ತೇರದಾಳ ತಾಲೂಕಿನ ಹನಗಂಡಿ ಗ್ರಾಮದ ದಿಗಂಬರೇಶ್ವರ ದೇವಸ್ಥಾನದ ಎದುರು ಪೂಜಾರಿಗಳು ಅಗ್ಗಿ ಹಾಯ್ದು ಕಾರಣಿಕ ನುಡಿದರು. 
ಬಾಗಲಕೋಟೆ

ರಾಷ್ಟ್ರ ನಾಯಕರಿಗೆ ಕಂಟಕ ಬಂದು ಪರಿಹಾರ ಆಗ್ತಾವು...!

ಪ್ರಮುಖ ಮುಖ್ಯಾಂಶಗಳು

  • ಹನಗಂಡಿ ಗ್ರಾಮದಲ್ಲಿ ಕಾರಣಿಕ ನುಡಿ
  • ಇಬ್ಬರ ಜಗಳದಾಗ ಮೂರನೇ ವ್ಯಕ್ತಿಗೆ ಖುರ್ಚಿ ಪಾಲು
ತೇರದಾಳ: ಪ್ರಸಕ್ತ ವರ್ಷದ ಅಂತ್ಯಕ್ಕೆ ಬೆಂಕಿ ಮಳೆ ಆದಿತು. ದೇಶದ ರಾಷ್ಟ್ರ ನಾಯಕನಿಗೆ ಕಂಟಕ ಬರತಾವಾದರೂ ಪರಿಹಾರ ಆಗತಾವು....! ಇಬ್ಬರ ಜಗಳದಾಗ ಮೂರನೇ ವ್ಯಕ್ತಿಗೆ ಖುರ್ಚಿ ಪಾಲು.
ಇದು ಮಹಾಶಿವರಾತ್ರಿ ನಿಮಿತ್ತ ತಾಲೂಕಿನ ಹನಗಂಡಿ ಗ್ರಾಮದಲ್ಲಿ ದಿಗಂಬರೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ಬೆಳಗಿನ ಜಾವ ಅಗ್ಗಿ ಹಾಯುವ ಸಂದರ್ಭದಲ್ಲಿ ಪೂಜಾರಿಗಳು ನುಡಿದ ಭವಿಷ್ಯ.
9 ಆಣೆ ಮಳೆ, 7 ಆಣೆ ಬೆಳೆ, ಮುಂಗಾರು ಮಳೆ 3 ಸುಳ್ಳು, ಹಿಂಗಾರು ಮಳೆ 2 ಹೋಗುತ್ತದೆ. ಬೆಳೆಗೆ ಬೆಂಕಿ ರೋಗ ಬಾಳ ಐತಿ, ಬೆಲ್ಲ ಬಲ್ಲಂಗ ಮಾರತೈತಿ. ಗೋಧಿ, ಕಡಲೆ, ದಿನಸಿ ಹೆಚ್ಚಿನ ಬೆಲೆಗೆ ಮಾರಾಟ ಆಗ್ತಾವ. ಶ್ರಾವಣ ಮಾಸದಾಗ ಬಿರುಗಾಳಿ, ಭೂಕಂಪದ ಭಯಾ ಇದೆ. ಉತ್ತರ ದಿಕ್ಕಿನ ಒಂದು ದೇಶ ಭೂಪಟದಿಂದ ಮರೆಯಾಗಲಿದೆ. ಖುರ್ಚಿ ಸಲುವಾಗಿ ಇಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿಗೆ ಲಾಭ. ದಡ್ಡ, ದಡ್ಡರು ಕೂಡಿಕೊಂಡು ದೊಡ್ಡವರಿಗೆ ಬೆಂಕಿ, ಧರ್ಮದ ದಾರಿಯಲ್ಲಿ ನಡಿರಿ, ದುರ್ಗಾದೇವಿ ವಾರ ಪಾಲಸರಿ, ಕಾರ್ತಿಕ ಮಾಸದಲ್ಲಿ ಭೂಮಿಗೆ ಕತ್ತಲು, 2026 ಅಂತ್ಯಕ್ಕೆ ಬೆಂಕಿ ಮಳೆ ಆದಿತು, ದೇಶದ ರಾಷ್ಟ್ರ ನಾಯಕನಿಗೆ ಕಂಟಕ ಬರತಾವು, ಆದರೂ ಪರಿಹಾರ ಆಗತಾವು ಎಂದು ಭವಿಷ್ಯ ನುಡಿದರು.
