ಬಾಗಲಕೋಟೆ ನಗರದ ಬಿವಿವಿ ಸಂಘದ ಇಂಜಿನಿಯರಿAಗ್ ಕಾಲೇಜಿನ ಸಭಾಭವನದಲ್ಲಿ ಸದ್ಗುರು ಮಧುಸೂದನ ಸಾಯಿಯವರೊಂದಿಗೆ ಡಾ. ವೀರಣ್ಣ ಚರಂತಿಮಠ ದಿವ್ಯ ಸಂವಾದ ನಡೆಸಿದರು.
ಕೃತಕ ಬುದ್ಧಿಮತ್ತೆಯು (ಎಐ) ಪ್ರವರ್ಧಮಾನಕ್ಕೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗಲಿದೆ. ಉದ್ಯಮಶೀಲತೆಯ ಮನಸ್ಥಿತಿ ಬೆಳೆಸಿಕೊಳ್ಳುವುದೇ ಇದಕ್ಕೆ ಮದ್ದು. ಪರಿವರ್ತನೆ ಜಗದ ನಿಯಮ ಎನ್ನುವುದನ್ನು ನಮ್ಮ ಯುವ ಜನರು ಅರ್ಥಮಾಡಿಕೊಂಡು ಸಿದ್ಧರಾಗಬೇಕು ಎಂದು 'ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ' ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿAಗ್ ಕಾಲೇಜು ಸಭಾಂಗಣದಲ್ಲಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಹಾಗೂ ಮುದ್ದೇನಹಳ್ಳಿಯ ಪ್ರಶಾಂತಿ ಬಾಲಮಂದಿರ ಟ್ರಸ್ಟ್. ಶ್ರೀ ಸತ್ಯಸಾಯಿ ಶರಣನಿಕೇತನಂ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಿವ್ಯ ಸಂವಾದ ಕಾರ್ಯಕ್ರಮದಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಕೇಳಿದ ಪ್ರಶ್ನೆಗಳಿಗೆ ಸದ್ಗುರುಗಳು ಉತ್ತರಿಸಿದರು.
ಎಐ'ನಿಂದಾಗಿ ೧೦ ಜನರ ಕೆಲಸ ಒಬ್ಬರೇ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಸಾಫ್ಟ್ವೇರ್ ಕ್ಷೇತ್ರದಲ್ಲಿ ಅತಿ ಹೆಚ್ಚು ಉದ್ಯೋಗ ನಷ್ಟ ಆಗುತ್ತಿದೆ. ಆದರೂ ನಮ್ಮ ಯುವಜನರು ಇಂದಿಗೂ ಇಂಜಿನಿಯರ್ ಆಗಬೇಕೆಂದು ಕನಸು ಕಾಣುತ್ತಿದ್ದಾರೆ. ಆದರೆ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಎಐ ಕಾರಣಕ್ಕೆ ಹೆಚ್ಚಿನ ಉದ್ಯೋಗ ನಷ್ಟ ಆಗುವುದಿಲ್ಲ. ನಮ್ಮ ದೇಶಕ್ಕೆ ಈಗ ೧೦ ಲಕ್ಷ ಶಿಕ್ಷಕರು ಬೇಕು, ಎಐ ಬಳಕೆಯಲ್ಲಿ ವಿವೇಚನೆ ಇರಬೇಕು ಎನ್ನುವುದನ್ನು ಒಂದು ಉದಾಹರಣೆಯ ಮೂಲಕ ಸದ್ಗುರುಗಳು ವಿವರಿಸಿದರು.
ಕೆಲವರು ನನ್ನ ಡಿಜಿಟಲ್ ಅವಳಿಯನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. 'ಇದರಿಂದ ಏನು ಪ್ರಯೋಜನ' ಎಂದು ನಾನು ಕೇಳಿದೆ. 'ಸ್ವಾಮಿ, ಅದು ನಿಮ್ಮಂತೆ ಮಾತನಾಡುತ್ತೆ. ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತೆ' ಎಂದರು. 'ಸರಿ ಹಾಗಾದರೆ, ಅದು ನನ್ನಂತೆ ಪ್ರೀತಿಸುತ್ತಾ? ಆಶೀರ್ವಾದ ಮಾಡುತ್ತಾ' ಎಂದು ಮತ್ತೆ ಕೇಳಿದೆ" ಅಂತ ತಮ್ಮ ಅನುಭವ ಹಂಚಿಕೊAಡರು.
