ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಕರ್ನಾಟಕ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ , ಮೀನುಗಾರಿಕೆ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಮಂಜುನಾಥ ಸುಣಗಾರ, ಜಿಲ್ಲಾ ಯುಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿನ್ನು ಅಂಬಿ ಇತರರು ಇದ್ದರು.
- ಮಾಜಿ ಶಾಸಕ ಸುಣಗಾರ ಮನವಿ
- ಕಾಂಗ್ರೆಸ್ ಬೆಂಬಲಿಸಲು ಮನವಿ
- ರಾಜ್ಯ ಸರ್ಕಾರ ಸಮಾಜ ಬಂಧುಗಳ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದೆ
ಬಾಗಲಕೋಟೆ : ಅಂಬಿಗರ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಸೂಕ್ತ ಸ್ಥಾನಮಾನ ನೀಡಿದ್ದು, ಚುನಾವಣೆಯಲ್ಲಿ ಸಮಾಜ ಬಾಂಧವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ನಮ್ಮ ಸಮಾಜದ ಅಂದಾಜು 30 ಸಾವಿರ ಮತದಾರರಿದ್ದಾರೆ. ಈಗಾಗಲೇ ಸಮಾಜದ ಸಾಕಷ್ಟು ಜನ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಸಮಾಜದ ಎಲ್ಲ ಬಂಧುಗಳು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಕೋರಿದರು.
ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ರಾಜ್ಯ ಸರ್ಕಾರ ಸಮಾಜ ಬಂಧುಗಳ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಸಮಾಜದ ಕೋಳಿ, ಕಬ್ಬಲಿಗ, ಬೆಸ್ತ, ಅಂಬಿಗ ಮತ್ತು ಬಾರಿಕ ವರ್ಗದವರನ್ನು ಪರಿಶಿಷ್ಟ ಜನಾಂಗಕ್ಕೆ ಸೇರಿಸುವಂತೆ ಶಿಾರಸು ಮಾಡುವ ಭರವಸೆ ನೀಡಿದೆ. ಸಮಾಜ ಬಂಧುಗಳನ್ನು ಎಸ್ಟಿಗೆ ಸೇರಿಸಿ ಪ್ರಮಾಣ ಪತ್ರ ನೀಡುವ ಭರವಸೆಯನ್ನು ಸಂಬಂಧಿಸಿದ ಸಚಿವರು ಹಾಗೂ ಪಕ್ಷದ ಮುಖಂಡರು ತಿಳಿಸಿದ್ದಾರೆ. ಸಮಾಜದ ಅಭಿವೃದ್ಧಿಗೆ ಬದ್ಧವಾದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಸಮಾಜ ಬಂಧುಗಳಲ್ಲಿ ಕೋರಿದರು.
ಕರ್ನಾಟಕ ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ ಮಾತನಾಡಿ, ಸಮಾಜದ ಮುಖಂಡರು ಕಾಂಗ್ರೆಸ್ ಬೆಂಬಲಿಸುವುದಾಗಿ ಈಗಾಗಲೇ ಭರವಸೆ ನೀಡಿದ್ದಾರೆ. ಎಲ್ಲರೂ ಕೈ ಅಭ್ಯರ್ಥಿ ಉಮೇಶ ಮೇಟಿ ಅವರ ಗೆಲುವಿಗೆ ಶ್ರಮಿಸೋಣ ಎಂದರು.
ಮೀನುಗಾರಿಕೆ ಕಾಂಗ್ರೆಸ್ ವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ, ಜಿಲ್ಲಾ ಯುಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿನ್ನು ಅಂಬಿ, ಜಿಲ್ಲಾ ಒಬಿಸಿ ಕಾಂಗ್ರೆಸ್ ಅಧ್ಯಕ್ಷ ಮುದಕಣ್ಣ ಅಂಬಿಗೇರ, ಶಶಾಂಕ ಕಾಗಿ, ಹಣಮಂತ ಕೊಂತ, ಜಿಪಂ ಮಾಜಿ ಸದಸ್ಯ ಸಿದ್ದನಗೌಡ ಸುಣಗಾರ, ಕಾರ್ಮಿಕ ವಿಭಾಗದ ಮಾಧ್ಯಮ ವಕ್ತಾರ ರಮೇಶ ಪಡಸಲಗಿ, ಮಹೇಶ ಕೋಳಿ ಮತ್ತಿತರರು ಇದ್ದರು.