ಬಾಗಲಕೋಟೆ: ರಾಹುಲ್ ಗಾಂಧಿ ಹಾಗೂ ಅವರ ಮಿತ್ರ ಪಕ್ಷಗಳು ಸೇರಿ ದೇಶದಲ್ಲಿ ಅರಾಜಕತೆ ಉಂಟುಮಾಡಲು ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಬಿಜೆಪಿ ನೇತೃತ್ವದ ಎನ್ಡಿಎ ಪ್ರಜಾತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನವನ್ನು ಎರಡು ಹಂತದಲ್ಲಿ ಕೈಗೊಂಡಿದೆ ಎಂದು ರಾಜ್ಯಸಭಾ ಸದಸ್ಯ ಪ್ರೊ. ಮಾ. ನಾಗರಾಜ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. ೨೩ ರಿಂದ ನ. ೫ರವರೆಗೆ ಮೊದಲ ಹಂತದ ಅಭಿಯಾನ ಹಾಗೂ ನ. ೧೧ರಿಂದ ನ. ೩೦ ರವರೆಗೆ ೨ನೇ ಹಂತದ ಅಭಿಯಾನ ನಡೆಸಲಿದ್ದು, ಸುದ್ದಿಗೋಷ್ಠಿ, ಪಾದಯಾತ್ರೆ, ಸಂವಾದಗಳ ಮೂಲಕ ಕಾಂಗ್ರೆಸ್ ಹಾಗೂ ಅವರ ಮಿತ್ರರ ಲೋಕತಂತ್ರ ಅತಂತ್ರಗೊಳಿಸುವ ಕೆಲಸ ನಡೆಯಲ್ಲ ಎಂದು ತೋರಿಸುತ್ತೇವೆ ಎಂದರು.
ರಾಹುಲ್ ಗಾಂಧಿ ಅವರು ಎಡಪಕ್ಷಗಳು ಗುಂಪಿನ ಜೊತೆ ಸೇರಿಕೊಂಡು ಎಸ್ಐಆರ್ ಕುರಿತು ಇನ್ನಿಲ್ಲದ ತಕರಾರು ತೆಗೆದು ಅರಾಜಕತೆ ಸೃಷ್ಟಿಸಲು ಹೊರಟಿದ್ದಾರೆ. ಮೊದಲು ಇವಿಎಂ ಬಗ್ಗೆ ಈಗ ಎಸ್ಐಆರ್ ಬಗ್ಗೆ ತಕರಾರು ತೆಗೆಯುತ್ತಿದ್ದಾರೆ. ಮುಂದುವರಿದು ಚುನಾವಣಾ ಆಯೋಗದ ಬಗ್ಗೆ ತಕರಾರು ತೆಗೆದಿದ್ದಾರೆ. ರಾಹುಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಗೆಲ್ಲುವ ಸ್ಥಿತಿಯಲ್ಲಿ ಇಲ್ಲ. ರಾಜ್ಯದಲ್ಲಿ ನಡೆದ ಪರಿಷತ್ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ನಲ್ಲೂ ಎಲ್ಲ ಸ್ಥಾನ ಎನ್ಡಿಎ ಗೆದ್ದಿದೆ ಎಂದರು.
ಭಾರತ ಧಾರ್ಮಿಕತೆ, ಧರ್ಮದ ಆಧಾರದ ಮೇಲೆ ಕಟ್ಟಿದ್ದಲ್ಲ. ಪ್ರಜಾಪ್ರಭುತ್ವದ ಮೇಲೆ ನಿರ್ಮಾಣ ಮಾಡಿರುವಂತದ್ದು. ಸಂವಿಧಾನದ ಚೌಕಟ್ಟಿನಲ್ಲಿ ಆಯ್ಕೆ ಆಗಿರುವ ಸರ್ಕಾರವನ್ನು ಬೀದಿಯಲ್ಲಿ ನಿಂತು ಅರಾಜಕತೆ ಸೃಷ್ಟಿಸಿ ಉರುಳಿಸುತ್ತೇವೆ ಎಂದು ಹೊರಟಿದ್ದಾರೆ. ಅದು ಸಾಧ್ಯವಾಗದ ಮಾತು ಎಂದು ರಾಹುಲ್ ಗಾಂಽಗೆ ಟಾಂಗ್ ಕೊಟ್ಟರು. ರಾಹುಲ್ ಗಾಂಽ ಅವರು ವಿದೇಶಿ ಪ್ರವಾಸದಿಂದ ಬಂದಾಗಲ್ಲೆ ಅರಾಜಕತೆ ಉಂಟು ಮಾಡುವ ಚಟುವಟಿಕೆ ನಡೆಸುತ್ತಾರೆ. ಇದಕ್ಕೆ ಅಂತಾರಷ್ಟ್ರೀಯ ಷಡ್ಯಂತ್ರಗಳು ನಡೆಯುತ್ತಿವೆ. ರಾಹುಲ್ ಅವರನ್ನು ಮುಂದಿಟ್ಟುಕೊಂಡು ಷಡ್ಯಂತ್ರಗಳು ನಡೆದಿದ್ದು, ಇವೆಲ್ಲವನ್ನು ಬಯಲಿಗೆ ಎಳೆಯುವುದಾಗಿ ಈಗಾಗಲೇ ನರೇಂದ್ರ ಮೋದಿ ಹೇಳಿದ್ದಾರೆ. ದೇಶದ ಜನರು ಕಾಂಗ್ರೆಸ್ ಮತ್ತು ಕಾಕ್ರೋಚ್ಗಳ ಷಡ್ಯಂತ್ರ ನಡೆಯಲ್ಲ ಎಂದರು.
ದೇಶದ ಇತಿಹಾಸದಲ್ಲಿ ಸುಪ್ರೀಂಕೋರ್ಟ್ ವರೆಗೆ ಹೋಗಿ ಪ್ರತಿಭಟನೆ ನಡೆದಿರಲಿಲ್ಲ. ರಾಹುಲ್, ಖರ್ಗೆ ಅವರು ನ್ಯಾಯಾಂಗ ವ್ಯವಸ್ಥೆಯನ್ನು ಬೆದರಿಸುವ ತಂತ್ರವನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷ ಚುನಾವಣೆಗೆ ಬರಲಿ, ಅದನ್ನು ಬಿಟ್ಟು ಬೀದಿಯಲ್ಲಿ ನಿಂತು ಸರ್ಕಾರ ಉರುಳಿಸಲು ಆಗಲ್ಲ. ನಿಮ್ಮ ವರ್ತನೆಯನ್ನು ತಿದ್ದುಕೊಂಡು ಚುನಾವಣಾ ರಾಜಕೀಯದಲ್ಲಿ ಉಳಿದರೆ ಒಳ್ಳೆಯದು. ಅದನ್ನು ಬಿಟ್ಟು ಬೀದಿಯಲ್ಲಿ ನಿಲ್ಲುತ್ತೇವೆ ಎಂದರೆ ಆಗಲ್ಲ. ರಾಜ್ಯದಲ್ಲಿ ಪರಿಷತ್ ಚುನಾವಣೆ ಫಲಿತಾಂಶ ಮುನ್ನೋಟವಾಗಿದೆ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮುಖಂಡರಾದ ಬಸವರಾಜ ಯಂಕಂಚಿ, ಮಲ್ಲಯ್ಯ ಮೂಗನೂರಮಠ, ಎಚ್.ಡಿ. ಪಾಟೀಲ, ಸತ್ಯನಾರಾಯಣ ಹೇಮಾದ್ರಿ ಇತರರು ಇದ್ದರು.