ಬಾಗಲಕೋಟೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬುಧವಾರ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆಯಲ್ಲಿ ತಡರಾತ್ರಿ ವರೆಗೂ ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಪ್ರತಿನಿಧಿಗಳ ಜೊತೆ ಸಭೆ ನಡೆಯಿತು.  
ಬಾಗಲಕೋಟೆ

3600 ರೂ. ಒಪ್ಪದ ರೈತ ಮುಖಂಡರು

ಬುಧವಾರ ತಡರಾತ್ರಿವರೆಗೂ ಸಭೆ ನಡೆಸಿದ ಸಚಿವರು

ಬಾಗಲಕೋಟೆ: ಜಿಲ್ಲೆಯಲ್ಲಿ ಕಬ್ಬಿಗೆ ಬೆಲೆ ನಿಗದಿ ವಿಚಾರ ಇನ್ನೂ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ. ಮತ್ತೊಂದೆಡೆ ಬೆಳಗಾವಿಯಲ್ಲಿ ರೈತ ಮುಖಂಡ ಚೂನಪ್ಪ ಪೂಜಾರಿ ಹಾಗೂ ಇತರರನ್ನು ವಶಕ್ಕೆ ಪಡೆದ ಹಿನ್ನೆಲೆಯಲ್ಲಿ ಗುರುವಾರ ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ರಸ್ತೆ, ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದರು.

ತಾಲೂಕಿನ ಗದ್ದನಕೇರಿ ಕ್ರಾಸ್, ತುಳಸಿಗೇರಿ, ಕೂಡಲಸಂಗಮ ಕ್ರಾಸ್, ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಂಚಾರ ಕೆಲವೊತ್ತು ಸ್ಥಗಿತಗೊಂಡಿತು. ಪ್ರಯಾಣಿಕರು ಪರದಾಡುವಂತಾಯಿತು. ರಸ್ತೆಯಲ್ಲಿ ಅರ್ಧ ಕಿ.ಮೀ.ಗಿಂತಲೂ ಉದ್ದ ವಾಹನಗಳು ಸಾಲು ಸಾಲು ಕಂಡು ಬಂದವು.

ಮತ್ತೊಂದೆಡೆ ಮುಂದಿನ ಹೋರಾಟದ ರೂಪರೇಷಗಳ ಬಗ್ಗೆ ಮುಧೋಳದಲ್ಲಿ ಕಬ್ಬು ಬೆಳೆಗಾರರು ಸಂಜೆ ಸಭೆ ಸೇರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ನಡೆಸಿರುವ ಸಭೆ ಸಂಪೂರ್ಣ ಬಲಪ್ರದವಾಗದ ಹಿನ್ನಲೆಯಲ್ಲಿ ಇದೀಗ ಮುಧೋಳ ಭಾಗದ ರೈತರು ಕಾರ್ಖಾನೆಗಳೇ ನೇರವಾಗಿ ರೈತರ ಜೊತೆ ಮಾತುಕತೆ ನಡೆಸಿ, ತಮ್ಮ ಅಂತಿಮ ನಿರ್ಧಾರ ಏನು ಎಂದು ಸ್ಪಷ್ಟಪಡಿಸಬೇಕು.

ಕಳೆದ ವರ್ಷ ಟನ್‌ಗೆ ಕಾರ್ಖಾನೆಗಳು ನೀಡಿದ್ದ ಬೆಲೆ ಹಾಗೂ ಅಂದು ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಎಷ್ಟಿತ್ತು? ಸದ್ಯ ಸಕ್ಕರೆ ಬೆಲೆ ಎಷ್ಟಿದೆ? ಅದಕ್ಕೆ ಅನುಗುಣವಾಗಿ ಕಬ್ಬಿಗೆ ಎಷ್ಟು ಬೆಲೆ ನಿಗದಿ ಮಾಡುತ್ತಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಬಿಗಿಪಟ್ಟು ಹಿಡಿಯುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಸದ್ಯ ಶುಕ್ರವಾರ ರೈತರ ಹೋರಾಟ ಯಾವ ರೀತಿ ನಡೆಯುತ್ತದೆ ಎಂದು ಸಂಜೆವರೆಗೂ ಸ್ಪಷ್ಟಪಡಿಸಿಲ್ಲ.

