ಬಾಗಲಕೋಟೆ ನಗರದಲ್ಲಿ ಭಾನುವಾರ ನಡೆದ ನೀಟ್ ಮರು ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಸಂಗಪ್ಪ ಭೇಟಿ ನೀಡಿ ಪರಿಶೀಲಿಸಿದರು. ಜಿಪಂ ಸಿಇಒ ಗಜಾನನ ಬಾಲೆ ಇತರರಿದ್ದರು. 
ಬಾಗಲಕೋಟೆ

ನೀಟ್ ಮರು ಪರೀಕ್ಷೆಗೆ 753 ವಿದ್ಯಾರ್ಥಿಗಳು ಗೈರು

ಶಿಲ್ಪಾ ಪವಾರ

ಪ್ರಮುಖ ಮುಖ್ಯಾಂಶಗಳು

  • ಕೇಂದ್ರಗಳಿಗೆ ಡಿಸಿ
  • ಎಸ್‌ಪಿ, ಸಿಇಒ ಭೇಟಿ
ಬಾಗಲಕೋಟೆ: ಜಿಲ್ಲೆಯ ನಡೆದ ನೀಟ್-2026 ಮರು ಪರೀಕ್ಷೆಯ 11 ಕೇಂದ್ರಗಳಲ್ಲಿ ಒಟ್ಟು 3214 ವಿದ್ಯಾರ್ಥಿಗಳು ಹಾಜರಾಗಿ, 753 ವಿದ್ಯಾರ್ಥಿಗಳು ಗೈರು ಉಳಿದಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ ನಡೆದ ನೀಟ್ ಮರು ಪರೀಕ್ಷೆಗಾಗಿ ನಗರದಲ್ಲಿ ಸ್ಥಾಪಿಸಲಾಗಿದ್ದ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಹಾಗೂ ಜಿಪಂ ಸಿಇಒ ಗಜಾನನ ಬಾಲೆ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
11 ಪರೀಕ್ಷಾ ಕೇಂದ್ರಗಳ ಪೈಕಿ ಬಸವೇಶ್ವರ ವಿದ್ಯಾವರ್ಧಕ ಸಂಘದ ಪಾಲಿಟೆಕ್ನಿಕ್ ಕಾಲೇಜ್, ವಿಜ್ಞಾನ ಮಹಾವಿದ್ಯಾಲಯ, ವಾಣಿಜ್ಯ ಮಹಾವಿದ್ಯಾಲಯ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜ್, ನವನಗರದ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಟಿ ಪರಿಶೀಲನೆ ನಡೆಸಿದರು.
ಭೇಟಿ ಸಮಯದಲ್ಲಿ ಪರೀಕ್ಷಾರ್ಥಿಗಳಿಗೆ ಸುಗಮವಾಗಿ ಪರೀಕ್ಷೆಗೆ ಹಾಜರಾಗುವಂತೆ ಕೇಂದ್ರಗಳಲ್ಲಿ ಕೈಗೊಂಡಿರುವ ವ್ಯವಸ್ಥೆಗಳ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಂಡರು. ಪ್ರವೇಶ ದ್ವಾರಗಳಲ್ಲಿ ಭದ್ರತಾ ತಪಾಸಣೆ, ಪ್ರೀಸ್ಕಿಂಗ್ ವ್ಯವಸ್ಥೆ ಪರಿಶೀಲನೆ ಸೇರಿ ನಿಯಮಾನುಸಾರ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂಬುವುದನ್ನು ವೀಕ್ಷಿಸಿದರು. ಪರೀಕ್ಷಾ ಕೊಠಡಿಗಳಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಕುಡಿಯುವ ನೀರು, ಶೌಚಗೃಹ , ವಿದ್ಯುತ್ ಸೇರಿ ಅಗತ್ಯ ಸೌಲಭ್ಯಗಳ ಸಮಪರ್ಕಕವಾಗಿರುವುದನ್ನು ಖಚಿತಪಡಿಸಿಕೊಂಡರು.
ನೀಟ್-2026 ಮರು ಪರೀಕ್ಷೆಗೆ ಒಟ್ಟು 3967 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 3214 ವಿದ್ಯಾರ್ಥಿಗಳು ಹಾಜರಾಗಿ ಉಳಿದ 753 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ ಎಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಪ್ರಭಾಕರ ಪಾಟೀಲ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಸಿ.ಮನ್ನಿಕೇರಿ ಸೇರಿ ಇತರರಿದ್ದರು.