ತೇರದಾಳ ತಾಲೂಕಿನ ಹನಗಂಡಿ ಗ್ರಾಮದಲ್ಲಿ ಮಳೆಗಾಗಿ ಹರಕೆ ಅಂಗವಾಗಿ ಹನಗಂಡಿ ಗ್ರಾಮದಲ್ಲಿ ಅಂಗಡಿ-ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿದ್ದ ದಶ್ಯ. 
ಬಾಗಲಕೋಟೆ

ಮಳೆಗಾಗಿ ದುರ್ಗಾದೇವಿಗೆ ಹರಕೆ

ಪ್ರಮುಖ ಮುಖ್ಯಾಂಶಗಳು

  • ಹನಗಂಡಿಯಲ್ಲಿ ಅಂಗಡಿ-ಮುಂಗಟ್ಟು ಬಂದ್
  • ಉದ್ಯೋಗ ಮಾಡದೇ ಕಟ್ಟುನಿಟ್ಟಿನ ನಿಯಮ ಪಾಲನೆ
  • 101 ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ
ತೇರದಾಳ: ತಾಲೂಕಿನ ಹನಗಂಡಿ ಗ್ರಾಮದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ದುರ್ಗಾದೇವಿಗೆ ಹರಕೆ ಹೊತ್ತು ವಿಶೇಷ ಉಡಿತುಂಬುವ ಕಾರ್ಯಕ್ರಮವನ್ನು ಶುಕ್ರವಾರ ಭಕ್ತಿಭಾವದಿಂದ ನೆರವೇರಿಸಲಾಯಿತು. ಗ್ರಾಮಸ್ಥರು ಸಂಪ್ರದಾಯದಂತೆ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ಗ್ರಾಮದಲ್ಲಿ ಭಕ್ತಿ ಮತ್ತು ಸಾಮರಸ್ಯದ ಅಪರೂಪದ ಚಿತ್ರಣ ಮೂಡಿಸಿದರು.
101 ಮುತ್ತೈದೆಯರಿಗೆ ಉಡಿತುಂಬಲಾಯಿತು. ಡೊಳ್ಳು-ಪದಗಳ ವಾದ್ಯಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಚೌಡಕಿ ಪದಗಳ ಪ್ರದರ್ಶನ ಸೇರಿ ವಿವಿಧ ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗಿದವು. ಭಕ್ತರಿಗೆ ಅಂಬಲಿ ಹಾಗೂ ಕಿಚಡಿ ಪ್ರಸಾದ ವಿತರಿಸಲಾಯಿತು.
ಮಳೆಗಾಗಿ ಹರಕೆ ಹೊತ್ತ ಗ್ರಾಮಸ್ಥರು ಎರಡು ಶುಕ್ರವಾರಗಳ ಕಾಲ ಚಪ್ಪಲಿ ಧರಿಸದೆ, ಬೈಕ್ ಸೇರಿ ಯಾವುದೇ ವಾಹನ ಬಳಸದೆ, ಕಷಿ ಸೇರಿ ತಮ್ಮ ದಿನನಿತ್ಯದ ಕೆಲಸಗಳನ್ನು ಸ್ಥಗಿತಗೊಳಿಸಿ ದೇವಿಯ ಆರಾಧನೆಯಲ್ಲಿ ತೊಡಗಿದರು. ಗ್ರಾಮದಲ್ಲಿನ ಎಲ್ಲ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿದ್ದು, ಮೋಟಾರ್ ಸೇರಿ ಯಂತ್ರೋಪಕರಣಗಳ ಬಳಕೆಯನ್ನೂ ಸಂಪೂರ್ಣ ನಿಲ್ಲಿಸಲಾಗಿತ್ತು.
ಮುಸ್ಲಿಂ ಸಮುದಾಯದವರೂ ಸೇರಿ ಎಲ್ಲ ಸಮುದಾಯದ ಜನರು ವ್ಯಾಪಾರ, ಉದ್ಯೋಗಗಳನ್ನು ಬದಿಗಿರಿಸಿ ಹರಕೆಯಲ್ಲಿ ಪಾಲ್ಗೊಂಡು ಧಾರ್ಮಿಕ ಸಾಮರಸ್ಯಕ್ಕೆ ಸಾಕ್ಷಿಯಾದರು.
"

ದುರ್ಗಾದೇವಿಯ ವಾರದ ಆಚರಣೆ ವಿಶೇಷ ಜಾತ್ರೆಯೊಂದಿಗೆ ಮುಕ್ತಾಯಗೊಂಡಿದ್ದು, ಸಂಪ್ರದಾಯದಂತೆ ಸೋಮವಾರ ದಿಗಂಬರೇಶ್ವರ ದೇವಸ್ಥಾನದಲ್ಲಿ ಅಂಬಲಿ-ಕಿಚಡಿ ಪ್ರಸಾದ ವಿತರಿಸುವ ಮೂಲಕ ಹರಕೆ ಸಮರ್ಪಣೆ ನಡೆಯಲಿದೆ.
- ಪ್ರಸನ್ನಕುಮಾರ ದೇಸಾಯಿ, ಗ್ರಾಮದ ಹಿರಿಯ