ಬಾಗಲಕೋಟೆ- ಮೈಸೂರು ರೈಲನ್ನು ಲೋಕಾಪುರ ನಿಲ್ದಾಣದಿಂದ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ವಿವಿಧ ಸಂಘಟನೆಗಳು ಬಾಗಲಕೋಟೆ ರೈಲು ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕುತ್ಬುದ್ದೀನ ಖಾಜಿ, ಸುಭಾಸ ಶಿರಬೂರ, ಶ್ರೀನಿವಾಸ ಬಳ್ಳಾರಿ, ಬಸವರಾಜ ಧರ್ಮಂತಿ ಇತರರಿದ್ದರು. 
ಬಾಗಲಕೋಟೆ

ಲೋಕಾಪುರದಿಂದ ಬಸವ ಎಕ್ಸ್‌ಪ್ರೆಸ್ ಪ್ರಾರಂಭಿಸಿ

ಪ್ರಮುಖ ಮುಖ್ಯಾಂಶಗಳು

  • ವಿವಿಧ ಸಂಘಟನೆಗಳ ಒಕ್ಕೂಟ
  • ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ
  • ನೈರುತ್ಯ ರೈಲ್ವೆ ಮಹಾ ವ್ಯವಸ್ಥಾಪಕರಿಗೆ ಬಾಗಲಕೋಟೆ ರೈಲ್ವೆ ಅಧೀಕ್ಷಕರ ಮುಖಾಂತರ ಮನವಿ
ಬಾಗಲಕೋಟೆ: ಬಾಗಲಕೋಟೆ-ಮೈಸೂರು (ಬಸವ ಎಕ್ಸ್‌ಪ್ರೆಸ್) ರೈಲನ್ನು ಲೋಕಾಪುರ ರೈಲು ನಿಲ್ದಾಣದಿಂದಲೇ ಪ್ರಾರಂಭಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಬಾಗಲಕೋಟೆ ರೈಲು ನಿಲ್ದಾಣದ ಮುಂಭಾಗ ಲೋಕಾಪುರ ಹಿರಿಯ ನಾಗರಿಕರ ಸೇವಾ ಸಂಘದ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ರೈಲು ನಿಲ್ದಾಣ ಎದುರು ರೈಲ್ವೆ ಅಭಿವೃದ್ಧಿಗಾಗಿ ಘೋಷಣೆ ಕೂಗಿದರು. ನಂತರ ಹುಬ್ಬಳ್ಳಿ ನೈರುತ್ಯ ರೈಲ್ವೆ ಮಹಾ ವ್ಯವಸ್ಥಾಪಕರಿಗೆ ಬಾಗಲಕೋಟೆ ರೈಲ್ವೆ ಅಧೀಕ್ಷಕರ ಮುಖಾಂತರ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ ಖಾಜಿ ಮಾತನಾಡಿ, ಬಾಗಲಕೋಟೆ- ಲೋಕಾಪುರ ರೈಲು ಮಾರ್ಗ ಈಗಾಗಲೇ ಪೂರ್ಣಗೊಂಡು, ಸರಕು ರೈಲುಗಳಷ್ಟೇ ಚಲಿಸುತ್ತಿವೆ. ಹೀಗಾಗಿ ಮೈಸೂರು- ಬಾಗಲಕೋಟೆ ಬರುವ ಬಸವ ಎಕ್ಸ್‌ಪ್ರೆಸ್ ರೈಲನ್ನು ಲೋಕಾಪುರದಿಂದಲೇ ಪ್ರಾರಂಭಿಸುವಂತೆ ಆಗ್ರಹಿಸಿದರು.
ರೈಲು ಲೋಕಾಪುರದಿಂದ ಹೊರಟರೆ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಹಳ್ಳಿಗಳ ಜನರಿಗೆ ಪ್ರಯಾಣ ಸುಲಭವಾಗುತ್ತದೆ. ಬೆಂಗಳೂರು, ವಿವಿಧ ಪುಣ್ಯಕ್ಷೇತ್ರಗಳು, ಮಹಾರಾಷ್ಟ್ರ ಸಂಪರ್ಕ, ಉದ್ಯೋಗ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ರಾಜಧಾನಿಗೆ ತೆರಳುವ ಯುವಕರಿಗೂ ಸಹಕಾರಿಯಾಗುತ್ತದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಮೈಸೂರಿನಿಂದ ಬರುವ ರೈಲು ಬೆಳಗ್ಗೆ 11.15ಕ್ಕೆ ಬಾಗಲಕೋಟೆ ತಲುಪುತ್ತಿದ್ದು, 3 ಗಂಟೆಗಳ ಅಂತರ ಇರುವುದರಿಂದ ಲೋಕಾಪುರಕ್ಕೆ ಬಂದು ಹೋಗುವ ಅನುಕೂಲವಿದೆ ಎಂದ ಹೋರಾಟಗಾರರು, ಈ ಬಗ್ಗೆ ಶೀಘ್ರ ನಿರ್ಧಾರ ಕೈಗೊಳ್ಳದಿದ್ದರೆ ರೈಲು ತಡೆ ಚಳವಳಿ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸುಭಾಸ ಶಿರಬೂರ, ಬಸವರಾಜ ಧರ್ಮಂತಿ, ರಾಜು ಮನ್ನಿಕೇರಿ, ಶ್ರೀನಿವಾಸ್ ಬಳ್ಳಾರಿ, ವಿ.ಬಿ. ಮಾಳಿ, ಎಸ್.ಎಂ. ಹಗ್ಗದ, ಬಿ.ಎಂ. ಪಾಟೀಲ, ಎಸ್.ಎನ್. ಹಿರೇಮಠ, ಹೊಳಬಸಪ್ಪ ದಂಡಿನ, ಲೋಕಣ್ಣ ಉಳ್ಳಾಗಡ್ಡಿ, ವಿಠ್ಠಲ ಮೇಟಿ, ಪ್ರಶಾಂತ ತೆಗ್ಗಿ, ಲೋಕಣ್ಣ ಪೂಜಾರಿ, ರಾಮಣ್ಣ ಪೊಲೀಸ್ ಪಾಟೀಲ, ಗೋಪಾಲಗೌಡ ಲಕ್ಷಾನಟ್ಟಿ, ಸಿ.ಎಂ. ಪಾಟೀಲ, ಎಂ.ಎಚ್. ನ್ಯಾಮಗೌಡ, ವಿಠ್ಠಲ ಮೇಟಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.