ಬಾದಾಮಿ ಪಟ್ಟಣದ ಇಮ್ಮಡಿ ಪುಲಕೇಶಿ ವೇದಿಕೆಯಲ್ಲಿ ಭಾನುವಾರ ಸಂಜೆ ಮೂರು ದಿನಗಳ ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಗಾರಿ ಭಾರಿಸುವ ಮೂಲಕ ಚಾಲನೆ ನೀಡಿದರು. ಸಚಿವರಾದ ಭೈರತಿ ಸುರೇಶ್, ಶಿವರಾಜ ತಂಗಡಗಿ, ಆರ್.ಬಿ.ತಿಮ್ಮಾಪುರ ಸೇರಿದಂತೆ ಮತ್ತಿತರರು ಇದ್ದರು. 
ಬಾಗಲಕೋಟೆ

ಚಾಲುಕ್ಯ ಉತ್ಸವಕ್ಕೆ ಮುಖ್ಯಮಂತ್ರಿ ವಿಧ್ಯುಕ್ತ ಚಾಲನೆ

ಪ್ರಮುಖ ಮುಖ್ಯಾಂಶಗಳು

  • ನಗಾರಿ, ಡೊಳ್ಳು, ಭಾರಿಸುವ ಮೂಲಕ ಉದ್ಘಾಟನೆ
  • ಚಾಲುಕ್ಯ ಅರಸರ ಆಡಳಿತ ಶೈಲಿಗೆ ತಮ್ಮ ಆಡಳಿತ ಹೋಲಿಕೆ
  • ಚಾಲುಕ್ಯರ ಇತಿಹಾಸ ಮತ್ತು ಚರಿತ್ರೆ ಕುರಿತು ಕಿರು ಹೊತ್ತಿಗೆಯನ್ನು ಸಹ ಬಿಡುಗಡೆ
ಬಾದಾಮಿ: ರಾಜ್ಯದಲ್ಲಿ ಎಲ್ಲ ಕಡೆಗಳಲ್ಲೂ ಉತ್ಸವಗಳು ನಡೆಯುತ್ತಿದ್ದರೂ ಕಳೆದ ಹತ್ತು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಚಾಲುಕ್ಯ ಉತ್ಸವಕ್ಕೆ ಕೊನೆಗೂ ಅದ್ದೂರಿ ಚಾಲನೆ ಸಿಕ್ಕಿದ್ದು, ಸೋಮವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರಕ್ಕೆ ಐದು ವರ್ಷ ಶಾಸಕರಿದ್ದಾಗಲೂ ಚಾಲುಕ್ಯ ಉತ್ಸವ ನಡೆಸಲು ಆಗಿರಲಿಲ್ಲ. ಹೀಗಾಗಿ ಚಾಲುಕ್ಯ ಉತ್ಸವ ನಡೆಸುವಂತೆ ನಿರಂತರ ಬೇಡಿಕೆ ಇಡುತ್ತಲೇ ಬಂದಿದ್ದರು. ಅದಕ್ಕೆ ಸ್ಪಂದಿಸಿದ್ದ ಸಿದ್ದರಾಮಯ್ಯ ಅವರು 2025-28ನೇ ಸಾಲಿನ ಬಜೆಟ್‌ನಲ್ಲಿ ಚಾಲುಕ್ಯ ಉತ್ಸವ ಘೋಷಣೆ ಮಾಡಿ 2 ಕೋಟಿ ರೂ. ಅನುದಾನ ಸಹ ಇಟ್ಟಿದ್ದ ಸಿದ್ದರಾಮಯ್ಯ ಹಣಕಾಸು ವರ್ಷ ಮುಕ್ತಾಯಕ್ಕೂ ಮುನ್ನವೆ ತಾವೇ ಆಗಮಿಸಿ ಉತ್ಸವಕ್ಕೆ ಚಾಲನೆ ನೀಡಿದರು. ಮತ್ತು ಚಾಲುಕ್ಯರ ಇತಿಹಾಸ ಮತ್ತು ಚರಿತ್ರೆ ಕುರಿತು ಕಿರು ಹೊತ್ತಿಗೆಯನ್ನು ಸಹ ಬಿಡುಗಡೆ ಮಾಡಿದರು.
ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇವತ್ತು 2ನೇ ಸಲ ಮುಖ್ಯಮಂತ್ರಿ ಆಗಿದ್ದೇನೆ ಎಂದರೆ ಅದಕ್ಕೆ ಬಾದಾಮಿ ಕ್ಷೇತ್ರದ ಜನರು ಕಾರಣ. 2018ರಲ್ಲಿ ಚಾಮುಂಡಿ ಜನರು ಸೋಲಿಸಿದಾಗ ಬಾದಾಮಿ ಜನರು ಗೆಲ್ಲಿಸಿದ್ದರು. ಅದರಿಂದ 2023ರಲ್ಲಿ ವರುಣಾದಿಂದ ಮತ್ತೆ ಎಂಎಲ್‌ಎ ಆಗಿ ಸಿಎಂ ಆಗಲು ಕಾರಣವಾಯಿತು. ಹೀಗಾಗಿ ಬಾದಾಮಿ ಜನರ ಆ ಉಪಕಾರವನ್ನು ನಾನು ಎಂದಿಗೂ ಮರೆಯಲ್ಲ ಎಂದರು.
ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಎರಡೂವರೆ ವರ್ಷದಲ್ಲಿ ಎರಡು ಸಾವಿರ ಕೋಟಿ ರೂ. ಅನುದಾನ ನೀಡಿದ್ದೇನೆ. ಇನ್ನೂ ನೀಡುವೆ. ನಾನು ಕೇಂದ್ರಕ್ಕೆ ಏಕೆ ಮನವಿ ಸಲ್ಲಿಸಲ್ಲ ಎಂದರೆ ಹಿಂದೆ ಅನೇಕ ಸಲ ಮನವಿ ಸಲ್ಲಿಸಿದಾಗಲೂ ಕೇಂದ್ರ ನಮ್ಮ ಮನವಿಗೆ ಓಗೊಟ್ಟಿಲ್ಲ ಎನ್ನುವ ಚಿತ್ರಣ ನಮ್ಮ ಮುಂದಿದೆ. ಈಗ ಇಲ್ಲಿನ ಎಂಪಿ (ಗದ್ದಿಗೌಡರ) ಹೇಳಿದ್ದಾರೆ. ಅದಕ್ಕೆ ನಾಳೆಯೇ ಮನವಿ ಸಲ್ಲಿಸುತ್ತೇನೆ. ಕೇಂದ್ರದಿಂದ ಅನುದಾನ ತಾವು ಕೊಡಿಸಿ ಎಂದು ತಿಳಿಸಿದರು. ಕುರುಡನಿಗೆ ಏನು ಬೇಕು, ಎರಡು ಕಣ್ಣುಗಳು ತಾನೆ, ಆ ಕೆಲಸವನ್ನು ನಾನು ನಾಳೆಯೇ ಮಾಡುತ್ತೇನೆ. ನೀವು ಅನುದಾನ ಕೊಡಿಸಿ ಎಂದು ಸಂಸದರ ಪ್ರಶ್ನೆಗೆ ಜವಾಬ್ ನೀಡಿದರು.
ವೇದಿಕೆಯಲ್ಲಿದ್ದ ತೇರದಾಳ ಸಿದ್ದು ಸವದಿ ಅವರನ್ನು ಉದ್ದೇಶಿಸಿ, ಸಿದ್ದು ನಿನ್ನ ತೇರದಾಳ ಕ್ಷೇತ್ರಕ್ಕೂ ಕೊಡುತ್ತೇನೆ ಎಂದಾಗ, ನೀವು ನಿಮ್ಮವರ ಕ್ಷೇತ್ರಕ್ಕೆ ಕೊಡುತ್ತೀರಿ. ಮೊದಲು ನಮ್ಮ (ಬಿಜೆಪಿ) ಕ್ಷೇತ್ರಕ್ಕೆ ಕೊಡಿ ಎಂದರು.
ನಾನು ನಿಮಗೂ ಕೊಡುತ್ತೇನೆ. ಆದರೆ, ನೀವು (ಬಿಜೆಪಿ) ನಮಗೆ ಕೇಂದ್ರದಿಂದ ನ್ಯಾಯಯುತವಾಗಿ ಬರಬೇಕಿದ್ದ ಅನುದಾನ ಕೊಡೆಸಿ, ಆಗ ನಿಮ್ಮ ಕ್ಷೇತ್ರಕ್ಕೂ ರಾಜ್ಯ ಸರ್ಕಾರದಿಂದ ನಿಮಗೂ ಹೆಚ್ಚಿನ ಅನುದಾನ ಕೊಡುತ್ತೇನೆ ಎಂದು ಬಿಜೆಪಿ ಶಾಸಕನ ಕಾಲೆಳೆದರು.

