ಬಾದಾಮಿಯ ಪ್ರಸಿದ್ಧ ಬನಶಂಕರಿ ಜಾತ್ರೆ ಹಿನ್ನೆಲೆಯಲ್ಲಿ ಭಾನುವಾರ ಜಾತ್ರೆಗೆ ಆಗಮಿಸಿದ್ದ ಭಕ್ತರಿಂದ ತುಂಬಿ ತುಳುಕಿದ ಬನಶಂಕರಿ. 
ಬಾಗಲಕೋಟೆ

ಬನಶಂಕರಿಗೆ ಹರಿದು ಬಂದ ಭಕ್ತ ಸಾಗರ

ಪ್ರಮುಖ ಮುಖ್ಯಾಂಶಗಳು

  • ಸತತ ರಜೆ ಎಫೆಕ್ಟ್
  • ನಾಟಕ ಪ್ರದರ್ಶನಗಳು ಹೌಸ್‌ಫುಲ್
  • ರಸ್ತೆ ತುಂಬೆಲ್ಲ ಜನಜಂಗುಳಿ
ಬಾಗಲಕೋಟೆ: ಸತತ ಮೂರು ದಿನಗಳ ರಜೆ ಹಿನ್ನೆಲೆ ಬಾದಾಮಿ ಮತ್ತು ಬನಶಂಕರಿ ದೇವಸ್ಥಾನಕ್ಕೆ ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆ ಭಕ್ತರು, ಪ್ರವಾಸಿಗರು ಮತ್ತು ಜಾತ್ರೆಯಲ್ಲಿ ನಾಟಕ ವೀಕ್ಷಿಸುವ ಪ್ರೇಕ್ಷಕರಿಂದ ತುಂಬಿ ತುಳುಕಿತು.
ನಾಲ್ಕನೇ ಶನಿವಾರ, ಭಾನುವಾರ, ಜ.26ರ ಸೋಮವಾರ ಇರುವ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ವಿಶೇಷವಾಗಿ ಬನಶಂಕರಿ ದೇವಸ್ಥಾನದಲ್ಲಿ ದೇವಿ ದರ್ಶನ ಪಡೆಯಲು ಹರಸಾಹಸ ಪಡುವಂತಾಯಿತು. ಮೂರ‌್ನಾಲ್ಕು ಗಂಟೆಗಳ ಕಾಲ ಸರದಿಯಲ್ಲಿ ನಿಂತರೂ ದೇವಿಯ ದರ್ಶನ ದೊರೆಯದೆ ಅನೇಕರು ದೇವಸ್ಥಾನದ ಹೊರಗಡೆಯಿಂದಲೇ ಕೈಮುಗಿದು ಹೋಗುತ್ತಿದ್ದ ದೃಶ್ಯವೂ ಕಂಡು ಬಂದಿತು.
ಬನಶಂಕರಿ ಜಾತ್ರೆ ಹಿನ್ನೆಲೆಯಲ್ಲಿ ತಿಂಗಳು ಗಟ್ಟಲೇ ನಡೆಯುವ ನಾಟಕಗಳ ವೀಕ್ಷಣೆಗೂ ಸಹ ಭಾನುವಾರ ರಜಾ ದಿನವಾಗಿದ್ದರಿಂದ ಜನರು ವಿವಿಧೆಡೆಯಿಂದ ಕಿಕ್ಕಿರಿದು ತುಂಬಿದ್ದರು. ಜಾತ್ರೆಯ ಆರಂಭದಲ್ಲಿ ಅಧಿಕ ಚಳಿ ಇರುವ ಕಾರಣಕ್ಕೆ ಇಡೀ ರಾತ್ರಿ ನಾಟಕ ವೀಕ್ಷಿಸಲು ಬರುವ ಪ್ರೇಕ್ಷಕರ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆ ಆಗಿತ್ತು. ಆದರೆ, ಕಳೆದ ಒಂದು ವಾರದಿಂದ ನಾಟಕ ವೀಕ್ಷಿಸುವವರ ಸಂಖ್ಯೆ ಹೆಚ್ಚಾಗಿದೆ.
ಭಾನುವಾರ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ದೇವಸ್ಥಾನದ ಆವರಣ ತುಂಬಿ ತುಳುಕಿತು. ಸಮಯ ಕಳೆದಂತೆ ಬನಶಂಕರಿಗೆ ಬರುವ ಜನರ ಸಂಖ್ಯೆ ಹೆಚ್ಚುತ್ತಲೇ ಇತ್ತು. ನಾಟಕ ಪ್ರದರ್ಶನ ಆರಂಭವಾಗುವ ಹೊತ್ತಿಗೆ ಬನಶಂಕರಿ ಜನರಿಂದ ಭರ್ತಿಯಾಗಿತ್ತು.
ವಾಹನ, ಜನರ ದಟ್ಟನೆ ಹೆಚ್ಚಾಗಿತ್ತು. ಹಾಗೆಯೇ ರಜಾ ದಿನಗಳು ಆಗಿದ್ದರಿಂದ ಒಂದು ಕಡೆಗೆ ಜಾತ್ರೆಗೆ ಬರುವವರು ಮತ್ತೊಂದು ಕಡೆಗೆ ಬಾದಾಮಿ ಸ್ಮಾರಕ ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆಯೂ ಸೇರಿಕೊಂಡು ಬಾದಾಮಿ-ಬನಶಂಕರಿ ರಸ್ತೆಗಳು ಜನ ಮತ್ತು ವಾಹನ ದಟ್ಟನೆ ಹೆಚ್ಚಾಗಿ ಸಂಚಾರ ಸಿಕ್ಕು ಉಂಟಾಗಿದ್ದು, ಬಾದಾಮಿಯಿಂದ ಬನಶಂಕರಿ ಐದು ಕಿ.ಮಿ. ಸಂಚಾರಕ್ಕೆ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಯಿತು ಎಂದು ಹಲವರು ಹೇಳಿದರು.