ಮುಧೋಳ ನಗರದ ಪ್ರವಾಸಿ ಮಂದಿರದಲ್ಲಿ ರೈತ ಮುಖಂಡರ ಸಭೆ ನಡೆಯಿತು. ಮುಖಂಡರಾದ ಸುಭಾಷ ಶಿರಬೂರ, ಮುತ್ತಪ್ಪ ಕೋಮಾರ, ದುಂಡಪ್ಪ ಯರಗಟ್ಟಿ, ಹನಮಂತ ನವಾಬ ಪಾಲ್ಗೊಂಡಿದ್ದರು.
- ಸಮೀರವಾಡಿ ಕಾರ್ಖಾನೆ ಬಳಿ ಕಬ್ಬಿಗೆ ಬೆಂಕಿ ಹಚ್ಚಿದ ಪ್ರಕರಣ
- ವಿಚಾರಣೆಗಾಗಿ ಮತ್ತೆ 10 ಜನರು ವಶಕ್ಕೆ
- ಕಿಡಿಗೇಡಿಗಳ ಕೃತ್ಯವೆಂದ ಎಸ್‌ಪಿ
ಬಾಗಲಕೋಟೆ: ಕಬ್ಬಿಗೆ ದರ ನಿಗದಿ ವಿಚಾರವಾಗಿ ನ. 13ರಂದು ಸಂಜೆ ಸೈದಾಪುರದ ಸಮೀರವಾಡಿ ಸಕ್ಕರೆ ಕಾರ್ಖಾನೆ ಬಳಿ ನಡೆದಿದ್ದ ಗದ್ದಲ, ಗಲಾಟೆ, ಕಲ್ಲು ತೂರಾಟ, ಕಬ್ಬಿಗೆ ಬೆಂಕಿ ಹಚ್ಚಿದ್ದ ಘಟನೆಗೆ ಸಂಬಂಧಿಸಿದಂತೆ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಎರಡು ಪ್ರಕರಣಗಳಲ್ಲಿ ಇಲಾಖೆಯ ಪಿಎಸ್‌ಐಗಳು ಎಫ್‌ಐಆರ್ ಮಾಡಿಸಿದ್ದರೆ, ಮತ್ತೊಂದು ಎಫ್‌ಐಆರ್ ಕಾರ್ಖಾನೆ ಕಡೆಯಿಂದ ಆಗಿದೆ.
ಒಂದು ಎಫ್‌ಐಆರ್‌ನಲ್ಲಿ ಮುಧೋಳದಿಂದ ಕಾರ್ಖಾನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ತೆರಳಿದ್ದವರ ಪೈಕಿ 17 ಜನರ ಹೆಸರು ಉಲ್ಲೇಖಿಸಿ ದೂರು ದಾಖಲಿಸಿದ್ದಾರೆ. ಕಲ್ಲು ತೂರಾಟ ತಡೆಯಲು ಯತ್ನಿಸಿದರೂ ಪೊಲೀಸರನ್ನು ತಳ್ಳಾಡಿ ಗಲಾಟೆ ಮಾಡಿದರು. ಈ ವೇಳೆ ಎಎಸ್ಪಿ ಮಹಾಂತೇಶ್ವರ ಜಿದ್ದಿ ಸೇರಿದಂತೆ ಕೆಲ ಪೊಲೀಸರು, ಜನರಿಗೂ ಗಾಯಗಳಾಗಿವೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲೇ ಬೆಂಕಿ ಹಚ್ಚಿದ್ದರಿಂದ ಕಬ್ಬು ತುಂಬಿದ ಟ್ರ್ಯಾಕ್ಟರ್, ಬೈಕ್‌ಗಳು ಸುಟ್ಟು ಹೋಗಿವೆ. ಕಲ್ಲು ತೂರಾಟದಲ್ಲಿ ಸರ್ಕಾರಿ ವಾಹನಗಳಿಗೂ ನಷ್ಟ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಧರಣಿಯ ನೇತೃತ್ವ ವಹಿಸಿದ್ದ ಬಸವಂತಪ್ಪ ಕಾಂಬಳೆ, ಸುಭಾಸ ಶಿರಬೂರ, ಮುತ್ತಪ್ಪ ಕೋಮಾರ, ಈರಪ್ಪ ಹಂಚಿನಾಳ ಸೇರಿ ಒಟ್ಟು 17 ಜನರ ಮೇಲೆ ಎಫ್‌ಐಆರ್ ಆಗಿದೆ.
