ಸಂಜೆಯಾದರೂ ಕಡಿಮೆಯಾಗದ ಸೆಕೆಯಿಂದ ಸುಸ್ತಾಗುತ್ತಿರುವ ಜನರು, ರಾತ್ರಿಯೂ ಸಹ ತಂಪು ಪಾನೀಯ ಕುಡಿದು ದಾಹ ತಣಿಸಿಕೊಳ್ಳುತ್ತಿರುವುದು. 
ಬಾಗಲಕೋಟೆ

ಬಿಸಿಲಿಗೆ ಕಾದು ಕೆಂಡವಾದ ಬಾಗಿಲು ಕೋಟೆ

ಪ್ರಮುಖ ಮುಖ್ಯಾಂಶಗಳು

  • ಮನೆಯಿಂದ ಆಚೆ ಬರಲೂ ಭಯ
  • ರಕ್ಷಣೆಗಾಗಿ ಎಲೆಕ್ಟಿçಕ್ ಬೈಕ್‌ಗೆ ಮೇಲ್ಪರದೆ ಅಳವಡಿಕೆ
  • ಪಾನೀಯ ಕುಡಿದರೂ ತೀರದ ದಾಹ
ಅಶೋಕ ಶೆಟ್ಟರ, ಬಾಗಲಕೋಟೆ
ಶಿವ ಶಿವ ಎನ್ನುವ ಶಿವರಾತ್ರಿ ಬಿಸಿಲು ಮುಗಿಯಿತು. ಬಾಯಿ ಬಡಿದುಕೊಳ್ಳುವಷ್ಟು ಹೋಳಿ ಬಿಸಿಲಿನ ಅಬ್ಬರವೂ ಆಯಿತು. ಇನ್ನೇನು ಪೂರ್ವ ಮುಂಗಾರು ಅಬ್ಬರಿಸಿ, ಕಾದು ಕಬ್ಬಿಣದಂತಾಗಿರುವ ಭೂಮಿ ತಂಪಾಗಿ ಜನರ ಬೆವರಿನ ಸ್ನಾನ ಕಡಿಮೆ ಆಗುತ್ತದೆ ಎನ್ನುವುದು ಈವರೆಗೂ ಹುಸಿಯಾಗಿ ದಿನೇ ದಿನೇ ಬಿಸಿಲಿನ ತಾಪ ಏರಿಕೆ ಆಗುತ್ತಲೇ ಇದೆ.
ವಾತಾವರಣದಲ್ಲಿ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ಗೆ ಬರುತ್ತಿದ್ದಂತೆ ಮಳೆ ಅಬ್ಬರಿಸುತ್ತದೆ ಎನ್ನುವ ಹವಾಮಾನ ತಜ್ಞರು ಅಭಿಮತದಂತೆ ಜಿಲ್ಲೆಯಲ್ಲಿ ಆ ಮಟ್ಟ ಬಂದು ಹೋಗಿದ್ದಾಗಿದೆ. ಆದರೆ, ಅದೇಕೋ ಏನೋ ಕೆಲವಡೆ ಮಳೆಯ ದರ್ಶನವಾಗಿದ್ದರೂ ನಗರದಲ್ಲಿ ಮಾತ್ರ ಈ ವರೆಗೂ ಭೂಮಿ ತಂಪಾಗುವಷ್ಟು ಮಳೆ ಅಬ್ಬರ ಆಗಿಲ್ಲ.
