ಮುಧೋಳ ನಗರದ ರನ್ನ ಕ್ರೀಡಾಂಗಣದಲ್ಲಿ ಹೊರಾಂಗಣ ಜಿಮ್ ಅನ್ನು ಸಚಿವ ಆರ್.ಬಿ. ತಿಮ್ಮಾಪೂರ ಉದ್ಘಾಟಿಸಿದರು. ಡಾ. ವಿ.ಎನ್. ನಾಯಕ, ಸದುಗೌಡ ಪಾಟೀಲ, ಅಶೋಕ ಕಿವಡಿ, ರಾಘು ಮೊಕಾಶಿ ಇದ್ದರು. 
ಬಾಗಲಕೋಟೆ

ಮುಧೋಳ ನಗರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಭರವಸೆ
  • 11.42 ಲಕ್ಷ ರೂ. ವೆಚ್ಚದ ಹೊರಾಂಗಣ ಜಿಮ್ ಉದ್ಘಾಟನೆ
  • ಉತ್ತಮ ಆರೋಗ್ಯ ಹೊಂದಲು ಕ್ರೀಡಾಂಗಣ ಅಗತ್ಯ
ಮುಧೋಳ: ನಗರದ ಅಭಿವೃದ್ಧಿ ನಿರಂತರವಾಗಿ ನಡೆದಿದ್ದು, ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಂದ ಕೃಷ್ಣಾ ನದಿಯಿಂದ ನಗರಕ್ಕೆ 200 ಕೋಟಿ ರೂ. ಗಳ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗುವುದು. ಸಮಯದ ಅಭಾವದಿಂದ ಹೆಚ್ಚು ಕಡಿಮೆಯಾದರೆ ನಾವೇ ಕಾಮಗಾರಿಗೆ ಚಾಲನೆ ನೀಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ನಗರದಲ್ಲಿ ಮಂಗಳವಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ನಿರ್ಮಿತಿ ಕೇಂದ್ರ ನಿರ್ಮಾಣ ಮಾಡಿದ ಮಹಿಳೆ ಮತ್ತು ಪುರುಷರಿಗಾಗಿ 11.42 ಲಕ್ಷ ರೂ. ಗಳ ಪ್ರತ್ಯೇಕ ಹೊರಾಂಗಣ ಜಿಮ್ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಆರೋಗ್ಯ ಹೊಂದಲು ಕ್ರೀಡಾಂಗಣ ಅಗತ್ಯವಾಗಿದೆ. ನಾನು ಪ್ರಥಮ ಭಾರಿ ಶಾಸಕನಾಗಿ ಆಯ್ಕೆಯಾದಾಗ ಈ ಕ್ರೀಡಾಂಗಣ ನಿರ್ಮಾಣಕ್ಕೆ ಹಲವಾರು ವಿಘ್ನಗಳು ಎದುರಾಗಿದ್ದವು. ಅವುಗಳನ್ನು ನಿವಾರಣೆಮಾಡಿ ಎಲ್ಲರ ಕನಸು ನನಸಾಗಿದೆ. ಶೀಘ್ರದಲ್ಲಿ ಈಜುಗೋಳ, 15 ದಿನದಲ್ಲಿ 400 ಮೀ. ಟ್ರಾೃಕ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದ ದತ್ತ ಕೆರೆ ಅಭಿವೃದ್ಧಿಗೆ ಎರಡು ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ನಗರದ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಸದಾ ಬದ್ಧವಾಗಿರುತ್ತದೆ ಎಂದ ಅವರು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಪರಿಶೀಲನೆ ಬಳಿಕ ಗುತ್ತಿಗೆದಾರರ ಬಿಲ್ ಪಾವತಿ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಿರಿಯ ಕಾಂಗ್ರೆಸ್ ಮುಖಂಡ ಡಾ. ವಿ.ಎನ್. ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ರಾಘು ಮೊಕಾಶಿ, ಸಿದ್ದು ಸೂರ್ಯವಂಶಿ, ಸುನಂದಾ ತೇಲಿ, ಪ್ರಕಾಶ ಅನೆಪ್ಪನವರ, ಸಿದ್ದು ರಾಮತೀರ್ಥ, ಉದಯಸಿಂಗ್ ಪಡತಾರೆ ಉಪಸ್ಥಿತರಿದ್ದರು.