ಗುಳೇದಗುಡ್ಡದ ಜ.ಶ್ರೀ. ಗುರುಸಿದ್ಧೇಶ್ವರ ಬಹನ್ಮಠದಲ್ಲಿ ನಡೆದ ಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಾತನಾಡಿದರು.
- ಮಾಜಿ ಸಚಿವೆ ಉಮಾಶ್ರೀ ಹೇಳಿಕೆ
- ಶರಣೆ ಅಕ್ಕಮಹಾದೇವಿ ಜಯಂತಿ
- ಹಣ ಮತ್ತು ಆಸ್ತಿಯ ವ್ಯಾಮೋಹದಿಂದ ಮನುಷ್ಯರು ಮನುಷ್ಯತ್ವವನ್ನು ಮರೆತಿದ್ದಾರೆ
ಗುಳೇದಗುಡ್ಡ: ಸಮಾಜದಲ್ಲಿ ಜಾತಿ-ಧರ್ಮದ ಮೇಲಿನ ಅತಿಯಾದ ಆಸಕ್ತಿ, ಹಣ ಮತ್ತು ಆಸ್ತಿಯ ವ್ಯಾಮೋಹದಿಂದ ಮನುಷ್ಯರು ಮನುಷ್ಯತ್ವವನ್ನು ಮರೆತಿದ್ದಾರೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.
ಪಟ್ಟಣದ ಜ.ಶ್ರೀ. ಗುರುಸಿದ್ಧೇಶ್ವರ ಬಹನ್ಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶರಣೆ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಟುಂಬವೇ ಮಹಿಳೆಯರಿಗೆ ಪ್ರೀತಿ, ವಿಶ್ವಾಸ ಹಾಗೂ ಜವಾಬ್ದಾರಿಯನ್ನು ಕಲಿಸುವ ಪಾಠಶಾಲೆಯಾಗಿದೆ. ಹೆಣ್ಣುಮಕ್ಕಳಿಗೆ ಕುಟುಂಬದಲ್ಲಿ ಪ್ರೋತ್ಸಾಹ ನೀಡಿದಾಗ ಮಾತ್ರ ಅವರು ಸಮಾಜದಲ್ಲಿ ಸಾಧನೆ ಮಾಡಬಹುದು. ಮಹಿಳೆಯ ಸಾಧನೆಗೆ ಅಕ್ಕಮಹಾದೇವಿ ಆದರ್ಶ ವ್ಯಕ್ತಿತ್ವವಾಗಿದ್ದು, ಅವರ ವಚನಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಹೇಳಿದರು.
ಗಜೇಂದ್ರಗಡ ದೇವಿಮನೆ ಪುಣ್ಯಾಶ್ರಮದ ಶರಣೆ ಸಾವಿತ್ರಮ್ಮ ಹಿರೇಮಠ ವಿಶೇಷ ಉಪನ್ಯಾಸ ನೀಡಿ, ಅಕ್ಕಮಹಾದೇವಿಯ ಜೀವನ ಸರಳವಾಗಿರಲಿಲ್ಲ. ಲೌಕಿಕ ಬದುಕನ್ನು ತ್ಯಜಿಸಿ ಪಾರಮಾರ್ಥಿಕ ಹಾಗೂ ಅಧ್ಯಾತ್ಮಿಕ ಸಾಧನೆಗಾಗಿ ಕೌಶಿಕ ರಾಜನನ್ನೇ ಧಿಕ್ಕರಿಸಿ ಹೊರಟವರು ಅಕ್ಕಮಹಾದೇವಿ ಎಂದು ತಿಳಿಸಿದರು. ತಮ್ಮ ವಚನಗಳ ಮೂಲಕ ಬದುಕಿನ ಸಾರವನ್ನು ಸಾರಿದ ಅವರ ಜೀವನ ಇಂದಿಗೂ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.
ಜ.ಶ್ರೀ. ಗುರುಸಿದ್ಧ ಪಟ್ಟದಾರ್ಯ ಸ್ವಾಮೀಜಿಗಳು ಮಾತನಾಡಿ, ಇಂದಿನ ಸಮಾಜದಲ್ಲಿ ಆಸ್ತಿ-ಅಂತಸ್ತುಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದ್ದು, ಪರೋಪಕಾರದ ಮೌಲ್ಯ ಕುಗ್ಗುತ್ತಿದೆ. ಅಕ್ಕಮಹಾದೇವಿಯ ಆದರ್ಶಗಳು ಸಮಾಜಕ್ಕೆ ದಿಕ್ಕು ತೋರಿಸುವಂತಿವೆ ಎಂದು ತಿಳಿಸಿದರು.
ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗಾಗಿ ಅಕ್ಕಮಹಾದೇವಿ ಕುರಿತು ವಚನ ಕಂಠಪಾಠ, ವಚನ ಗಾಯನ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಶರಣುಕುಮಾರ ಶ್ರೀಗಳು, ಅಮರನಾಥ ಶಾಸ್ತ್ರಿಗಳು ಮಾತನಾಡಿದರು. ಪ್ರಾಚಾರ್ಯ ಎಚ್.ಎಸ್. ಘಂಟಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿಯರಾದ ಸರಿತಾ ಚಂದನ್ನವರ, ಇಂದುಮತಿ ಬೋರಣ್ಣವರ ಸೇರಿ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.