ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕಾರ್ಯಾಲಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಗಮೇಶ್ವರ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ಹುನಗುಂದ ತಹಸೀಲ್ದಾರ್ ಪ್ರವೀಣಕುಮಾರ ಹಿರೇಮಠ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಪಿಎಸ್‌ಐ ಸಿದ್ದಾರೋಡ ಆಲದಕಟ್ಟಿ ಇದ್ದರು. 
ಬಾಗಲಕೋಟೆ

ಏ.7 ಕೂಡಲಸಂಗಮ ಸಂಗಮೇಶ್ವರ ಜಾತ್ರೆ

ಪ್ರಮುಖ ಮುಖ್ಯಾಂಶಗಳು

  • ಸಕಲ ಸಿದ್ಧತೆಗೆ ಶಾಸಕ ಕಾಶಪ್ಪನವರ ಸೂಚನೆ
  • ಪೂರ್ವಭಾವಿ ಸಭೆ
ಕೂಡಲಸಂಗಮ: ಸ್ಥಳೀಯ ಕ್ಷೇತ್ರಾಧಿಪತಿ ಸಂಗಮೇಶ್ವರ ಜಾತ್ರೆ ಏ.7ರಂದು ಸಂಭ್ರಮದಿಂದ ನಡೆಯುವುದು, ಜಾತ್ರೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಕೂಡಲಸಂಗಮ ಅಭಿವೃದ್ಧಿ ಮಂಡಳಿ ಕಾರ್ಯಾಲಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂಗಮೇಶ್ವರ ಜಾತ್ರೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸುಕ್ಷೇತ್ರ ರಕ್ಷಣೆ ಮಾಡುವ ಜವಾಬ್ದಾರಿ ಸ್ಥಳೀಯರದ್ದು ಆಗಿದೆ. ಸ್ವಚ್ಚತೆಗೆ ಹೆಚ್ಚು ಆದ್ಯತೆ ಕೊಡಬೇಕು ಎಂದರು.
ಮಾರಾಟ ಮಳಿಗೆ ವ್ಯಾಪಾರಸ್ತರು ರಸ್ತೆಗೆ ಅಂಗಡಿಗಳನ್ನು ಹಚ್ಚುತ್ತಿರುವುದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳು, ಪ್ರವಾಸಿಗರ ವಾಹನಗಳು ಸಂಚರಿಸಲು ತೊಂದರೆಯಾಗಿದೆ ಕೂಡಲೇ ತೆಗೆದುಕೊಳ್ಳಲು ಸೂಚಿಸಿ, ತೆಗೆಯದಿದ್ದರೆ ಶಿಸ್ತು ಕ್ರಮಕೈಗೊಂಡು ಕಿತ್ತಿಸಬೇಕು, ಮಾರಾಟ ಮಳಿಗೆ ವ್ಯಾಪಾರಸ್ಥರು ಬಾಡಿಗೆ ಹಣ ಅಧಿಕವಾಗಿ ಉಳಿಸಿಕೊಂಡಿದ್ದು, ಕೂಡಲೇ ಕಟ್ಟಲು ಸೂಚಿಸಿ, ಕಟ್ಟದಿದ್ದರೆ ಹರಾಜು ಮಾಡಿ ಬೇರೆಯವರಿಗೆ ನೀಡಲು ಮಂಡಳಿಯ ಆಯುಕ್ತರಿಗೆ ಸೂಚಿಸಿದರು.
ಸುಕ್ಷೇತ್ರದಲ್ಲಿ ಮಧ್ಯ, ಮಾಂಸಾಹಾರವನ್ನು ನಿಷೇಽಸಿದ್ದು, ಎಲ್ಲ ಕಡೆ ನಾಮಫಲಕ, ಸಿಸಿ ಕ್ಯಾಮರಾ ಅಳವಡಿಸಿ ಯಾರು ನಿಯಮ ಉಲ್ಲಂಘಿಸುತ್ತಾರೆ ಅವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಾತ್ರೆಯ ನಿಮಿತ್ತ ಏ.7ರಂದು ಇಳಕಲ್ಲ, ಹುನಗುಂದ ಘಟಕ ದಿಂದ ತಾಲೂಕಿನ ಎಲ್ಲ ಹೊಬಳಿಯಿಂದ ವಿಶೇಷ ಬಸ್‌ಗಳನ್ನು ಬಿಡಬೇಕು, ಹೂನನೂರ ಬಳಿ ರಸ್ತೆಯಲ್ಲಿಯೇ ತ್ಯಾಜ್ಯಗಳನ್ನು ಹಾಕಿರುವುದನ್ನು ಸ್ವಚ್ಚಗೊಳಿಸಬೇಕು, ಬಾಗಲಕೋಟೆಯಿಂದ ಕೂಡಲಸಂಗಮಕ್ಕೆ ಬರುವ ಬಂಗಾರ ಕಳಸಕ್ಕೆ ಸೂಕ್ತ ಭದ್ರತೆ ನೀಡಬೇಕು. ಮಾರ್ಗ ಮಧ್ಯದಲ್ಲಿ ಆರೋಗ್ಯ ಇಲಾಖೆಯವರು ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರ ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ವಿಜಯಕುಮಾರ ಆಜೂರ ಮಾತನಾಡಿ, ಜಾತ್ರೆಯ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಸಮಯಕ್ಕೆ ಅಧಿಕ ಆದ್ಯತೆ ಕೊಡಬೇಕು, ರಥೋತ್ಸವ ಸರಿಯಾದ ಸಮಯಕ್ಕೆ ನಡೆಯಬೇಕು ಎಂದರು.
ಸಭೆಯಲ್ಲಿ ಹುನಗುಂದ ತಹಸೀಲ್ದಾರ್ ಪ್ರವೀಣಕುಮಾರ ಹಿರೇಮಠ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ, ಪಿಎಸ್‌ಐ ಸಿದ್ದಾರೋಡ ಆಲದಕಟ್ಟಿ, ಮುಖಂಡರಾದ ಅಶೋಕಗೌಡ ಗೌಡರ, ಶೇಖಪ್ಪ ದೇಶಿ, ಗಂಗಣ್ಣ ಬಾಗೇವಾಡಿ, ಶೇಖರಗೌಡ ಗೌಡರ, ಎಸ್.ಎಂ.ಪುರಾಣಿಕ, ಕರಸಂಗಯ್ಯ ಖಾತೆದಾರ, ಅಮರಯ್ಯ ಕೋಟೂರ, ಕರಸಂಗಯ್ಯ ಗುಡಿ, ಪ್ರಭು ಹಿರೇಮಠ ಮುಂತಾದವರು ಇದ್ದರು.

