ಬಾಗಲಕೋಟೆ ತಾಲೂಕಿನ ಕದಾಂಪುರ ಆರ್‌ಸಿಯಲ್ಲಿ ಗುರುವಾರ ಆಯೋಜಿಸಿದ್ದ ಥ್ರೋಬಾಲ್ ಪಂದ್ಯಾವಳಿಯ ವಿಜೇತರಿಗೆ ಪ್ರಮಾಣ ಪತ್ರ ಮತ್ತು ಕಪ್ ವಿತರಿಸಲಾಯಿತು. ರತ್ನವ್ವ ಮಾಚಕನೂರ, ಶಾರದಾ ನಿರಂಜಿ, ರವಿ ಬರಗಿ, ಇತರರಿದ್ದರು.
- ಬೆಳಗಾವಿ ವಿಭಾಗ ಮಟ್ಟದ ಥ್ರೋಬಾಲ್ ಪಂದ್ಯಾವಳಿ
- ಬಾಗಲಕೋಟೆಯ ಬಾಲಕ-ಬಾಲಕಿಯರ ತಂಡಗಳು ಪ್ರಥಮ ಸ್ಥಾನ
- ರಾಜ್ಯ ಮಟ್ಟಕ್ಕೆ ಆಯ್ಕೆ
ಬಾಗಲಕೋಟೆ: ತಾಲೂಕಿನ ಕದಾಂಪುರ ಪುನರ್ವಸತಿ ಕೇಂದ್ರದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಾಗಲಕೋಟೆಯ ಬಾಲಕ-ಬಾಲಕಿಯರ ತಂಡಗಳು ಪ್ರಥಮ ಸ್ಥಾನ ಪಡೆದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡದ ವಿರುದ್ಧ ಬಾಗಲಕೋಟೆ ಬಾಲಕಿಯರ ತಂಡವು ಮೊದಲ ಸ್ಥಾನ ಪಡೆಯಿತು. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಧಾರವಾಡ ವಿರುದ್ಧದ ಪಂದ್ಯದಲ್ಲೂ ಬಾಗಲಕೋಟೆಯ ಬಾಲಕಿಯರು ಪ್ರಥಮ ಸ್ಥಾನ ಪಡೆದುಕೊಂಡರು. 14 ವಷರ್ದೊಳಗಿನ ಬಾಲಕರ ವಿಭಾಗದಲ್ಲಿ ಬಾಗಲಕೋಟೆ ತಂಡವು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ತಂಡದ ವಿರುದ್ಧ ಗೆಲುವು ದಾಖಲಿಸಿತು. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ ವಿರುದ್ಧ ಬಾಗಲಕೋಟೆ ಜಿಲ್ಲೆಯ ಬಾಲಕರು ಗೆದ್ದು ಬೀಗಿದರು.
ಕ್ರೀಡೆಯಿಂದ ಮನೋಲ್ಲಾಸ: ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಅಜೀತ ಮನ್ನಿಕೇರಿ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದಲ್ಲಿ ಮಕ್ಕಳ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಿದೆ. ಪ್ರತಿಯೊಬ್ಬರ ಮನಸು ಉಲ್ಲಾಸಮಯವಾಗಲು ಕ್ರೀಡೆಗಳು ಅವಶ್ಯವಾಗಿವೆ ಎಂದರು.
ಗ್ರಾಪಂ ಅಧ್ಯಕ್ಷೆ ರತ್ನವ್ವ ಮಾಚಕನೂರ, ಎಸ್‌ಡಿಎಂಸಿ ಅಧ್ಯಕ್ಷ ಪರಸಪ್ಪ ಹೊನ್ಯಾಳ, ಉಪಾಧ್ಯಕ್ಷ ರವಿ ಬರಗಿ, ಕದಾಂಪುರ ಶಾಲೆಯ ಮುಖ್ಯಶಿಕ್ಷಕಿ ಶಾರದಾ ನಿರಂಜಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸದಸ್ಯ ಮಂಜುನಾಥ ಕಾಜೂರ, ಜಿಲ್ಲಾ ಪ್ರಭಾರಿ ದೈಹಿಕ ಶಿಕ್ಷಣ ಅಧಿಕಾರಿ ಆರ್.ಆರ್. ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕ ಹನಮಂತ ರಾಂಪುರ, ಶಿಕ್ಷಕ ವೈ.ಎಸ್. ಮಾವರಾಣಿ ಇತರರಿದ್ದರು.