ಬಾದಾಮಿ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್. ಹಿರೇಹಾಳ ಮತ್ತು ಕಾರ್ಯದರ್ಶಿ ಇಷ್ಟಲಿಂಗ ನರೇಗಲ್ ಮಾತನಾಡಿದರು. ಚಂದ್ರು ಸೂಡಿ, ರಮೇಶ ನಾಲತವಾಡ, ಹನಮಂತ ತಳವಾರ ಇತರರಿದ್ದರು.
- ಬಾದಾಮಿ ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹ
- ಬಾದಾಮಿ ಹೊಸ ಬಸ್ ನಿಲ್ದಾಣದ ಜೊತೆಗೆ ಬಸ್ ಡಿಪೊ ಸ್ಥಳಾಂತರಿಸಬೇಕು
- ನಗರದ ಬೀದಿ ದೀಪಗಳನ್ನು ನಿರ್ವಹಣೆ, ಶೌಚಾಲಯಗಳ ನಿರ್ಮಾಣ ಸೇರಿ ಈ ಎಲ್ಲ ಬೇಡಿಕೆಗಳನ್ನು ಸಂಬಂಧಿಸಿದ ಶಾಸಕರು, ಸಂಸದರು, ಸ್ಥಳೀಯ ಪುರಸಭೆ ಹಾಗೂ ಅಧಿಕಾರಿಗಳು ತುರ್ತು ಗಮನಹರಿಸಿ ಈಡೇರಿಸಬೇಕು
ಬಾದಾಮಿ: ಐತಿಹಾಸಿಕ ತಾಣ ಬಾದಾಮಿ ಅಭಿವೃದ್ಧಿ ಹಾಗೂ ವಿವಿಧ ಬೇಡಿಕೆಗಳ್ನು ಈಡೇರಿಸಬೇಕು ಎಂದು ಬಾದಾಮಿ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದ ಕಾನಿಪ ಭವನದಲ್ಲಿ ಶುಕ್ರವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಬಾದಾಮಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಹಿರೇಹಾಳ ಹಾಗೂ ಕಾರ್ಯದರ್ಶಿ ಇಷ್ಟಲಿಂಗ ಮಾತನಾಡಿ, ಬಾದಾಮಿ ಹೊಸ ಬಸ್ ನಿಲ್ದಾಣದ ಜೊತೆಗೆ ಬಸ್ ಡಿಪೊ ಸ್ಥಳಾಂತರಿಸಬೇಕು ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು.
ತಾಲೂಕು ಕ್ರೀಡಾಂಗಣ ನಿರ್ಮಾಣ, ತರಕಾರಿ ಮಾರುಕಟ್ಟೆ ಸ್ಥಳಾಂತರ, ಹೊಸ ಮಾರುಕಟ್ಟೆ ನಿರ್ಮಾಣ, ಪಾರ್ಕಿಂಗ್ ಪ್ಲಾಜಾ ನಿರ್ಮಾಣ, ಹೊಂಡದ ಕಟ್ಟೆ ಹತ್ತಿರದ 90 ಮನೆಗಳನ್ನು ಸ್ಥಳಾಂತರ ಮಾಡಿ ಬೇರೆ ಕಡೆಗೆ ನಿರ್ಮಾಣ, ಬೈಪಾಸ್ ರಸ್ತೆ ಹಾಗೂ ಸುಸಜ್ಜಿತ ಪಾರಂಪರಿಕ ರಸ್ತೆಗಳನ್ನು ನಿರ್ಮಾಣ, ಪಾದಚಾರಿ ರಸ್ತೆ ಒತ್ತುವರಿ ತೆರುವುಗೊಳಿಸಬೇಕು. 9 ಎಕರೆ ಪ್ರವಾಸೋದ್ಯಮಕ್ಕೆ ಸ್ಥಳಾಂತರಕ್ಕೆ ಉಪವಿಭಾಗಾಧಿಕಾರಿಗಳಿಗೆ ಕ್ರಿಯಾ ಯೋಜನೆ ನೀಡಿದರೂ ಪ್ರಯೋಜನೆಯಾಗಿಲ್ಲ ಎಂದರು.
ನಗರದ ಬೀದಿ ದೀಪಗಳನ್ನು ನಿರ್ವಹಣೆ, ಶೌಚಾಲಯಗಳ ನಿರ್ಮಾಣ ಸೇರಿ ಈ ಎಲ್ಲ ಬೇಡಿಕೆಗಳನ್ನು ಸಂಬಂಧಿಸಿದ ಶಾಸಕರು, ಸಂಸದರು, ಸ್ಥಳೀಯ ಪುರಸಭೆ ಹಾಗೂ ಅಧಿಕಾರಿಗಳು ತುರ್ತು ಗಮನಹರಿಸಿ ಈಡೇರಿಸಬೇಕು ಎಂದು ಆಗ್ರಹಿಸಿದರು.
ಹೋರಾಟ ಸಮಿತಿ ಸದಸ್ಯರಾದ ಚಂದ್ರು ಸೂಡಿ, ರಮೇಶ ನಾಲತವಾಡ, ಹನಮಂತ ತಳವಾರ, ಬಸವರಾಜ ಗೊರಕೊಪ್ಪನವರ, ಯಮನೂರ ಹುಳಿಪಲ್ಲೆ, ಬಸವರಾಜ ಹುಲ್ಲೂರ ಹಾಗೂ ರುದ್ರೇಶ್ ಹುಣಶಿಗಿಡದ ಇತರರಿದ್ದರು.