ಅಮೀನಗಡ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪ.ಪಂ. ಸದಸ್ಯರಾದ ಸಂಜಯ ಐಹೊಳ್ಳಿ, ರಮೇಶ ಮುರಾಳ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸದಸ್ಯರಾದ ತುಕ್ಕಪ್ಪ ಲಮಾಣಿ, ರಾಘವೇಂದ್ರ ಮುಳ್ಳೂರ, ಗಣೇಶ ಚಿತ್ರಗಾರ ಇತರರಿದ್ದರು.
- ಸದಸ್ಯರಿಂದಲೇ ಗಂಭೀರ ಆರೋಪ
- ಹಿಂದಿನ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ
- ಅಧ್ಯಕ್ಷರ ಶಾಮೀಲಾಗಿರುವ ಸಂಶಯ
- ಸೂಕ್ತ ಸಮಗ್ರ ತನಿಖೆಗೆ ಆಗ್ರಹ
ಅಮೀನಗಡ : ಪಟ್ಟಣ ಪಂಚಾಯಿತಿಯಲ್ಲಿ ಲಕ್ಷಾಂತರ ಹಣ ದುರ್ಬಳಕೆಯಾಗಿದೆ ಎಂದು ಪ.ಪಂ. ಸದಸ್ಯರಾದ ಸಂಜಯ ಐಹೊಳ್ಳಿ ಹಾಗೂ ರಮೇಶ ಮುರಾಳ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಪ.ಪಂ. ಮಳಿಗೆಯ ಬಾಡಿಗೆ ಹಣವನ್ನು ಸಭೆಯಲ್ಲಿ ಚರ್ಚೆ ಮಾಡದೆ, ಮೇಲಾಧಿಕಾರಿಗಳ ಅನುಮತಿ ಪಡೆಯದೆ ಲಕ್ಷಾಂತರ ರೂಪಾಯಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಅಲ್ಲದೇ, ಪಟ್ಟಣದಲ್ಲಿ ಏಳು ಅಂಗನವಾಡಿ ಕೇಂದ್ರಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಿಂದ ಪ.ಪಂ.ಗೆ ಸುಮಾರು ಎಂಟು ಲಕ್ಷ ರೂಪಾಯಿ ಹಣ ಜಮಾ ಮಾಡಲಾಗಿದೆ. ಆ ಹಣವನ್ನು ಕೂಡಾ ಮೇಲಾಧಿಕಾರಿಗಳ ಅನುಮತಿ ಪಡೆಯದೆ, ಸಭೆಯ ಗಮನಕ್ಕೆ ತರದೆ ಪ.ಪಂ. ಗೆ ಸಾಮಗ್ರಿಗಳನ್ನು ಖರೀದಿ ಮಾಡಲಾಗಿದ್ದು, ಅಲ್ಲಿಯೂ ಲಕ್ಷಾಂತರ ರೂಪಾಯಿ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಯಾವುದೇ ರೀತಿಯ ಪರಿಶೀಲನೆ ಮಾಡದೆ, ಸಭೆಯ ಗಮನಕ್ಕೆ ತರದೆ ಕೆಲವು ಲೇಔಟ್‌ಗಳಿಗೆ ಅನುಮತಿ ನೀಡಲಾಗಿದೆ, ಮೂಲ ಸೌಲಭ್ಯವಿಲ್ಲದೆ ಲೇಔಟ್‌ಗಳಿಗೆ ಉತಾರ ಪೂರೈಸಲಾಗಿದೆ. ಜನರಲ್ ಫಂಡ್‌ನಲ್ಲೂ ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಸಂಬಂಧಿಸಿದ ಮೇಲಾಧಿಕಾರಿಗಳು ಈ ಹಿಂದಿನ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಆಡಳಿತ ಅವಧಿಯ ಪ್ರಕರಣಗಳನ್ನು ತನಿಖೆ ಮಾಡಬೇಕು. ತಪ್ಪಿಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಶಾಮೀಲಾಗಿರುವ ಕುರಿತು ಸಂಶಯ ಮೂಡಿದೆ ಎಂದು ಆರೋಪಿಸಿದರು.
ಪ.ಪಂ. ಸದಸ್ಯರಾದ ತುಕ್ಕಪ್ಪ ಲಮಾಣಿ, ರಾಘವೇಂದ್ರ ಮುಳ್ಳೂರ, ಗಣೇಶ ಚಿತ್ರಗಾರ, ಯಮನಪ್ಪ ನಾಗರಾಳ, ಗ್ರಾ.ಪಂ. ಮಾಜಿ ಸದಸ್ಯ ಡಿ.ಪಿ. ಅತ್ತಾರ ಇತರರಿದ್ದರು.