ಮತ್ತೊಂದು ದೂರಿನಲ್ಲಿ ಕಾರ್ಖಾನೆ ಪರವಾಗಿದ್ದ 150 ಜನರ ಗುಂಪು ಸೇರಿ ಮುಧೋಳದಿಂದ ಬಂದಿದ್ದ ರೈತರ ಗುಂಪಿನ ಮೇಲೆ ಕಲ್ಲು ಎಸೆದಿದ್ದಾರೆ. ಇಲ್ಲಿಯೂ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಜನರಿಗೆ ಗಾಯಗಳಾಗಿವೆ. ಇಲ್ಲಿ ಐವರು ಪ್ರಮುಖ ಆರೋಪಿಗಳ ಹೆಸರು ಉಲ್ಲೇಖಿಸಿ ಇತರ 150 ಜನರ ಕೂಟ ಸೇರಿ ಮುಧೋಳದ ರೈತರ ವಿರುದ್ಧ ಈ ಗಲಾಟೆ ನಡೆಸಿದ್ದಾರೆ. ಇದರಿಂದ ಸರ್ಕಾರಿ ವಾಹನಗಳಿಗೂ ಲಾಸ್ ಮಾಡಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾರೆ. ಪ್ರಭು ತಂಬೂರಿ, ಯಂಕಪ್ಪ ಕೇದಾರಿ, ವಿಠಲ ಹೊಸಮನಿ, ದಸ್ತಗಿರಿಸಾಬ ನದಾಫ್, ಶಿವಲಿಂಗ ಶಿಂಧೆ ಸೇರಿ 150 ಜನರು ಎಂದು ಉಲ್ಲೇಖಿಸಿದ್ದಾರೆ.
ಮೂರನೇ ದೂರಿನಲ್ಲಿ ಕಾರ್ಖಾನೆ ಆವರಣದಲ್ಲಿ ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಹಚ್ಚಿದ್ದ ಬೆಂಕಿ ಆರಿಸಲು ಹೊರಟಿದ್ದ ಅಗ್ನಿಶಾಮಕ ವಾಹನ ಹಾಗೂ ಕಾರ್ಖಾನೆ ಕೇನ್ ಯಾರ್ಡ್ ಗೇಟ್ ನಿಲ್ಲಿಸಿದ್ದ ಕಾರ್ಖಾನೆಗೆ ಸಂಬಂಧಿಸಿದ ದ್ವಿಚಕ್ರ ವಾಹನಕ್ಕೆ ಕಲ್ಲು ಹೊಗೆದು ಡ್ಯಾಮೇಜ್ ಮಾಡಿದ್ದಾರೆ. ಇಲ್ಲಿ 100 ರಿಂದ 150 ಜನರು ಸೇರಿ ಈ ಕೃತ್ಯ ಎಸೆಗಿದ್ದಾರೆಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.
ಜಿಎಲ್‌ಬಿಸಿ ಐಬಿಯಲ್ಲಿ ಸಭೆ
ಮುಧೋಳದ ಧರಣಿ ನಿರತ ಮುಖಂಡರ ಮೇಲೆ ಎಫ್‌ಐಆರ್ ಆಗಿದ್ದನ್ನು ಖಂಡಿಸಿ ಕಬ್ಬು ಬೆಳೆಗಾರರ ಮುಖಂಡರು ಮುಧೋಳದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿಯ ಜಿಎಲ್‌ಬಿಸಿ ಐಬಿ ಆವರಣದಲ್ಲಿ ಭಾನುವಾರ ಸಭೆ ನಡೆಸಿದರು.
ಬೆಂಕಿ ಹಚ್ಚಿದ್ದು ರೈತರಲ್ಲ ಕಿಡಿಗೇಡಿಗಳು ಎಂದು ಸಚಿವರು, ಅಧಿಕಾರಿಗಳು ಸ್ಪಷ್ಟವಾಗಿಯೇ ಹೇಳಿದ್ದರು. ಮುಧೋಳದ ರೈತರು ಕಾರ್ಖಾನೆ ತಲುಪುವ ಮುಂಚೆಯೇ ಅಲ್ಲಿಯೇ ಗಲಾಟೆ, ಕಲ್ಲು ತೂರಾಟ ಮಾಡಿದ್ದರು. ಇದೀಗ ಮುಧೋಳದ ರೈತರ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಂಧನ ಮಾಡಿರುವ ರೈತರನ್ನು ತಕ್ಷಣಕ್ಕೆ ಬಿಡುಗಡೆ ಮಾಡದಿದ್ದರೇ ಜೈಲ್ ಬರೋ ಚಳವಳಿಯ ಭಾಗವಾಗಿ ಎಲ್ಲ ರೈತರು ಜೈಲಿಗೆ ಹೋಗಲು ಸಿದ್ಧರಿದ್ದೇವೆ ಎಂದು ಎಚ್ಚರಿಸಿದರು.
