ಬಾದಾಮಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಭಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನ, ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಿರಿಯ ದಿವಾಣಿ ನ್ಯಾಯಾಧೀಶ ಚಂದ್ರಶೇಖರ ಬಣಕಾರ ಉದ್ಘಾಟಿಸಿದರು. ಡಾ. ಎಂ.ಬಿ. ಪಾಟೀಲ, ಪಿ.ಎಚ್. ಮಹಾಲಿಂಗಪುರ, ಪಿ.ಬಿ. ಕಲಾಲ, ಪ್ರಾಚಾರ್ಯ ಬಿ.ಎಸ್. ದೋತ್ರದ ಇತರರಿದ್ದರು. 
ಬಾಗಲಕೋಟೆ

ತಂಬಾಕು ಸೇವನೆ ದುಷ್ಪರಿಣಾಮ ಜಾಗೃತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ಕಾನೂನು ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಣಕಾರ ಅಭಿಮತ
  • ಜಾಥಾ ಆಯೋಜನೆ
ಬಾದಾಮಿ: ತಂಬಾಕು ಸೇವನೆ ಅನೇಕ ಗಂಭೀರ ರೋಗಗಳಿಗೆ ಕಾರಣವಾಗಿದ್ದು, ಸಾರ್ವಜನಿಕರು ಅದರ ದುಷ್ಪರಿಣಾಮಗಳನ್ನು ಅರಿತು ದೂರವಿರಬೇಕು ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಣಕಾರ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಹಾಗೂ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನು ಅರಿವು ಮತ್ತು ಆರೋಗ್ಯ ಜಾಗೃತಿಯ ಅಗತ್ಯತೆಯನ್ನು ಒತ್ತಿ ಹೇಳಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಎಂ.ಬಿ. ಪಾಟೀಲ ಮಾತನಾಡಿ, ತಂಬಾಕು ಸೇವನೆ ನಿಯಂತ್ರಣಕ್ಕೆ ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ಎಚ್. ಮಹಾಲಿಂಗಪುರ ತಂಬಾಕು ವಿರೋಧಿ ದಿನದ ಮಹತ್ವವನ್ನು ವಿವರಿಸಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಪಿ.ಬಿ. ಕಲಾಲ ತಂಬಾಕಿನ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಬಿ.ಎಸ್. ದೋತ್ರದ, ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ವೀಣಾ ಪಿ.ಟಿ., ಆರ್‌ಬಿಎಸ್‌ಕೆ ವೈದ್ಯ ಡಾ. ಕೆ.ಟಿ. ಗಾಜಿ, ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿ ಹಲವರು ಭಾಗವಹಿಸಿದ್ದರು.
ಕ್ಷಯರೋಗ ಮೇಲ್ವಿಚಾರಕ ಆರ್.ಬಿ. ಅಂಬಿಗೇರ ನಿರೂಪಿಸಿದರು. ಮಂಜು ಅಂಗಡಿ ವಂದಿಸಿದರು.