ಹೀಗಾಗಿ ಸೂರ್ಯನ ಉಗ್ರರೂಪ ಹೆಚ್ಚುತ್ತಿದ್ದು, ಜನರು ಹೈರಾಣಾಗಿ ಹೋಗಿದ್ದಾರೆ. ಹಗಲು, ರಾತ್ರಿ ಸೆಕೆ, ತೀರದ ದಾಹ, ಊಟ ಮಾಡಲು ಬೇಸರ. ಬರೀ ತಂಪು ಪಾನೀಯ ಕುಡಿಯಬೇಕು ಎನ್ನಿಸುತ್ತದೆ. ಜನರು ಮನೆಯಿಂದ ಆಚೆ ಬರಲು ಭಯಪಡುವಷ್ಟರ ಮಟ್ಟಿಗೆ ಬಿಸಿಲು ಆರ್ಭಟಿಸುತ್ತಿದೆ.
ಬಿಸಿಲಿನ ಅಬ್ಬರ ಕಡಿಮೆ ಆಗದ್ದರಿಂದ ಜನರಿಗಾಗಿ ವಿವಿಧೆಡೆ ಸಂಘ-ಸಂಸ್ಥೆಗಳು ಅರವಟಿಗೆಗಳ ಮೂಲಕ ನೀರಿನ ವ್ಯವಸ್ಥೆ ಮಾಡಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ. ಆದರೂ ನಡೆದುಕೊಂಡು ಹೋಗುವುದು ಬಿಡಿ, ಬೈಕ್‌ಗಳಲ್ಲೂ ಸಂಚರಿಸಿದರೂ ಕಾದು ಕಬ್ಬಿಣದಂತಾಗಿರುವ ರಸ್ತೆಯ ಕಾವು ಮುಖಕ್ಕೆ ರಾಚುತ್ತದೆ. ಸ್ವಲ್ಪ ಹೊತ್ತಲ್ಲೇ ಸಾಕಪ್ಪ ಸಾಕು ಸಂಚಾರ ಎನ್ನುವಂತಾಗುತ್ತಿದೆ. ಇನ್ನು ಪಾದಚಾರಿಗಳ ಪಾಡು ದೇವರಿಗೆ ಪ್ರೀತಿ !
ಇದೀಗ ಬಿಸಿಲಿನ ರಕ್ಷಣೆಗಾಗಿ ಕೆಲ ಎಲೆಕ್ಟ್ರಿಕ್ ಬೈಕ್ ಸವಾರರು ಸಾವಿರಾರು ರೂ. ಖರ್ಚು ಮಾಡಿ ಬೈಕ್‌ಗೆ ಮೇಲ್ಪರದೆ ಅಳವಡಿಸಿ ನೆತ್ತಿ ಸುಡುವ ಬಿಸಿಲಿನಿಂದ ಬಚಾವಾಗಲು ಉಪಾಯ ಕಂಡು ಕೊಂಡಿದ್ದಾರೆ. ಓಪನ್ -ಫೇಸ್ ಇರುವ ಸುತ್ತಲೂ ಕವರ್ ಇರದೇ ಗಾಳಿ ಓಡಾಡುವ ಮೇಲುಗಡೆ ಹೊದಿಕೆ ಇರುವಎಲೆಕ್ಟ್ರಿಕ್ ಬೈಕ್‌ಗಳ ಮೇಲೆ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಕೆಲ ಎಲೆಕ್ಟ್ರಿಕ್ ಬೈಕ್ ಮಾಲೀಕರು ವೈಯಕ್ತಿಕವಾಗಿ ಸ್ಕೂಟರ‍್ಸಗಳನ್ನು ಬಳಸುತ್ತಿದ್ದರೆ ಕೆಲವರು ಬಾಡಿಗೆಗಾಗಿ ಮೇಲು ಹೊದಿಕೆಯನ್ನು ಅಳವಡಿಸಿಕೊಂಡು ಮಾರ್ಪಡಿಸಿದ್ದಾರೆ.

