ಬಾಗಲಕೋಟೆ ನಗರದಲ್ಲಿ ಗುರುವಾರ ಬಣ್ಣದ ಬಂಡಿಗಳ ಮೆರವಣಿಗೆಯಲ್ಲಿ ಕಂಡು ಬಂದ ದೃಶ್ಯ.
- ನವನಗರದ, ವಿದ್ಯಾಗಿರಿಯಲ್ಲಿ ಸಂಭ್ರಮ
- ವ್ಯಾಪಾರ ವಹಿವಾಟು ಸ್ವಯಂ ಘೋಷಿತ ಬಂದ್
- ಹಲಗೆ ಅಬ್ಬರ ನಿರಂತರ
ಬಾಗಲಕೋಟೆ: ದೇಶದಲ್ಲಿಯೆ ಖ್ಯಾತಿ ಪಡೆದಿರುವ ಬಾಗಲಕೋಟೆ ಹೋಳಿ ಹಬ್ಬದ ರಂಗೀನಾಟ ಮೊದಲ ದಿನ ಗುರುವಾರ ಅದ್ದೂರಿಯಾಗಿ ಆರಂಭವಾಗಿದ್ದು, ಬೆಳಗ್ಗೆ ನೀರಸವಾಗಿ ಆರಂಭಗೊಂಡಿದ್ದ ಹೋಳಿ ಮಧ್ಯಾಹ್ನದ ಬಳಿಕ ಕೋಟೆನಗರಿಯನ್ನು ಸಂಭ್ರಮದಲ್ಲಿ ತೇಲುವಂತೆ ಮಾಡಿತು.
ಮುಳುಗಡೆಯಾದ ಬಳಿಕ ಅಧಿಕೃತವಾಗಿ ನವನಗರ, ವಿದ್ಯಾಗಿರಿ ಭಾಗದಲ್ಲಿ ಹಮ್ಮಿಕೊಂಡಿದ್ದ ಬಣ್ಣದಾಟ ಹೋಳಿ ಉತ್ಸವದ ಸಂತಸ ಇಮ್ಮಡಿಗೊಳಿಸಿತ್ತು.
ಬೆಳಗ್ಗೆ ೧೧ ಗಂಟೆಗೆ ನವನಗರ, ವಿದ್ಯಾಗಿರಿ, ಹಳೇ ಬಾಗಲಕೋಟೆ ನಗರದಲ್ಲಿ ಬಣ್ಣದಾಟ ಆರಂಭಗೊಂಡಿತು. ಯುವಕರು, ಮಹಿಳೆಯರು, ಹಿರಿಯರು ಹಲಗೆ ಸಂಭ್ರಮದಿಂದ ಪಾಲ್ಗೊಂಡಿದ್ದರು. ೧ ಗಂಟೆಗೆ ಬಳಿಕ ನವನಗರ, ವಿದ್ಯಾಗಿರಿ ಬಣ್ಣದ ಲೋಕ ಸೃಷ್ಟಿಯಾಯಿತು.
ನವನಗರದ ಜಿಹ್ವೇಶ್ವರ ದೇವಸ್ಥಾನದಿಂದ ನವನಗರದ ಜನತೆ, ವಿದ್ಯಾಗಿರಿ ಆಂಜನೇಯ ಸ್ವಾಮಿ ದೇವಸ್ಥಾನದಿಂದ ವಿದ್ಯಾಗಿರಿ ಜನತೆ ಬಣ್ಣದ ಬಂಡಿಗಳ ಮೆರವಣಿಗೆ ಆರಂಭಿಸಿದರು. ನೂರಾರು ಸಂಖ್ಯೆಯಲ್ಲಿದ್ದ ಟ್ಯಾಕ್ಟರ್, ಎತ್ತಿನ ಬಂಡಿಗಳಲ್ಲಿ ತುರಾಯಿ ಹಲಗೆ ನೇತೃತ್ವ ಮೆರವಣಿಗೆ ನೋಡುಗರಿಗೆ ಗಮನ ಸೆಳೆಯಿತು. ಕಾಳಿದಾಸ ವೃತ್ತ, ಜಿಲ್ಲಾ ಆಸ್ಪತ್ರೆ ವೃತ್ತ, ನಗರಸಭೆ, ಬಸವೇಶ್ವರ ಸಹಕಾರಿ ಬ್ಯಾಂಕ್ ರಸ್ತೆಯಲ್ಲಿ ಪರಸ್ಪರ ಸಮಾಗಮಗೊಳ್ಳುವ ದೃಶ್ಯ ಬಾಗಲಕೋಟೆ ಹೋಳಿ ಗತವೈಭವ ಸಾರಿತು.
ಮೊದಲ ದಿನದ ಕಿಲ್ಲಾಗಲ್ಲಿಯ ರಂಗಿನಾಟ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿತು. ಮಹಿಳೆಯರು, ಮಕ್ಕಳು, ಯುವಕರು ಬಣ್ಣದೋಕುಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪ್ರಮುಖ ಜನದಟ್ಟನೆ ಪ್ರದೇಶಗಳಲ್ಲಿ ಓಕುಳಿ ಆಡಿ ಯುವಕರು ಸಂಭ್ರಮಿಸಿದರು.