ಭಾರತೀಯರು ಸ್ವಭಾವತಃ ಉದ್ಯಮಶೀಲರು. ಆದರೆ ಶಿಕ್ಷಣ ಪದ್ಧತಿಯ ದೋಷದಿಂದಾಗಿ ಗುಮಾಸ್ತರಂತೆ ಯೋಚಿಸುವ ಮನಸ್ಥಿತಿ ಬೆಳೆದಿದೆ. ನಾವು ಒಬ್ಬರ ಬಳಿ ಕೆಲಸ ಕೇಳುವ ಬದಲು ನಾವೇ ಹತ್ತು ಮಂದಿಗೆ ಕೆಲಸ ಕೊಡುವಂತೆ ಆಗಬೇಕು. ಆಗ ಎಂಥ ಪರಿಸ್ಥಿತಿ ಬಂದರೂ ನಾವು ದೃತಿಗೆಡುವ ಸಂದರ್ಭವೇ ಬರುವುದಿಲ್ಲ ಎಂದು ತಿಳಿಸಿದರು.
ಭಗವಂತ ಕಣ್ಣಿಗೆ ಕಾಣುವದಿಲ್ಲ. ಹೃದಯದಲ್ಲಿ ಸ್ಮರಣೆಯಿಂದ ಸಾಕ್ಷಾತಾರ ಮಾಡಿಕೊಳ್ಳಬೇಕು. ಗುರುವಿನ ಮೂಲಕ ಭಗವಂತ ಒಲಿಸಿಕೊಳ್ಳಲು ಸಾಧ್ಯ. ಅಹಂಕಾರ, ಮಮಕಾರ ಹೋಗಲಾಡಿಸಬೇಕು. ಶಿಕ್ಷಣ, ಆರೋಗ್ಯ, ಆಹಾರ ನಮ್ಮ ಉದ್ದೇಶ. ಈ ಸೇವೆಯಲ್ಲಿ ಭಗಂತ ಇದ್ದಾನೆ. ವಿಶ್ವವೇ ಕುಟುಂಬ. ಏಕತೆಯಲ್ಲಿ ದೇವರಿದ್ದಾನೆ. ನಿಸ್ವಾರ್ಥದಲ್ಲಿ ಶಕ್ತಿ ಇದೆ. ಕಾಲದ ಬದಲಾವಣೆಗೆ ಹೊಂದಿಕೊಳ್ಳಬೇಕು. ಆಸೆಗೆ ಕೊನೆ ಇರಬೇಕು. ದೀಪ ಬೆಳಗುವ ಮೂಲಕ ಕತ್ತಲೆ ದೂರವಿಡಲು ಸಾಧ್ಯ. ಮಾನವತೆ ಮೂಲ ಧರ್ಮ, ಸೇವೆಯೇ ದಿವ್ಯ ದರ್ಶನ ಎಂದು ಹೇಳಿದರು.
ನಿಸ್ವಾರ್ಥ ಪ್ರೇಮವೇ ಸದ್ಗುರುಗಳ ಅಽಕಾರ:
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಅಧ್ಯಕ್ಷ ಡಾ ಬಿ.ಎನ್.ನರಸಿಂಹಮೂರ್ತಿ, ನಿಸ್ವಾರ್ಥ ಸೇವೆಯಿಂದ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯ. ಭಗವಾನ್ ಸತ್ಯ ಸಾಯಿ ಬಾಬಾ ಮಾಡಿದ ವಿಶ್ವಸೇವಾ ಕ್ರಾಂತಿ ಸದ್ಗುರುಗಳು ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು.
ತನ್ನ ಪರಿವರ್ತನೆಯ ಕಥನ ಹಂಚಿಕೊAಡ ಮುಧೋಳ ತಾಲೂಕು ಚಿಕ್ಕೂರು ಗ್ರಾಮದ "ಶ್ರೀ ಸತ್ಯ ಸಾಯಿ ಶರಣನಿಕೇತನಂ" ವಿದ್ಯಾರ್ಥಿ ಶ್ರೀಶೈಲ ಸದಾಶಿವ ದಿವಾನ, "ಈ ಗುರುಕುಲವು ನನಗೆ ಪ್ರಕೃತಿ, ಶಿಸ್ತು, ಊಟ, ಪಾಠ ಕೊಟ್ಟಿದೆ. ನಾನು ಇಲ್ಲಿ ಭಗವದ್ಗೀತೆ, ಸುಭಾಷಿತ, ವೇದ ಕಲಿತೆ. ಮುಂದೆ ದೊಡ್ಡವನಾದ ಮೇಲೆ ಅಧ್ಯಾಪಕನಾಗಿ ನಮ್ಮ ಸದ್ಗುರುಗಳ ಆಶಯ ಈಡೇರಿಸುತ್ತೇನೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣ ಸಾ ಭಾಂಡಗೆ, ಲೋಕಸಭಾ ಸದಸ್ಯ ಗೋವಿಂದ ಕಾರಜೋಳ, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಇತರರು ಇದ್ದರು.