ವಿಚಾರಣೆಗಾಗಿ ವಶಕ್ಕೆ
ಸಮೀರವಾಡಿ ಕಾರ್ಖಾನೆ ಬಳಿ ನಡೆದಿದ್ದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಒಟ್ಟು ಮೂರು ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಿಸಿದಂತೆ ಶನಿವಾರ 9 ಜನರು ಹಾಗೂ ಭಾನುವಾರ 10 ಜನರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಹೇಳಿದರು.
ಇಡೀ ಘಟನೆಗೆ ಸಂಬಂಧಿಸಿದಂತೆ ಸಾಕಷ್ಟು ವಿಡಿಯೋ ಫೂಟೇಜ್‌ಗಳನ್ನು ಸಂಗ್ರಹಿಸಿದ್ದೇವೆ. ಇದು ರೈತರು ಮಾಡಿರುವ ಕೃತ್ಯವಲ್ಲ. ಕಿಡಿಗೇಡಿಗಳು ಮಾಡಿರುವ ಕೃತ್ಯ. ವಿಚಾರಣೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದೇವೆ. ಯಾರು ತಪ್ಪಿತಸ್ಥರೋ ಅವರ ಮೇಲೆ ಕ್ರಮ ಆಗಲಿದೆ ಎಂದರು.
ಎರಡು ಕೇಸ್‌ನಲ್ಲಿ ನಮ್ಮ ಪಿಎಸ್‌ಐಗಳು ಎಫ್‌ಐಆರ್ ಮಾಡಿಸಿದ್ದಾರೆ. ಮತ್ತೊಂದು ಕಾರ್ಖಾನೆ ಕಡೆಯಿಂದ ಆಗಿದೆ. ಪಿಎಸ್‌ಐ ಅವರಿಗೆ ಯಾರ ಮೇಲೆ ಅನುಮಾನವಿದೆ ಅವರ ಹೆಸರು ಹಾಕಿ ದೂರು ನೀಡಿರುತ್ತಾರೆ. ಆದರೆ, ಇದೇ ಅಂತಿಮವಲ್ಲ. ಈಗಾಗಲೇ ತನಿಖೆ ನಡೆಯುತ್ತಿದೆ. ವಿಡಿಯೋ ಫೂಟೇಜ್ ಸಂಗ್ರಹಿಸಿದ್ದು, ಇನ್ನಷ್ಟು ಸಂಗ್ರಹ ಮಾಡಲಿದ್ದೇವೆ ಎಂದು ಹೇಳಿದರು.
ನಮ್ಮ ಬಾಗಲಕೋಟೆ ರೈತರು ಈ ತರಹದ ಕೃತ್ಯ ಯಾರೂ ಮಾಡಲ್ಲ. ಇದು ಕಿಡಿಗೇಡಿಗಳ ಕೃತ್ಯವಾಗಿದೆ. ಅವರನ್ನು ಮಾಬ್ನಿಂದ ಗುರುತಿಸಬೇಕಾಗಿದೆ. ಯಾರು ಘಟನೆ ಮಾಡಿದ್ದಾರೆ ಅವರನ್ನು ಗುರುತಿಸಿ ವಿಚಾರಣೆ ಆರಂಭಿಸಿದ್ದೇವೆ. ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಕ್ರಮ ಆಗುತ್ತದೆ. ಇಲ್ಲಿ ತನಿಖೆಯಲ್ಲಿ ಎಲ್ಲ ಆಯಾಮಗಳಿಂದ, ವೈಜ್ಞಾನಿಕವಾಗಿ ತನಿಖೆ ಮಾಡಲಾಗುತ್ತದೆ ಎಂದು ಎಸ್ಪಿ ಸಿದ್ಧಾರ್ಥ ಗೋಯಲ್ ತಿಳಿಸಿದರು.