ಮತ್ತೊಂದೆಡೆ ಬುಧವಾರ ಸಂಜೆಯಿಂದ ತಡರಾತ್ರಿ ವರೆಗೂ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಧ್ಯಕ್ಷೆಯಲ್ಲಿ ಸುದೀರ್ಘ 8 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಬೆಳಗಾವಿ ಮಾದರಿಯಲ್ಲಿ ಮೊದಲ ಹಂತದಲ್ಲಿ ಟನ್‌ಗೆ 3600 ರೂ.ಗೆ ನೀಡುವ ಬಗ್ಗೆ ಪ್ರಸ್ತಾಪಿಸಿದರೂ ಅದಕ್ಕೆ ರೈತ ಮುಖಂಡರು ಒಪ್ಪಲಿಲ್ಲ.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಕಬ್ಬು ಬೆಳೆಯುವ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರ ಅಹವಾಲುಗಳನ್ನು ಸಚಿವರು ಸುದೀರ್ಘವಾಗಿ ಆಲಿಸಿದರು. ರೈತರು ಹಾಗೂ ಕಾರ್ಖಾನೆಗಳ ನಡುವೆ ಉಂಟಾಗಿದ್ದ ದರದ ವಿಚಾರ ಸೇರಿವಿವಿಧ ಸಮಸ್ಯೆಗಳ ಕುರಿತು ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಚರ್ಚೆಯ ಬಳಿಕ ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿರುವ ದರಕ್ಕೆ ರೈತರು ಹಾಗೂ ಸಕ್ಕರೆ ಕಾರ್ಖಾನೆ ಮಾಲಿಕರು ಬದ್ದರಾಗಿ ಕಾರ್ಖಾನೆ ಪ್ರಾರಂಭಿಸಲು ಸಚಿವರು ಮನವಿ ಮಾಡಿಕೊಂಡರು.

ನಿಗದಿಪಡಿಸಿದ ದರದಂತೆ ಕಬ್ಬು ಖರೀದಿ ಹಾಗೂ ಪಾವತಿ ಮಾಡುವುದಾಗಿ ಕಾರ್ಖಾನೆಗಳು ಲಿಖಿತ ರೂಪದಲ್ಲಿ ಜಿಲ್ಲಾಡಳಿತಕ್ಕೆ ಪತ್ರ ನೀಡಬೇಕು. ಬಳಿಕ ಯಾವುದೇ ವಿಳಂಬ ಮಾಡದೇ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಬೇಕು. ಹೊಸ ಹಂಗಾಮು ಆರಂಭವಾಗುವ ಮೊದಲು ಪ್ರಸ್ತುತ ದರಕ್ಕಿಂತ ಹೆಚ್ಚಾದಲ್ಲಿ ಹೆಚ್ಚುವರಿ ಆದಾಯದ ಮೇಲೆ ಶೇ.75ರಷ್ಟು ರೈತರಿಗೆ ಹಾಗೂ ಶೇ.25ರಷ್ಟು ಕಾರ್ಖಾನೆಗಳಿಗೆ ಲಾಭಾಂಶ ವಿತರಣೆ ಮಾಡುವಂತೆ ಕಾರ್ಖಾನೆಗಳಿಗೆ ಸಚಿವರು ಸೂಚಿಸಿದರು.

ಬರಗಾಲ ಮತ್ತು ನೀರಿನ ಕೊರೆತೆಯಿಂದ ಕಬ್ಬಿನ ಇಳುವಳಿ ಹಾಗೂ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನಲೆಯಲ್ಲಿ ರೈತರಿಗೆ ಹೆಚ್ಚಿನ ನಷ್ಟವಾಗದಂತೆ ನಿಗದಿತ ಸಮಯದಲ್ಲಿ ಕಬ್ಬು ನುರಿಸುವ ಕಾರ್ಯ ಆರಂಭಿಸುವುದು ಅಗತ್ಯವಾಗಿದೆ ಎಂದರು.

ಪ್ರಸಕ್ತ ಕಬ್ಬು ಹಂಗಾಮು ಪ್ರಾರಂಭವಾಗುವ ಮುನ್ನವೇ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿದೆ. ರೈತರಿಗೆ ನೀಡಬೇಕಾಗಿದ್ದ ಬಾಕಿ ಹಣವನ್ನು ಕೊಡಿವು ನಿಟ್ಟಿನಲ್ಲಿಯೂ ಅಗತ್ಯ ಕ್ರಮಕೈಗೊಳ್ಳಲಾಗಿದೆ. ರಾಜ್ಯ ಸರಕಾರ ರೈತರ ಹಿತಾಸಕ್ತಿಯನ್ನು ಕಾಪಾಡಲು ಬದ್ದವಾಗಿದೆ. ರೈತರು ಹಾಗೂ ಕಾರ್ಖಾನೆ ಮಾಲಿಕರ ನಡುವೆ ಸಮನ್ವಯ ಸಾಸುವ ಮೂಲಕ ಕಬ್ಬು ಹಂಗಾಮು ಸುಗಮವಾಗಿ ನಡೆಯುವಂತೆ ಎಲ್ಲರೂ ಸಹಕರಿಸಬೇಕು. ನಿಗದಿಪಡಿಸಿದ ದರಕ್ಕೆ ಎರಡು ಕಡೆಯವರು ಬದ್ದರಾಗಿ, ಕಾರ್ಖಾನೆಗಳನ್ನು ಶೀಘ್ರವಾಗಿ ಆರಂಭಿಸುವ ಮೂಲಕ ರೈತರ ಹಿತ ಕಾಪಾಡಬೇಕು ಎಂದರು.

ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ ಎಂ. ಇತರೆ ಅಧಿಕಾರಿಗಳು, ರೈತ ಮುಖಂಡರು, ಸಕ್ಕರೆ ಕಾರ್ಖಾನೆ ಮಾಲಿಕರು ಉಪಸ್ಥಿತರಿದ್ದರು.