ತಮ್ಮ ಆಡಳಿತದ ಹೋಲಿಕೆ

ಯುವಕರಿಗೆ ವಿಶೇಷವಾಗಿ ವಾಸ್ತುಶಿಲ್ಪದ ಪರಿಚಯ ಆಗಬೇಕು. ಅದೇ ಕಾರಣಕ್ಕೆ ನಾವು ಉತ್ಸವಗಳನ್ನು ಆಚರಿಸುವುದು. ಪಟ್ಟದಕಲ್ಲು ಯುನಿಸ್ಕೋ ಪಟ್ಟಿಯಲ್ಲಿ ಇದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ವೀಕ್ಷಿಸಲು ದೇಶ, ವಿದೇಶದಿಂದ ಬರುತ್ತಾರೆ. ಚಾಲುಕ್ಯರು ಎಲ್ಲ ಧರ್ಮಗಳ ಸಮನ್ವಯ ಮಾಡಿಕೊಂಡು ಹೋಗುತ್ತಿದ್ದರು. ಅದೇ ಕೆಲಸವನ್ನು ನಮ್ಮ ಸರ್ಕಾರ ಎಲ್ಲರನ್ನು ಒಳಗೊಂಡ ವೈವಿದ್ಯತೆಯಲ್ಲಿ ಏಕತೆ ಕಂಡು ಸರ್ಕಾರ. ಚಾಲುಕ್ಯ ಅರಸರಂತೆ ನಮ್ಮ ಸರ್ಕಾರ ಎಲ್ಲರನ್ನು ಸಮನ್ವಯ ಮಾಡಿಕೊಂಡು ಹೋಗುತ್ತೇವೆ ಎಂದು ಚಾಲುಕ್ಯ ಅರಸರ ಆಡಳಿತ ಶೈಲಿಯನ್ನು ತಮ್ಮ ಆಡಳಿತಕ್ಕೆ ಹೋಲಿಕೆ ಮಾಡಿಕೊಂಡರು. ಗ್ಯಾರಂಟಿ ಯೋಜನೆಗಳು ಮುಖಾಂತರ ರಾಜ್ಯದಲ್ಲಿ ಲಾನುಭವಿಗಳ ಕುಟುಂಬಕ್ಕೆ ಪ್ರತಿ ತಿಂಗಳು 4 ರಿಂದ 5 ಸಾವಿರ ರೂ. ಸಿಗುವಂತೆ ಮಾಡಿದ್ದೇವೆ. ವಾರ್ಷಿಕ ಕುಟುಂಬಕ್ಕೆ 30 ರಿಂದ 40 ಸಾವಿರ ಸಿಗುವಂತಾಗಿದೆ ಎಂದರು.
ಉದ್ಘಾಟನೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಇದೇ ಬಾಗಲಕೋಟೆ ಜಿಲ್ಲೆಯವರಾಗಿದ್ದು, ಹಿಂದೆ ವೈಭವದಿಂದ ನಡೆಯುತ್ತಿದ್ದ ಚಾಲುಕ್ಯ ಉತ್ಸವ ನೋಡಲು ಸಂಭ್ರಮದಿಂದ ಆಗಮಿಸಿ, ಮೂರು ದಿನ ಪಾಲ್ಗೊಳ್ಳುತ್ತಿದ್ದ ದಿನಗಳನ್ನು ಮೆಲಕು ಹಾಕಿದರು.
ಹಾಗೆಯೇ 11 ವರ್ಷ ಉತ್ಸವ ನಡೆದಿರಲಿಲ್ಲ. ನಾನು ಇಲಾಖೆ ಸಚಿವನಾಗಿ ಈ ಸಲ ಉತ್ಸವ ನಡೆಸಬೇಕು ಎನ್ನುವ ಆಕಾಂಕ್ಷೆ ಇತ್ತು. ಜಿಲ್ಲೆಯ ಸಚಿವರು, ಶಾಸಕರು ಸೇರಿ ಸಿಎಂ ಗಮನಕ್ಕೆ ತಂದಾಗ ಬಾದಾಮಿ ಹೆಸರು ಹೇಳಿದ ತಕ್ಷಣ ಒಕೆ ಎಂದಿದ್ದಲ್ಲದೇ ಬಜೆಟ್‌ನಲ್ಲಿ ಘೋಷಿಸಿದರು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಕೊಡುಗೆಯನ್ನು ಬಸವ ತತ್ವ ಅನುಯಾಯಿಯಾಗಿ, ಗ್ಯಾರಂಟಿ ಯೋಜನೆಗಳ ಕೊಡುಗೆಗಳನ್ನು ಬಣ್ಣಿಸಿದರು.
ಸಚಿವ ಬೈರತಿ ಸುರೇಶ್, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಶಾಸಕರಾದ ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ, ಸಿದ್ದು ಸವದಿ, ಭೀಮಸೇನ ಚಿಮ್ಮನಕಟ್ಟಿ, ಪಿ.ಎಚ್. ಪೂಜಾರ, ಹನಮಂತ ನಿರಾಣಿ, ಉಮಾಶ್ರೀ, ಕರ್ನಾಟಕ ಕೈಗಾರಿಕೆ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮತ್ತಿತರರು ಇದ್ದರು.

