ಬಾಗಲಕೋಟೆ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 26ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಎಸ್.ಎಚ್. ಶೆಟ್ಟರ, ಎಸ್.ಜೆ. ಒಡೆಯರ ಇತರರಿದ್ದರು. 
ಬಾಗಲಕೋಟೆ

ಉತ್ತಮ ಸಂಸ್ಕಾರದಿಂದ ಉಜ್ವಲ ಭವಿಷ್ಯ

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಚಾರ್ಯ ಎಸ್.ಎಚ್. ಶೆಟ್ಟರ ಅಭಿಮತ
  • ಸಮಾಜ ಕಟ್ಟುವ ಜವಾಬ್ದಾರಿ ನಿರ್ವಹಿಸಿ
ಬಾಗಲಕೋಟೆ: ಆಧುನಿಕ ಜಗತ್ತಿನಲ್ಲಿ ಮಹಿಳೆಗೆ ಅತ್ಯುನ್ನತ ಸ್ಥಾನಗಳು ದೊರೆಯುತ್ತಿವೆ. ಪುರುಷರ ಸಮಾನವಾದ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾಳೆ. ಉತ್ತಮ ಸಮಾಜ ಕಟ್ಟುವ ಜವಾಬ್ದಾರಿ ಮಹಿಳೆಯರದ್ದಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಚ್. ಶೆಟ್ಟರ ಹೇಳಿದರು.
ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ 26ನೇ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ, ಕದಳಿಶ್ರೀ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿನಿಯರು ಗುರು-ಹಿರಿಯರಿಗೆ ಗೌರವ ಕೊಡುವ ಮನೋಭಾವನೆ ಬೆಳೆಸಿಕೊಂಡರೆ ಸಂಸ್ಕಾರಯುತ ಜೀವನ ನಡೆಸಲು ಸಾಧ್ಯ. ವಿದ್ಯಾರ್ಥಿನಿಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಆದರ್ಶವಾಗಿಟ್ಟುಕೊಂಡು ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನವನ್ನು ಒಂದು ತಪಸ್ಸಿನ ರೀತಿಯಲ್ಲಿ ಸ್ವೀಕರಿಸಬೇಕೆಂದರು.
ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಜೆ. ಒಡೆಯರ ಮಾತನಾಡಿ, ಪದವಿ ಹಂತದ ಶಿಕ್ಷಣವು ವಿದ್ಯಾರ್ಥಿನಿಯರ ಬದುಕಿನ ನಿರ್ಣಯ ಘಟ್ಟ. ಅದನ್ನು ಜವಾಬ್ದಾರಿಯಿಂದ ಸ್ವೀಕರಿಸಬೇಕು. ಆಸಕ್ತ ವಿಷಯಗಳಲ್ಲಿ ಹೆಚ್ಚಿನ ಅಧ್ಯಯನ ಮಾಡುವುದರ ಮೂಲಕ ಸಾಧನೆಗೈದು ಸಮಾಜ ಹಾಗೂ ಪಾಲಕರಿಗೆ ಕೀರ್ತಿ ತರುವುದರ ಜತೆಗೆ ಸಂತೋಷದ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು. ರ‍್ಯಾಂಕ್ ಪಡೆದ ವಿದ್ಯಾರ್ಥಿನಿಯರನ್ನು ಹಾಗೂ ವಿಶ್ವವಿದ್ಯಾನಿಲಯದ ಬ್ಲೂ ಆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪಾರಿತೋಷಕ ವಿತರಿಸಲಾಯಿತು.
ಅನುಷಾ ಸಂಗಡಿಗರು ಪ್ರಾರ್ಥಿಸಿದರು. ಪಿ.ಕೆ. ಚೌಗುಲಾ ಸ್ವಾಗತಿಸಿದರು. ಎಸ್. ಕೆ. ಹಿರೇಮಠ ಪರಿಚಯಿಸಿದರು. ಪಿ.ಎಂ. ಅರ್ಕಸಾಲಿ ವಾರ್ಷಿಕ ವರದಿ ವಾಚಿಸಿದರು. ಡಾ. ಎಂ.ವಿ. ಬಾಜಪ್ಪನವರ ಕ್ರೀಡಾ ವರದಿ ಓದಿದರು. ವಿದ್ಯಾರ್ಥಿ ಪ್ರತಿನಿಧಿ ಪದ್ಮಾ ಗಾಳಿಕಟ್ಟೆ ವಂದಿಸಿದರು.