ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಗದಿಗೆಪ್ಪ ಧಾರವಾಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಮಹಾಂತೇಶ ತಳವಾರ, ಮಾಳಪ್ಪ ಇಟ್ಟಣ್ಣವರ ಇದ್ದರು. 
ಬಾಗಲಕೋಟೆ

ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ

ಪ್ರಮುಖ ಮುಖ್ಯಾಂಶಗಳು

  • ಗ್ರಾಮ ಪಂಚಾಯಿತಿ ಸದಸ್ಯ ಗದಿಗೆಪ್ಪ ಧಾರವಾಡ ಹೇಳಿಕೆ
  • ಹಕ್ಕುಪತ್ರಕ್ಕಾಗಿ ಆಗ್ರಹ
  • ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಟುಂಬ ಸಮೇತ ಪ್ರತಿಭಟನೆ ಮಾಡಲಿದ್ದೇವೆ
ಬಾಗಲಕೋಟೆ : ಜಿಲ್ಲೆಯ ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾಮದ ಮಡ್ಡಿ ಪ್ಲಾಟ್ ಜನರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ನ. 14ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಗದಿಗೆಪ್ಪ ಧಾರವಾಡ ಹೇಳಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡ್ಡಿ ಪ್ಲಾಟ್‌ನಲ್ಲಿ 300ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಕೆಲವರಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಅವುಗಳು ಸರಿಯಾಗಿಲ್ಲ. ಉಳಿದವರಿಗೂ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.
1992 ರಿಂದ 2007ರವರೆಗೆ 119 ಜನರಿಗೆ ಹಕ್ಕುಪತ್ರ ನೀಡಲಾಗಿದೆ. ತೆರಿಗೆಯನ್ನೂ ಪಾವತಿಸಿಕೊಳ್ಳಲಾಗುತ್ತಿದೆ. ಕೆಲವು ಹಕ್ಕುಪತ್ರಗಳಲ್ಲಿ ಚೆಕ್‌ಬಂದಿ ಇಲ್ಲ. ಈ ಬಗ್ಗೆ ಕೇಳಿದರೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಹಲವಾರು ಬಾರಿ ಪ್ರತಿಭಟನೆ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕುಟುಂಬ ಸಮೇತ ಪ್ರತಿಭಟನೆ ಮಾಡಲಿದ್ದೇವೆ ಎಂದರು.
ಪ್ರತಿಭಟನೆಯ ನಂತರ ನಿರಂತರ ಜ್ಯೋತಿ ಸಂಪರ್ಕ ಕಲ್ಪಿಸಲಾಗಿದೆ. ಕೂಡಲೇ ಕಂದಾಯ ಗ್ರಾಮವಾಗಿ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡ ವೀರಣ್ಣ ಹಳೇಗೌಡರ ಮಾತನಾಡಿ, ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ದೂರು ನೀಡಿದಾಗ ಕಂದಾಯ ಗ್ರಾಮ ಪ್ರಸ್ತಾವ ಬಂದರೆ ಮಾಡಿಕೊಡುವುದಾಗಿ ಹೇಳಿ, ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲು ಸೂಚಿಸಿದ್ದರು. ಸಚಿವರು ಹೇಳಿದರೂ ಇಲ್ಲಿಯವರೆಗೆ ಪ್ರಸ್ತಾವ ಮಂಡನೆಯಾಗಿಲ್ಲ. ತಹಸೀಲ್ದಾರ ಪ್ರಸ್ತಾವವನ್ನು ಎರಡು ತಿಂಗಳ ಹಿಂದೆ ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದಾರೆ. ಆದರೆ, ಜಿಲ್ಲಾಧಿಕಾರಿ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಮಹಾಂತೇಶ ತಳವಾರ, ಮಾಳಪ್ಪ ಇಟ್ಟಣ್ಣವರ ಇದ್ದರು.