ರಸ್ತೆ ಬದಿ ನಿಲ್ಲಲು ನೆರಳಿನ ಕೊರತೆ

ನೆರಳಿಗೆ ಮೊರೆ ಹೋಗಬೇಕೆಂದರೆ ಪ್ರಮುಖ ರಸ್ತೆಗಳಲ್ಲಿ ಗಿಡ-ಮರಗಳು ಅಪರೂಪ. ರಸ್ತೆ ಅಗಲೀಕರಣಕ್ಕಾಗಿ ಅನೇಕ ಗಿಡ-ಮರಗಳನ್ನು ಕಡಿದು ಹಾಕಲಾಗಿದೆ. ಹೀಗಾಗಿ ರಣರಣ ಬಿಸಿಲಿಗೆ ಜನರು ಬಳಲಿ ಬೆಂಡಾಗುತ್ತಿದ್ದಾರೆ.

ತಂಪು ಪಾನೀಯಕ್ಕೆ ಮೊರೆ

ಬಿಸಿಲಿನ ಬೇಗೆ ಹೆಚ್ಚಿದೆ. ಇದರಿಂದ ಹೊರ ಬರಲು ಜನರು ತಂಪು ಪಾನೀಯಕ್ಕೆ ಮೊರೆ ಹೋಗುತ್ತಿದ್ದಾರೆ. ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಿದ್ದರಿಂದ ಬೆಲೆಯೂ ದುಭಾರಿ ಆಗಿವೆ. 15 ರೂ. ಒಂದು ಗ್ಲಾಸ್ ಜ್ಯೂಸ್ ಕೊಡುತ್ತಿದ್ದವರು ಇದೀಗ ಅದನ್ನು 20 ರೂ. ಗೆ ಏರಿಕೆ ಮಾಡಿದ್ದಾರೆ. ಹಾಗೆಯೇ ಸ್ಪೆಷಲ್ ಜ್ಯೂಸ್ 30ರಿಂದ 40 ರೂ. ಹೆಚ್ಚಳವಾಗಿದೆ. ಎಳನೀರು ಸಹ 50 ರೂ. ತಲುಪಿಯಾಗಿದೆ. ಹಣ್ಣುಗಳ ಬೆಲೆ ಗಗನಮುಖಿ ಆಗಿದೆ. ಬಿಸಿಲಿನ ದಾಹ ತಣಿಸಿಕೊಳ್ಳಲು ಜೇಬಿಗೂ ಕತ್ತರಿ ಬೀಳುತ್ತಿದೆ. ಪಾನೀಯ ಕುಡಿದರೂ ಸ್ವಲ್ಪ ಹೊತ್ತು ಆರಾಮ ಅನ್ನಿಸಿದರೂ ಮತ್ತೆ ಅದೇ ದಾಹ, ಸಂಕಟ ಸಂಕಟ ಆಗುತ್ತದೆ ಎಂದು ಜನರು ಹೇಳುತ್ತಾರೆ.
ಆದರೆ ಹೋಟೆಲ್, ಬೀದಿ ಬದಿ ಗೂಡಂಗಡಿಗಳಲ್ಲಿ ವಹಿವಾಟು ಕುಸಿದಿದೆ. ಬಿಸಿಲಿಗೆ ಜನರು ಊಟ, ತಿಂಡಿಗೆ ಬರುವುದು ಕಡಿಮೆ ಆಗಿದೆ. ಬಂದರೂ ಅಲ್ಲೂ ಸಹ ಹೆಚ್ಚಾಗಿ ಮೊಸರು ಅವಲಕ್ಕಿ, ಮೊಸರು ವಡಾ, ಮಜ್ಜಿಗೆ ಕೇಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಿಂದ ವಿವಿಧ ಕಾರ್ಯಗಳಿಗೆ ಬರುತ್ತಿದ್ದ ಜನರ ಸಂಖ್ಯೆಯೂ ಕಡಿಮೆ ಆಗಿದೆ. ಬಿಸಿಲಿಗೆ ಜನರು ಬೆಚ್ಚಿಬಿದ್ದಿದ್ದಾರೆ. ವ್ಯಾಪಾರ ಬಹಳ ಕುಸಿತ ಕಂಡಿದೆ ಎಂದು ಬೀದಿ ಬದಿ ವ್ಯಾಪಾರಿಗಳು ಹೇಳುತ್ತಾರೆ.

ಫ್ಯಾನ್ ಬಂದ್ ಆಗುತ್ತಿಲ್ಲ

ಬಿಸಿಲಿಗೆ ಹೆದರಿ ಅನೇಕರು ಮನೆಯಿಂದ ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯಲ್ಲಿ ಇದ್ದರೂಫ್ಯಾನ್ , ಕೂಲರ್‌ಗಳನ್ನು 24/7 ಹಚ್ಚುವ ಸ್ಥಿತಿ ಇದೆ. ಸ್ವಲ್ಪ ಹೊತ್ತಿನಲ್ಲೇ ಅದರಿಂದ ಬಿಸಿಗಾಳಿ ಬರಲು ಆರಂಭಿಸುತ್ತದೆ. ಫ್ಯಾನ್ ಕೆಳಗೆ ಕುಳಿತರೂ ಬೆವರು ಹರಿದು ಬರುತ್ತದೆ. ರಾತ್ರಿ ಸಹ ಧಗೆ ಇರುವುದರಿಂದ ನಿದ್ದೆ ಸಹ ಸರಿಯಾಗಿ ಆಗುತ್ತಿಲ್ಲ. ಅಪ್ಪಿತಪ್ಪಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದರೆ ದೊಡ್ಡ ಶಿಕ್ಷೆ ಅನುಭವಿಸುವ ಪಾಡು ಆಗಿದೆ ಎಂದು ಜನರು ಈ ಬಿಸಿಲಿನ ಅನುಭವ ಹೊರಹಾಕುತ್ತಾರೆ.
"

ಬಿಸಿಲಿನ ಹೊಡೆತ ಜೋರಾಗಿದೆ. ಬೈಕ್‌ನಲ್ಲಿ ಹೋಗಲು ಭಯ ಆಗುವಷ್ಟು ತಾಪ ಹೆಚ್ಚಾಗಿದೆ. ಹೀಗಾಗಿ ನಮ್ಮ ಎಲೆಕ್ಟ್ರಿಕ್ ಬೈಕ್‌ಗೆ 2000 ರೂ. ಖರ್ಚು ಮಾಡಿ ಮುಂಬೈನಿಂದ ಮೇಲು ಹೊದಿಕೆ ತಂದು ಅಳವಡಲಾಗಿದೆ. ಈಗ ಬಿಸಿಲಿನಿಂದ ರಕ್ಷಣೆ ಪಡೆದು ಬೈಕ್‌ನಲ್ಲಿ ಸ್ವಲ್ಪ ಆರಾಮವಾಗಿ ಪ್ರಯಾಣಿಸಬಹುದು.