ರಂಗಿನ ಆಟದ ಪರಿಣಾಮ ಇಡೀ ಬಾಗಲಕೋಟೆ ವ್ಯಾಪಾರ ವಹಿವಾಟು ಸ್ವಯಂ ಘೋಷಿತ ಬಂದ್‌ನಂತೆ ಕಾಣಿಸಿತು. ಬಸ್ ನಿಲ್ದಾಣ, ರೈಲು ನಿಲ್ದಾಣ ಪ್ರಮುಖ ಪ್ರದೇಶಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಬೆಳಗ್ಗ್ಗೆಯಿಂದ ಮಕ್ಕಳು ಹಲಿಗೆ ಬಾರಿಸುವುದು ಬಣ್ಣ ಆಡುವುದು ಸಾಮಾನ್ಯವಾಗಿತ್ತು. ಮಧ್ಯಾಹ್ನದ ವೇಳೆಗೆ ಸ್ಪಲ್ಪ ಹೆಚ್ಚು ರಂಗು ಕಾಣಿಸಿತು. ಬಣ್ಣದ ನೀರು ತುಂಬಿಕೊಂಡು ಪ್ರಮುಖ ರಸ್ತೆಗಳಲ್ಲಿ ಓಕುಳಿಯಾಡುತ್ತ ಜನರನ್ನು ರಂಜಿಸಿದರು.
ಯುವಕರು ಪರಸ್ಪರ ಬಣ್ಣದ ನೀರು ಎರೆಚುತ್ತ ಸಂಭ್ರಮಿಸಿದರು. ಸಡಗರದಲ್ಲಿ ಹಲಗೆ ಸಪ್ಪಳವೂ ಸೇರಿಕೊಂಡು ಹಬ್ಬದ ರಂಗೇರಿತು. ವಿವಿಧ ಬಡಾವಣೆಗಳಲ್ಲಿ ಯುವತಿಯರು ಪರಸ್ಪರ ಗುಲಾಲ್ ಎರಚಿ ಹಬ್ಬಕ್ಕೆ ಕಳೆ ತಂದರು. ಬಣ್ಣದ ಬಂಡಿಗಳ ಜೊತೆ ಕೇಕೆ ಹಾಕುತ್ತಾ ಯುವಕರು ಸಾಗಿದರು. ಆಕರ್ಷಕ ಸಾಂಪ್ರದಾಯಕ ಹಲಗೆ ನಾದಕ್ಕೆ ಕುಣಿದು ಕುಪ್ಪಳಿಸಿದರು. ಮೊದಲ ದಿನ ಕೋಟೆನಗರಿ ರಂಗಿನಾಟ ನೋಡುಗರನ್ನು ಸೆಳೆಯಿತು.
ಇಂದು ಬಣ್ಣದ ಬಂಡಿಗಳ ಸಮಾಗಮ
ಮಾ. ೬ರಂದು ೨ನೇ ದಿನ ಬಣ್ಣದ ರಂಗು ಮತ್ತಷ್ಟು ರಂಗು ಪಡೆಯಲಿದೆ. ಹಳಪೇಟ, ಜೈನ್‌ಪೇಟ ಮತ್ತು ವೆಂಕಟಪೇಟ ಬಣ್ಣದೋಕುಳಿ ನಡೆಯಲಿದೆ. ಓಣಿಗಳಲ್ಲಿ ಓಕುಳಿ ಆಡಿದ ನಂತರ ಬಣ್ಣದ ಬಂಡಿಗಳು ಬಸವೇಶ್ವರ ವೃತ್ತದಿಂದ ಕಾಲೇಜು ವೃತ್ತದ ವರೆಗೆ ಎದುರು ಬದುರು ಸಮಾಗಮಗೊಳ್ಳಲಿವೆ. ಪರಸ್ಪರ ಬಣ್ಣ ಎರಚುವ ಮೂಲಕ ಹಬ್ಬದ ರಂಗು ಮತ್ತೇರುವಂತೆ ಮಾಡುತ್ತಾರೆ. ಆಕರ್ಷಕವಾದ ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ರಸ್ತೆಯ ಎಡಬದಿಯಲ್ಲಿ ಗುಂಪು ಗುಂಪಾಗಿ ಸೇರುವ ನಿರೀಕ್ಷೆ ಇದೆ. ಬಸವೇಶ್ವರ ವೃತ್ತದಲ್ಲಿ ಬಣ್ಣದ ಕಾರಂಜಿ, ಡಿಜೆ ಸೌಂಡ್, ಹಲಗೆ ನಿನಾದ ಹಬ್ಬದ ಕಳೆ ಮೇಳೈಸುವಂತೆ ಮಾಡಲಿದೆ.
ಈಚೆಗೆ ಬಾಗಲಕೋಟೆ ನಗರದಲ್ಲಿ ನಡೆದ ಬೆಳವಣಿಗೆ ಹಿನ್ನೆಲೆಯಲ್ಲಿ ಮೊದಲ ನೀರಸ ಪ್ರತಿಕ್ರಿಯೆ ಕಂಡು ಬಂದಿತು. ಬಹುತೇಕರು ಪ್ರವಾಸಕ್ಕೆ ತೆರಳಿದ್ದರಿಂದ ರಂಗಿನಾಟಕ್ಕೆ ಹಿನ್ನಡೆಯಾಯಿತು. ಭಾರಿ ಪ್ರಮಾಣದಲ್ಲಿ ರಂಗದೋಕುಳಿ ಮಿಂದೇಳು ನಿರೀಕ್ಷೆಯಿಲ್ಲಿದ್ದವರು ಹುಸಿಯಾಗಿಸಿತು. ಎರಡನೇ, ಮೂರನೇ ದಿನ ಬಣ್ಣದಾಟ ಕಾದು ನೋಡಬೇಕಿದೆ.