ಬಾಗಲಕೋಟೆಯಲ್ಲಿ ನಡೆಸ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿದರು. ಡಾ.ವೀರಬ್ರಹ್ಮಚಾರಿ, ಡಾ.ಮಯುರೇಶ ಮಹಾಜನ, ಎ.ಎಲ್.ಪಾಟೀಲ ಇತರರಿದ್ದರು. 
ಬಾಗಲಕೋಟೆ

ಮಾನವೀಯ ಮೌಲ್ಯ ಹೊಂದಿರುವ ವೈದ್ಯರಾಗಿ

ಬಾಗಲಕೋಟೆ: ವಿದ್ಯಾರ್ಥಿಗಳು ಕೇವಲ ಪದವೀಧರರಾಗಿ ಉಳಿಯದೆ, ಅತ್ಯುತ್ತಮ ಸಂಶೋಧಕರಾಗಿ ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿರುವ ವೈದ್ಯರಾಗಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಹೇಳಿದರು.

ನಗರದಲ್ಲಿ ಬಿವಿವಿಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ವತಿಯಿಂದ ಭಾನುವಾರ ಸಂಜೆ ನಡೆದ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ `ಗ್ಲೋಬ್ ಇನ್ ಗ್ಲೋಬ್ಯೂಲ್ 2.0' ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ಲೋಬ್ ಇನ್ ಗ್ಲೋಬ್ಯೂಲ್ ಪರಿಕಲ್ಪನೆಯು ಜಾಗತಿಕ ಮಟ್ಟದ ಜ್ಞಾನವನ್ನು ಒಂದು ಪುಟ್ಟ ಗುಳಿಗೆಯಲ್ಲಿ ಅಡಕಗೊಳಿಸುವ ಮಹತ್ವಾಕಾಂಕ್ಷೆಯನ್ನು ಪ್ರತಿನಿಧಿಸುತ್ತದೆ. ನಮ್ಮ ಸಂಸ್ಥೆಗಳು ಇಂದು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವಿದ್ಯಾರ್ಥಿಗಳ ಸಂಶೋಧನಾ ಚಟುವಟಿಕೆಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಮ್ಮ ಸಂಸ್ಥೆ ಸಿದ್ಧವಿದೆ ಎಂದರು.

ಪ್ರಾಚಾರ್ಯ ಡಾ. ಅರುಣ ಹೂಲಿ ಮಾತನಾಡಿ, ಸಮ್ಮೇಳನ ಬರೀ ಕಾರ್ಯಕ್ರಮವಾಗಿರದೇ ಎಲ್ಲರ ಕನಸು, ಪರಿಶ್ರಮ ಒಗ್ಗಟ್ಟಿನ ಪ್ರತೀಕವಾಗಿದೆ. ಸಮ್ಮೇಳನ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಸಮ್ಮೇಳನದಲ್ಲಿ ವೈಜ್ಞಾನಿಕ ಭಿತ್ತಿಪತ್ರ ಪ್ರದರ್ಶನ ಹಾಗೂ ಪ್ರಬಂಧ ಮಂಡನೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ನಿವೃತ್ತ ಆಯುಷ್ ನಿರ್ದೇಶಕ ಡಾ. ಎ.ಎಲ್. ಪಾಟೀಲ, ಕರ್ನಾಟಕ ಹೋಮಿಯೋಪಥಿ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ವೀರಬ್ರಹ್ಮಚಾರಿ, ಡಾ.ಶ್ರೀಪಾದ ಖೆಡೇಕರ, ಡಾ.ಮಯುರೇಶ ಮಹಾಜನ ಹಾಗೂ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಉಪಸ್ಥಿತರಿದ್ದರು.