ಕಲಾದಗಿಯಲ್ಲಿ ವಿಶ್ವ ಭಾರತೀಯ ಗ್ರಾಮೀಣಾಭಿವೃದ್ಧಿ ಸಂಘ ಆಯೋಜನೆ ಮಾಡಿದ್ದ ವಿದ್ಯಾರ್ಥಿ ವಿಕಾಸ ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿದ್ದರು.
- ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಅಭಿಮತ
- ಸಮಯ ಪಾಲನೆ ಮುಖ್ಯ
- ಯಾವ ವಿದ್ಯಾರ್ಥಿಯೂ ದಡ್ಡನಲ್ಲ. ನಿಮ್ಮ ಜಾಣತನ ನಿಮ್ಮಲ್ಲಿಯೇ ಅಡಗಿದೆ.
ಯಾವ ವಿದ್ಯಾರ್ಥಿಯೂ ದಡ್ಡನಲ್ಲ. ನಿಮ್ಮ ಜಾಣತನ ನಿಮ್ಮಲ್ಲಿಯೇ ಅಡಗಿದೆ. ಸಮಯ ಪಾಲನೆ, ನಿತ್ಯ ಪರಿಶ್ರಮ, ಅಭ್ಯಾಸದ ಮನನ, ಶ್ರದ್ಧೆ ಅಳವಡಿಸಿಕೊಂಡರೆ ಯಶಸ್ವಿ ವ್ಯಕ್ತಿಯಾಗಲು ಸಾಧ್ಯ ಎಂದು ಧಾರವಾಡದ ಖ್ಯಾತ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ ಹೇಳಿದರು.
ಸ್ಥಳಿಯ ವಿಶ್ವ ಭಾರತೀಯ ಗ್ರಾಮೀಣಾಭಿವೃದ್ಧಿ ಸಂಘದವರು ಹಣ್ಣು ಬೆಳೆಗಾರರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜನೆ ಮಾಡಿದ್ದ ವಿದ್ಯಾರ್ಥಿ ವಿಕಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ನೈತಿಕ ಮೌಲ್ಯಗಳು ಭವಿಷ್ಯದ ಯಶಸ್ಸಿನ ದಾರಿಯಾಗುತ್ತದೆ ಎಂದು ಹೇಳಿದರು.
ಜೀವನದಲ್ಲಿ ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳಿಗೆ ಅವಮಾನ ಮಾಡಬೇಡಿ. ಅವರಿಂದ ಸರಿಯಾದ ಮಾಗದರ್ಶನ ಪಡೆದು ಸಾಧನೆಮಾಡಿ. ಪರೀಕ್ಷೆಗಳಲ್ಲಿ ಭಯ ಪಡದೆ ಯಾವ ಪ್ರಶ್ನೆಗೆ ಎಷ್ಟು ಉತ್ತರ ಎಷ್ಟು ಸಮಯದಲ್ಲಿ ಬರೆಯಬೇಕು ಎಂದ ಅವರು, ವಿವಿಧ ಗಣಿತ ಲೆಕ್ಕಾಚಾರ, ಚಿತ್ರಕಲೆಗಳ ಉದಾಹರಣೆಗಳ ಮುಖಾಂತರ ವಿವರವಾಗಿ ಮಕ್ಕಳಿಗೆ ಮನನ ಮಾಡಿಸಿದರು.
ರಾಸಾಯನಿಕ ಶಾಸಜ್ಞ ರಾಕೇಶ ಪದಕಿ, ರಾಸಾಯನಿಕಗಳ ಮೂಲಕ ಆಮ್ಲಗಳ ಪರಿವರ್ತನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಕೆ.ಎಲ್. ಬಿಲಕೇರಿ, ವಿಶ್ವ ಭಾರತೀಯ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಕಾಂತ ಶೆಟ್ಟೆಪ್ಪನವರ, ಮುಖ್ಯೋಪಾಧ್ಯಾಯ ಆರ್.ವಿ. ಜಾಧವ, ಸಂಜಯ ಗಣಾಚಾರಿ, ಗುರು ಭರಮಶೆಟ್ಟಿ, ಸುಭಾಸ ದುರ್ವೆ, ಮಂಜು ಕಾಳೆ, ಶ್ರೀಶೈಲ ಉಗರಗೋಳ, ನಿಂಗಪ್ಪ ಅಗಸರ, ಶಿವು ಸಬರದ, ಗಣೇಶ ಕುಂದರಗಿ, ವಿನಾಯಕ ಭಜಂತ್ರಿ ಹಾಗೂ ಗ್ರಾಮದ ವಿವಿಧ ಪ್ರೌಢ ಶಾಲೆಯಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಶ್ರೀಧರ ತಂಬಾಕದ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಮರ ಇಂಗಳಗಿ ಸ್ವಾಗತಿಸಿದರು, ವಿರೇಶ ಕುಂಬಾರ ನಿರೂಪಿಸಿದರು.