಒ ಸತೀಶ ಮಾಕೊಂಡ, ಪಿಡಿಒಗಳಾದ ರಾಮಚಂದ್ರ ಮೇತ್ರಿ, ಆರತಿ ಕ್ಷತ್ರಿ, ಸುಭಾಷ ಚಲವಾದಿ, ಗೂಳಪ್ಪ ಹೊರಟ್ಟಿ ಸೇರಿ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.