ಗುಳೇದಗುಡ್ಡದಲ್ಲಿ ಶರಣ ಸಂಗಮ ಸಮಾರಂಭ ಅಂಗವಾಗಿ ಮಹಿಳೆಯರ ರೊಟ್ಟಿ ಜಾತ್ರೆ ಮೆರವಣಿಗೆ ಗಮನಸೆಳೆಯಿತು. 
ಬಾಗಲಕೋಟೆ

ಗಮನಸೆಳೆದ ರೊಟ್ಟಿ ಜಾತ್ರೆ ಮೆರವಣಿಗೆ..!

ಪ್ರಮುಖ ಮುಖ್ಯಾಂಶಗಳು

  • ಗುರುಸಿದ್ಧೇಶ್ವರ ಬೃಹನ್ಮಠದ ಶರಣ ಸಂಗಮ
  • ಸಾಂಪ್ರದಾಯಿಕ ಸೀರೆ ಧರಿಸಿ ಮಿಂಚಿದ ಮಹಿಳೆಯರು
  • ಗ್ರಾಮೀಣ ಪ್ರದೇಶದ ಸೊಗಡಿನ ಪರಂಪರೆಯನ್ನು ಪ್ರತಿಬಿಂಬಿಸುವ ಈ ರೊಟ್ಟಿ ಜಾತ್ರೆ
ಗುಳೇದಗುಡ್ಡ : ಪಟ್ಟಣ ಜಗದ್ಗುರು ಗುರುಸಿದ್ಧೇಶ್ವರ ಬೃಹನ್ಮಠದ ಶರಣ ಸಂಗಮ ಸಮಾರಂಭದ ಅಂಗವಾಗಿ ನಡೆಸಿದ ರೊಟ್ಟಿ ಜಾತ್ರೆ ಮೆರವಣಿಗೆ ನೋಡುಗರ ಗಮನ ಸೆಳೆಯಿತು.
ಪಟ್ಟಸಾಲಿ ನೇಕಾರ ಸಮಾಜ ಒಳಗೊಂಡು ಬೇರೆ ಬೇರೆ ಸಮಾಜದ ಸಾಕಷ್ಟು ಮಹಿಳೆಯರಿಂದ ರೊಟ್ಟಿ ಜಾತ್ರೆ ಮೆರವಣಿಗೆ ಬಹಳಷ್ಟು ಸಡಗರ, ಸಂಭ್ರಮದಿಂದ ಜರುಗಿತು.
ಇಲ್ಲಿನ ಸಾಲೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಪವಾರ್ ಕ್ರಾಸ್, ಗುಗ್ಗರಿಪೇಟೆ, ಅರಳಿಕಟ್ಟಿ, ಚೌಬಜಾರ್, ಗಚ್ಚಿನಕಟ್ಟಿ, ಕಂಠಿಪೇಟೆ ಮೂಲಕ ಹಾಯ್ದು ಶ್ರೀ ಜಗದ್ಗುರು ಗುರುಸಿದ್ಧೇಶ್ವರ ಮಠಕ್ಕೆ ಬಂದು ತಲುಪಿತು. ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಸಿದ್ಧಪಡಿಸಿದ್ದ ಖಡಕ್ ರೊಟ್ಟಿ, ನಾನಾ ಬಗೆಯ ಖಾರದ ಚಟ್ನಿ, ವಿವಿಧ ತೆರನಾದ ಸಿಹಿ ಖಾದ್ಯಗಳನ್ನು ತಯಾರಿಸಿಕೊಂಡು ಒಂದು ಬುಟ್ಟಿಯಲ್ಲಿ ಕಟ್ಟಿಕೊಂಡು ಅದನ್ನು ಪ್ರತಿಯೊಬ್ಬ ಮಹಿಳೆಯರು ತಲೆ ಮೇಲೆ ಇಟ್ಟುಕೊಂಡು ರೊಟ್ಟಿ ಜಾತ್ರೆ ಮೆರವಣಿಗೆ ನಡೆಸಿದರು.
ಗ್ರಾಮೀಣ ಪ್ರದೇಶದ ಸೊಗಡಿನ ಪರಂಪರೆಯನ್ನು ಪ್ರತಿಬಿಂಬಿಸುವ ಈ ರೊಟ್ಟಿ ಜಾತ್ರೆ ಮೆರವಣಿಗೆಯಲ್ಲಿ ಮಹಿಳೆಯರು ಇಳಕಲ್ಲ ಸೀರೆ, ಗುಳೇದಗುಡ್ಡ ಖಣದಲ್ಲಿ ಮಿಂಚಿದರು.
ಪಟ್ಟಸಾಲಿ ನೇಕಾರ ಸಮಾಜ ಅಧ್ಯಕ್ಷೆ ಗೌರಮ್ಮ ಕಲ್ಬುರ್ಗಿ, ಭಾಗ್ಯಾ ಉದ್ನೂರ, ನಾಗರತ್ನಾ ಯಣ್ಣಿ, ತಾರಾಮತಿ ರೋಜಿ, ಮಾಲಾ ರಾಜನಾಳ, ಗೀತಾ ಬಂಕಾಪುರ, ಜಂಪವ್ವ ಕಲಬುರ್ಗಿ, ಶಾಂತಾ ಅದ್ವಾನಿ, ಗೀತಾ ತಿಪ್ಪಾ, ಶಶಿಕಲಾ ಮದ್ದಾನಿ, ಅಶ್ವಿನಿ ಪುರಾಣಿ, ಶಶಿಕಲಾ ಭಾವಿ, ಈರಮ್ಮ ರಾಜನಾಳ, ತಾರಾ ಕೆಲೂಡಿ, ಶೋಭಾ ಜಿಡಗಿ ಸೇರಿದಂತೆ ಇತರರು ಇದ್ದರು.