ಬಾಗಲಕೋಟೆಯ ನವನಗರದ ವಿವಿಧ ಸೆಕ್ಟರ್‌ಗಳಿಗೆ ಅಧಿಕಾರಿಗಳ ಜೊತೆ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ಬಿಟಿಡಿಎ ಅಧ್ಯಕ್ಷ ತಪಶೆಟ್ಟಿ ಸೂಚನೆ
- ಅಧಿಕಾರಿಗಳ ಜೊತೆ ಪರಿಶೀಲನೆ
- ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿ
ಬಾಗಲಕೋಟೆ: ಮಳೆಗಾಲ ಆರಂಭವಾಗಿದೆ. ಮಳೆ ನೀರು ಸರಾಗವಾಗಿ ಹರಿದುಕೊಂಡು ಹೋಗಲು ಕೂಡಲೇ ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಇದರಿಂದ ಮಳೆಗಾಲದಲ್ಲಿ ಮಳೆ ನೀರು ರಸ್ತೆಗೆ ನುಗ್ಗಿ ಹಾಳಾಗುವುದು ಕಡಿಮೆ ಆಗುತ್ತದೆ. ಹೀಗಾಗಿ ಚರಂಡಿಗಳು ಕಸ ತುಂಬಿಕೊಳ್ಳದಂತೆ ನೋಡಿಕೊಳ್ಳಬೇಕು. ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಬಗ್ಗೆ ಮೇಲಿಂದ ಮೇಲೆ ಪರಿಶೀಲಿಸಬೇಕು ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸೂಚಿಸಿದರು.
ನವನಗರದ ವಿವಿಧ ಸೆಕ್ಟರ್‌ಗಳಿಗೆ ಅಧಿಕಾರಿಗಳ ಜೊತೆ ಸೋಮವಾರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು.
ಬಿಟಿಡಿಎನಲ್ಲಿ ಇ-ಸ್ವತ್ತು ಸಮಸ್ಯೆ ತೀವ್ರಗೊಂಡಿದ್ದು, ಕೆಲ ತಿಂಗಳಿಂದ ಸಾರ್ವಜನಿಕರು ತೀವ್ರ ಪರದಾಡುತ್ತಿರುವ ಬಗ್ಗೆ ಮತ್ತು ಆಕ್ರೋಶಗೊಂಡಿರುವ ಬಗ್ಗೆ ಸಾಕಷ್ಟು ದೂರುಗಳು ಇದ್ದವು. ಈ ಹಿನ್ನೆಲೆಯಲ್ಲಿ ಸೋಮವಾರ ತಪಶೆಟ್ಟಿ ಅವರು, ಬಿಟಿಡಿಎ ಕಾರ್ಯಾಲಯದ ಪಿಐಡಿ ಶಾಖೆಗೆ (ಇ-ಸ್ವತ್ತು) ಭೇಟಿ ನೀಡಿದರು.
ಸಂತ್ರಸ್ತರ ಕೆಲಸ ತ್ವರಿತವಾಗಿ ನಡೆಯಬೇಕು. ಸತಾಯಿಸಬಾರದು. ಪಿಡಿಐ ಶಾಖೆಗೆ ನಿಯೋಜಿಸಿರುವ ಸಿಬ್ಬಂದಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾಲಯದಲ್ಲಿ ಇದ್ದು ಕೆಲಸ ಮಾಡಬೇಕು ಎಂದು ಸೂಚಿಸಿದರು.
ಬೇವಿನಮಟಿ ್ಟ-ಸಿಗಿಕೇರಿ ಬೈಪಾಸ್ ರಸ್ತೆಯಲ್ಲಿ ಅಪಘಾತವಾದ ಬಗ್ಗೆ ಸ್ಥಳ ಪರಿಶೀಲಿಸಿ, ವಾಹನ ಅಪಘಾತ ಮಾಡಿ, ನಮ್ಮ ಪ್ರಾಧಿಕಾರಕ್ಕೆ ಆಗಿರುವ ನಷ್ಟದ ಬಗ್ಗೆ ವಾಹನ ಮಾಲೀಕರಿಗೆ ನೋಟಿಸ್ ನೀಡಿ, ನಷ್ಟ ವಸೂಲಿ ಮಾಡಬೇಕು. ಈ ಬಗ್ಗೆ ಆರ್‌ಟಿಒ ಕಚೇರಿಗೆ ದೂರು ಕೊಡಲು ನಿರ್ದೇಶನ ನೀಡಿದರು.
ಸೆಕ್ಟರ್ ನಂ. 21ರಲ್ಲಿ ಚರಂಡಿ ಹಾಗೂ ಅಗ್ನಿಶಾಮಕ ಕಚೇರಿ ಪಕ್ಕ ಇದ್ದ ಬಸ್ ನಿಲುಗಡೆ ಸ್ಥಳ ವೀಕ್ಷಿಸಿ, ನಿಲ್ದಾಣವನ್ನು ನವೀಕರಣಗೊಳಿಸಬೇಕು. ಸುತ್ತಮುತ್ತ ಇರುವ ಚರಂಡಿಗಳೆಲ್ಲವನ್ನು ಸ್ವಚ್ಛಗೊಳಿಸಬೇಕು. ಚರಂಡಿಗಳು ತುಂಬಿಕೊಂಡಿದ್ದರೆ ಮಳೆ ನೀರು ಹರಿದು ರಸ್ತೆಗಳು ಹಾಳಾಗುತ್ತವೆ. ಹೀಗಾಗಿ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದುಹೋಗುವಂತೆ ಸ್ಚಚ್ಛತೆ ಮತ್ತು ದುರಸ್ತಿ ಇದ್ದಲ್ಲಿ ಕೂಡಲೇ ಮಾಡಬೇಕು ಎಂದ ಅವರು, ಸೆಕ್ಟರ್ ನಂ. 29 ಮತ್ತು 85 ಮತ್ತಿತರ ಕಡೆಗೆ ತೆರಳಿ, ಅಲ್ಲಿನ ಕುಡಿವ ನೀರಿನ ಕಾಮಗಾರಿ ವೀಕ್ಷಿಸಿ, ಕಾಮಗಾರಿಗೆ ವೇಗ ನೀಡುವಂತೆ ಸೂಚಿಸಿದರು.
ಬಿಟಿಡಿಎ ಅಧಿಕಾರಿಗಳಾದ ಸುರೇಶ ತೆಗ್ಗಿ, ಸೋಮಲಿಂಗ ನೋಟಗಾರ, ಪ್ರಶಾಂತ ಲೋಕಾಪುರ ಮತ್ತಿತರರು ಇದ್ದರು.