ನೂರಾರು ವರ್ಷಗಳಿಂದ ಇಲ್ಲಿ ಶಿವರಾತ್ರಿ ಮರುದಿನ ಪೂಜಾರಿಗಳು ವಿಶೇಷ ಪೂಜೆ ಬಳಿಕ ಭವಿಷ್ಯ ನುಡಿಯುತ್ತಾರೆ. ಅದರಲ್ಲೂ ಅಗ್ಗಿ ಹಾಯುತ್ತಾ ವರ್ಷದ ಭವಿಷ್ಯವಾಣಿ ನುಡಿಯುವುದು ವಾಡಿಕೆ.
ಈ ವರ್ಷ ಸೋಮವಾರ ಬೆಳಗಿನ ಸಮಯದಲ್ಲಿ ಗ್ರಾಮದ ಐತಿಹಾಸಿಕ ದಿಗಂಬರೇಶ್ವರ ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ಅರ್ಚಕರು ಪೂಜಾ ಕೈಂಕರ್ಯ ನಡೆಸಿದ ಬಳಿಕ ಭವಿಷ್ಯ ನುಡಿದರು. ಸಾವಿರಾರು ಭಕ್ತರು ಭವಿಷ್ಯದ ವಾಣಿಗಾಗಿ ಆಗಮಿಸಿ ವಿಶೇಷವಾಗಿ ವಿಶೇಷ ಪೂಜೆ ಸಲ್ಲಿಸಿದರು.
12ನೇ ಶತಮಾನದಿಂದಲು ಈ ಆಚರಣೆ ನಡೆದುಕೊಂಡು ಬಂದಿದೆ. ಪ್ರಸಕ್ತ ವರ್ಷ ದೇವಸ್ಥಾನದ ಅರ್ಚಕರಾದ ಸಿದ್ದಪ್ಪಜ್ಜ ಪೂಜಾರಿ, ಹನಮಂತ, ಶ್ರೀಶೈಲ ಶಂಕರ, ಬಸವರಾಜ, ಮಲ್ಲಪ್ಪ ಸೇರಿ ಒಟ್ಟು 6 ಜನ ಪೂಜಾರಿಗಳು ಅಗ್ಗಿ ಹಾಯ್ದು ಕಾರಣಿಕ ನುಡಿದರು.
12ನೇ ಶತಮಾನದ ಶೂನ್ಯ ಸಿಂಹಸನಾಧೀಶ್ವರ ಅಲ್ಲಮ ಪ್ರಭು ದೇವರು ಗುಪ್ತಮಾರ್ಗದಿಂದ ದಿಗಂಬರೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದರು ಎನ್ನುವ ಇತಿಹಾಸವಿದ್ದು, ದೇವಸ್ಥಾನದ ಹಿಂಭಾಗದಲ್ಲಿರುವ ಹಳೆಯ ಕಟ್ಟಡದಲ್ಲಿ ಗುಪ್ತಮಾರ್ಗದ ಪ್ರವೇಶದ್ವಾರವಿದ್ದು, ಇಲ್ಲಿರುವ ಶಿವಲಿಂಗದ ಎದುರು ಬೆಳಗಿದ ದೀಪವನ್ನು ಬರಮಾಡಿಕೊಂಡು ಅಗ್ಗಿ ಹಾಯುವ ಸಂಪ್ರದಾಯಕ್ಕೆ ಚಾಲನೆ ನೀಡಲಾಗುತ್ತದೆ. ಬಳಿಕ ಭವಿಷ್ಯವಾಣಿ ಮೊಳಗುತ್ತದೆ.