ಕೇಂದ್ರದಿಂದ ಅನುದಾನ ತರುತ್ತೇನೆ

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ ಬಾದಾಮಿ ಕ್ಷೇತ್ರ ಐತಿಹಾಸಿಕ ಪ್ರಸಿದ್ದವಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಸಂಸದನಾಗಿ ನಾನು ಕೇಂದ್ರದಿಂದ ನನ್ನ ಕೈಲಾದ ಮಟ್ಟಿಗೆ ಶ್ರಮಿಸುತ್ತಿದ್ದೇನೆ. ವಿವಿಧ ಯೋಜನೆಗಳನ್ನು ತಂದಿದ್ದೇನೆ. ಯೋಜನೆಗಳು ಸಂಪೂರ್ಣ ಅನುಷ್ಠಾನವಾಗಲು ರಾಜ್ಯ ಸರ್ಕಾರದ ಸಹಕಾರ ಬೇಕಾಗುತ್ತದೆ. ನಾನು ಕೇಂದ್ರದಿಂದ ಹೃದಯ, ಅಮೃತ ಯೋಜನೆ ತಂದಿದ್ದೇನೆ. ವಿವಿಧ ಯೋಜನೆಗಳಿಗೆ ರಾಜ್ಯ ಸರ್ಕಾರ ನೆರವು ನೀಡಬೇಕು. ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು. ಇದಕ್ಕಾಗಿ ರಾಜ್ಯ ಸರ್ಕಾರ ಇನ್ನೂರು ಕೋಟಿ ರೂ. ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಿ. ನಾನು ಮುಂದೆ ನಿಂತು ಅನುದಾನ ತರುತ್ತೇನೆ ಎಂದು ಹೇಳಿದರು.

