ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ಹಿರಿಯ ಸರ್ಕಾರಿ ಶಾಲೆಯಲ್ಲಿ ಸುದ್ದಿಗಾರರೊಂದಿಗೆ ಶಾಸಕ ಜೆ.ಟಿ. ಪಾಟೀಲ ಮಾತನಾಡಿದರು. ನ್ಯಾಯವಾದಿ ಜಿ.ಆರ್. ಪಾಟೀಲ, ಪಡಿಯಪ್ಪ ಕರಿಗಾರ ಇದ್ದರು.
- ಶಾಸಕ ಜೆ.ಟಿ. ಪಾಟೀಲ ಹೇಳಿಕೆ
- ಕೃಷ್ಣಾ ಸಂತ್ರಸ್ತರ ಕೂಗಿಗೆ ಸ್ಪಂದನೆ
- 73 ಸಾವಿರ ಎಕರೆ ಮುಳುಗಡೆಯಾಗಲಿದೆ
ಬೀಳಗಿ: ಕೃಷ್ಣಾ ಮೇಲ್ದಂಡೆ ಯೋಜನೆ ಆಲಮಟ್ಟಿ ಜಲಾಶಯ ಹಿನ್ನೀರಿನಲ್ಲಿ ಮುಳುಗಡೆಯಾಗುವ ಜಮೀನುಗಳ ಸಂತ್ರಸ್ತರ ಬೇಡಿಕೆಯಂತೆ ಭೂಮಿ ಸ್ವಾಧೀನಪಡಿಸಿಕೊಂಡು ಯುಕೆಪಿ ಮೂರನೇ ಹಂತಕ್ಕೆ ಚಾಲನೆ ನೀಡಿದೆ. ಕಳೆದ 30 ವರ್ಷದ ಹೋರಾಟಕ್ಕೆ ಕಾಂಗ್ರೆಸ್ ಸರ್ಕಾರ ಸ್ಪಂದಿಸಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ತಾಲೂಕಿನ ಕೊರ್ತಿ ಗ್ರಾಮದ ಹಿರಿಯ ಸರ್ಕಾರಿ ಶಾಲೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 73 ಸಾವಿರ ಎಕರೆ ಮುಳುಗಡೆಯಾಗಲಿದೆ. ಪ್ರತಿ ಎಕರೆ ಒಣ ಬೇಸಾಯಕ್ಕೆ 30 ಲಕ್ಷ ರೂ., ನೀರಾವರಿ 40 ಲಕ್ಷ ರೂ. ಪರಿಹಾರ ನೀಡಲು ನಿರ್ಧರಿಸಿದೆ. ಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ನಮ್ಮ ಸರ್ಕಾರ ಮಾಡಿದೆ ಎಂದರು.
ಎರಡನೇ ಹಂತದಲ್ಲಿ 22 ಹಳ್ಳಿಗಳ ಪುನರ್ವಸತಿ ಕೇಂದ್ರಗಳ ನಿರ್ಮಾಣಮಾಡಿ ಸ್ಥಳಾಂತರ ಮಾಡುವುದು, ಮೂರನೇ ಹಂತದಲ್ಲಿ ಪುನರ್ವಸತಿ ಕೇಂದ್ರಗಳ ಮೂಲಕ ಸೌಕರ್ಯ ಅಭಿವೃದ್ಧಿ ಕೆಲಸ ಮಾಡುವ ಯೋಜನೆ ಕೈಗೊಳ್ಳಲಾಗಿದೆ. 1995ರಲ್ಲಿ ವಾಸಣ್ಣ ದೇಸಾಯಿ ಅಧ್ಯಕ್ಷತೆಯಲ್ಲಿ ಹೋರಾಟಮಾಡಿ 30 ವರ್ಷ ಬಳಿಕ ನಮಗೆ ಪ್ರತಿಫಲ ಸಿಕ್ಕಿದೆ. ಮುಂದಿನ ಬಜೆಟ್‌ನಲ್ಲಿ 15 ರಿಂದ 18 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲು ಸರ್ಕಾರ ನಿರ್ಧಾರ ಮಾಡಿದೆ. ಶೀಘ್ರದಲ್ಲಿ ಜಿಲ್ಲಾ ಕೇಂದ್ರದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ನ್ಯಾಯವಾದಿ ಜಿ.ಆರ್. ಪಾಟೀಲ, ಪಡಿಯಪ್ಪ ಕರಿಗಾರ ಇದ್ದರು.