ಮಂಡಳಿಯ ಆಯುಕ್ತರಿಗೆ ಸೂಚನೆ

ಜಾತ್ರಾ ಪೂರ್ವಭಾವಿ ಸಭೆಗೆ ಹೆಸ್ಕಾಂ ಕೂಡಲಸಂಗಮದ ಶಾಖಾಧಿಕಾರಿ, ತಾಲೂಕು ಮಟ್ಟದ ಅಧಿಕಾರಿಗಳು ಬರದೆ, ಲೈಮನ್ ಸಿಬ್ಬಂದಿ ಕಳುಹಿಸಿದ್ದರು, ಕೋಪಗೊಂಡ ಶಾಸಕ ವಿಜಯಾನಂದ ಕಾಶಪ್ಪನವರ ಜವಾಬ್ದಾರಿ ಸ್ಥಾನದಲ್ಲಿರುವ ಅಧಿಕಾರಿಗಳು ಜವಾಬ್ದಾರಿ ಅರಿಯಬೇಕು, ಕೂಡಲೇ ಬರಬೇಕು ಎಂದು ದೂರವಾಣಿ ಕರೆಮಾಡಿ ಸೂಚಿಸಿದರು, ನೋಟಿಸ್ ನೀಡಲು ತಹಸೀಲ್ದಾರ್, ಮಂಡಳಿಯ ಆಯುಕ್ತರಿಗೆ ಸೂಚಿಸಿದರು.