ಜಿಲ್ಲೆಗೆ ಸೀಮಿತ ; ನೋವಿನ ಸಂಗತಿ

ಹತ್ತು ವರ್ಷಗಳ ಬಳಿಕ ಚಾಲುಕ್ಯ ಉತ್ಸವ ಮೂರು ದಿನ ನಡೆದಿರುವುದು ಸಾಂಸ್ಕೃತಿಕ ಪ್ರಿಯರಿಗೆ ಹಾಗೂ ಚಾಲುಕ್ಯ ನಾಡಿನವರಿಗೆ ಸಂತಸ ತಂದಿದ್ದರೂ ಉತ್ಸವಕ್ಕೆ ಹಿಂದಿನ ವೈಭವ ನೀಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಲವಾಗಿರುವುದು ಅನೇಕರಿಗೆ ತೀವ್ರ ಬೇಸರ ತಂದಿದೆ. ರಾಷ್ಟ್ರೀಯ ಉತ್ಸವ ಎಂದು ಆರಂಭವಾಗಿದ್ದ ಚಾಲುಕ್ಯ ಉತ್ಸವವೂ ಇದೀಗ ತನ್ನ ವೈಭವ ಕಳೆದುಕೊಂಡು ಜಿಲ್ಲಾ ಮಟ್ಟದ ಉತ್ಸವಕ್ಕೆ ಸೀಮಿತವಾದಂತೆ ಕಂಡು ಬಂದಿತು. ಉತ್ಸವಕ್ಕೆ ದಿನಾಂಕ ನಿಗದಿಯಾದ ದಿನದಿಂದಲೂ ಅಧಿಕಾರಿಗಳು ತಮಗೆ ತೋಚಿದಂತೆ ಸಿದ್ಧತೆ ನಡೆಸಿದರು. ಕಲಾವಿದರ ಆಯ್ಕೆ, ವೇದಿಕೆ ಮುಖ್ಯ ವೇದಿಕೆಗೆ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡುವ ವಿಚಾರದಲ್ಲಿ ತಮ್ಮಿಷ್ಟದಂತೆ ನಡೆದುಕೊಂಡಿದ್ದು, ಕಲಾವಿದರು, ಸಾಹಿತಿಗಳು, ಸಾಂಸ್ಕೃತಿಕ ಪ್ರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.

ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳು ಕ್ಯಾರೆ ಇಲ್ಲ

ಚಾಲುಕ್ಯ ಉತ್ಸವವನ್ನು ಮೂರು ದಿನ ಮೂರು ಕಡೆಗೆ ಹಮ್ಮಿಕೊಂಡಿದ್ದು, ಬಾದಾಮಿಯಲ್ಲಿ ಉದ್ಘಾಟನೆ ಹಾಗೂ ಐಹೊಳೆಯಲ್ಲಿ ಸಮಾರೋಪ ಹಾಗೂ ಪಟ್ಟದಕಲ್ಲಿನಲ್ಲಿ 2ನೇ ದಿನದ ಉತ್ಸವ ಹಮ್ಮಿಕೊಳ್ಳಲಾಗಿದೆ. ಆದರೆ, ಪಟ್ಟದಕಲ್ಲು ಹತ್ತು ಐಹೊಳೆ ಕಾರ್ಯಕ್ರಮಕ್ಕೆ ಪಂಚಾಯಿತಿ ಅಧ್ಯಕ್ಷರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಡಿಲ್ಲ ಎನ್ನುವ ಆರೋಪಗಳು ಕೇಳಿಬಂದರೂ ಅಧಿಕಾರಿಗಳು ಮಾತ್ರ ಆ ಬಗ್ಗೆ ಕ್ಯಾರೇ ಎನ್ನಲಿಲ್ಲ.

ಪತ್ರಕರ್ತರ ಮೇಲೆ ದರ್ಪ

ಬಾದಾಮಿ ಪಟ್ಟಣದಲ್ಲಿ ನಡೆದ ಚಾಲುಕ್ಯ ಉತ್ಸವದ ಉದ್ಘಾಟನೆ ವೇಳೆ ಪ್ರವೇಶ ದ್ವಾರದ ಬಳಿ ಭದ್ರತೆಯಲ್ಲಿ ಇದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಕೆಲ ಪತ್ರಕರ್ತರನ್ನು ಬಿಡಿದೇ ದರ್ಪದಿಂದ ವರ್ತಿಸಿದರು. ಓರ್ವ ಪತ್ರಕರ್ತರನ್ನು ಪೊಲೀಸರು ನೂಕಾಟ, ತಳ್ಳಾಟ ಮಾಡಿದ್ದು, ಮಾಧ್ಯಮದವರು ಆಕ್ರೋಶಕ್ಕೆ ಕಾರಣವಾಗಿ, ಮಾತಿನ ಚಕಮಕಿ ನಡೆಯಿತು. ಬಳಿಕ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದರು.