ರಬಕವಿ ಬನಹಟ್ಟಿ ತಾಲೂಕಿನ ಹನಗಂಡಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಧರೇಶ ಅಲ್ಲಪ್ಪ ಹುದ್ದಾರೆ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಕಂಬಿ ಮಲ್ಲಯ್ಯನ ಪೂಜಾ ಕಾರ್ಯಕ್ರಮದಲ್ಲಿ ಅಪ್ಪಯ್ಯ ಮಠಪತಿ, ಸದಯ್ಯ ಮಠಪತಿ, ಗರುಪ್ರಸಾದ ಕನಬೂರಮಠ ಇತರರಿದ್ದರು. 
ಬಾಗಲಕೋಟೆ

ಮಲ್ಲಯ್ಯನ ದೇವಸ್ಥಾನದಿಂದ ಶ್ರೀಶೈಲದತ್ತ ಭಕ್ತರ ಭಕ್ತಿಪಥ

ಪ್ರಮುಖ ಮುಖ್ಯಾಂಶಗಳು

  • ಹನಗಂಡಿಯಿಂದ ಕಂಬಿ ಸಮೇತ ಪಾದಯಾತ್ರೆ
  • ಮಾ.3ರಿಂದ ಆರಂಭ
ರಬಕವಿ/ಬನಹಟ್ಟಿ: ಯುಗಾದಿ ಪ್ರಯುಕ್ತ ಆಂಧ್ರ ಪ್ರದೇಶದ ಶ್ರೀಶೈಲಂ ಕ್ಷೇತ್ರದಲ್ಲಿ ಜರುಗಲಿರುವ ರಥೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಾಲೂಕಿನ ಹನಗಂಡಿ ಗ್ರಾಮದಿಂದ ಸಾವಿರಾರು ಭಕ್ತರು ಕಂಬಿ ಸಮೇತ ಪಾದಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಗ್ರಾಮದ ಕಂಬಿಮಲ್ಲಯ್ಯನ ಅರ್ಚಕರಾದ ಅಪ್ಪಯ್ಯ ಸ್ವಾಮಿ ಮಠಪತಿ ತಿಳಿಸಿದರು.
ಗ್ರಾಮದ ಗ್ರಾಪಂ ಮಾಜಿ ಸದಸ್ಯರಾದ ಧರೇಶ ಅಲ್ಲಪ್ಪ ಹುದ್ದಾರೆ ಅವರ ಮನೆಯಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಕಂಬಿ ಮಲ್ಲಯ್ಯನ ಪೂಜಾ ಕಾರ್ಯಕ್ರಮ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾ.19ರಂದು ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಬೃಹತ್ ಕುಂಭಾಭಿಷೇಕ ಹಾಗೂ ಮಾ.20ರಂದು ರಥೋತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಮಾ. 3ರಂದು ಗ್ರಾಮದಲ್ಲಿರುವ ಮಲ್ಲಯ್ಯನ ದೇವಸ್ಥಾನ ಆವರಣದಲ್ಲಿ ವಿಶೇಷ ಪೂಜಾ ವಿಧಿವಿಧಾನಗಳ ನಂತರ ಮಧ್ಯಾಹ್ನ 3 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಭಕ್ತರು ರಬಕವಿ-ಬನಹಟ್ಟಿ ಮಾರ್ಗವಾಗಿ ಜಗದಾಳ, ನಾವಲಗಿ, ಮುಧೋಳ ಮೂಲಕ ನಿಗದಿತ ಮಾರ್ಗದಲ್ಲಿ ಶ್ರೀಶೈಲ ಕ್ಷೇತ್ರ ತಲುಪಲಿದ್ದಾರೆ. ಮಾ.18ರಂದು ಕ್ಷೇತ್ರ ತಲುಪಿ, ಮಾ.20ರಂದು ರಥೋತ್ಸವದಲ್ಲಿ ಭಾಗವಹಿಸಿ ಬಳಿಕ ಗ್ರಾಮಗಳಿಗೆ ಮರಳುವ ಕಾರ್ಯಕ್ರಮ ರೂಪಿಸಲಾಗಿದೆ.
ಪಾದಯಾತ್ರಿಗಳ ಸೌಲಭ್ಯಕ್ಕಾಗಿ ಮಾರ್ಗದುದ್ದಕ್ಕೂ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ. ತುರ್ತು ಆರೋಗ್ಯ ಸಮಸ್ಯೆಗಳಿಗಾಗಿ ಪ್ರಥಮ ಚಿಕಿತ್ಸಾ ಸಾಮಗ್ರಿಗಳನ್ನೂ ಒದಗಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸದಯ್ಯ ಮಠಪತಿ, ವಿರೇಶ ಮಠಪತಿ, ಗಿರಿಮಲ್ಲಯ್ಯ ಮಠಪತಿ, ಗುರುಪ್ರಸಾದ ಕನಬೂರಮಠ, ಕಿರಣ ಕನಬೂರಮಠ ಸೇರಿ ಅನೇಕ ಭಕ್ತರು ಭಾಗವಹಿಸಿದ್ದರು.